ಬೀದರ್: ಇಲ್ಲಿನ ಮೈಲೂರಿನಲ್ಲಿ ಇರುವ ಸರ್ಕಾರಿ ಕನ್ನಡ ಮತ್ತು ಉರ್ದು ಪ್ರಾಥಮಿಕ, ಪ್ರೌಢಶಾಲೆಯು ಸೌಕರ್ಯ ಕೊರತೆ ಎದುರಿಸುತ್ತಿದೆ. ಶಾಲೆ ಸುತ್ತಮುತ್ತ ತ್ಯಾಜ್ಯ ಸಂಗ್ರಹಗೊಂಡಿದ್ದು, ದುರ್ನಾತ ಬೀರುತ್ತಿದೆ. ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು ತೊಂದರೆ ಎದುರಿಸುವಂತಾಗಿದೆ.
ಇಲ್ಲಿ ಒಟ್ಟು 600 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಾರೆ. ಬೆಳಿಗ್ಗೆ 7.30ರಿಂದ 12.30ರವರೆಗೆ ಕನ್ನಡ ಮಾಧ್ಯಮದ ತರಗತಿಗಳು ನಡೆದರೆ, ಮಧ್ಯಾಹ್ನ 12.30 ರಿಂದ 5.30ರವರೆಗೆ ಉರ್ದು ತರಗತಿಗಳು ನಡೆಯುತ್ತವೆ.
‘ಹಲವು ವರ್ಷಗಳಿಂದ ಶಾಲೆಯು ಈ ಸಮಸ್ಯೆ ಎದುರಿಸುತ್ತಿದ್ದು, ಈವರೆಗೆ ಪರಿಹಾರಗೊಂಡಿಲ್ಲ. ವಿದ್ಯಾರ್ಥಿನಿಯರಿಗೆ ಸೂಕ್ತ ರೀತಿಯ ಶೌಚಾಲಯ ವ್ಯವಸ್ಥೆಯಿಲ್ಲ. ಸೌಕರ್ಯಗಳ ಕೊರತೆ ಪರಿಣಾಮ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿದೆ. ಶಾಲೆ ಸುತ್ತಮುತ್ತ ಅಶುದ್ಧ ವಾತಾವರಣ ಇರುವ ಕಾರಣ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಾರೆ’ ಎಂದು ಗ್ರಾಮಸ್ಥರು ತಿಳಿಸಿದರು.
‘ಶಾಲೆಯ ಸ್ಥಿತಿಗತಿ ಮತ್ತು ಸಮಸ್ಯೆಗಳ ಬಗ್ಗೆ ಈಗಾಲೇ ಹಲವು ಬಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ಮೈಲೂರಿನ ನಿವಾಸಿಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.