ADVERTISEMENT

ಬೀದರ್‌: ಕೆರೆಯ ಏರಿ ಮೇಲೊಂದು ‘ವಾಕಿಂಗ್‌ ಟ್ರ್ಯಾಕ್‌’

₹1 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ, ಸುಸಜ್ಜಿತ ವಾಕಿಂಗ್‌ ಟ್ರ್ಯಾಕ್‌ ನಿರ್ಮಾಣ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 24 ಜುಲೈ 2025, 4:48 IST
Last Updated 24 ಜುಲೈ 2025, 4:48 IST
ಬೀದರ್‌ ತಾಲ್ಲೂಕಿನ ಮನ್ನಳ್ಳಿ ಕೆರೆ ಏರಿಗುಂಟ ಫೆನ್ಸಿಂಗ್‌ ಮಾಡಿ ವಾಕಿಂಗ್‌ ಪಥ ನಿರ್ಮಿಸಿರುವುದು
ಬೀದರ್‌ ತಾಲ್ಲೂಕಿನ ಮನ್ನಳ್ಳಿ ಕೆರೆ ಏರಿಗುಂಟ ಫೆನ್ಸಿಂಗ್‌ ಮಾಡಿ ವಾಕಿಂಗ್‌ ಪಥ ನಿರ್ಮಿಸಿರುವುದು   

ಬೀದರ್‌: ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಕೆರೆಯೀಗ ಆಕರ್ಷಣೆಯ ಕೇಂದ್ರವಾಗಿ ಬದಲಾಗಿದೆ.

ಕೆರೆಯ ಏರಿ ಮೇಲೆ ಸುಸಜ್ಜಿತವಾದ ‘ವಾಕಿಂಗ್‌ ಟ್ರ್ಯಾಕ್‌’ ನಿರ್ಮಿಸಲಾಗಿದ್ದು, ಎಲ್ಲರ ಗಮನ ತನ್ನತ್ತ ಸೆಳೆಯುವಂತೆ ಮಾಡುತ್ತಿದೆ.

ಗ್ರಾಮಸ್ಥರು ನಿತ್ಯ ಇದೇ ಕೆರೆಯ ಟ್ರ್ಯಾಕ್‌ ಮೇಲೆ ವಾಕ್‌ ಮಾಡುತ್ತಿದ್ದಾರೆ. ಸುತ್ತಮುತ್ತಲಿನ ಗ್ರಾಮದ ಜನರು ಇಲ್ಲಿಗೆ ಬಂದು ಕಾಲ ಕಳೆದು ಹೋಗುತ್ತಿದ್ದಾರೆ. ಒಂದರ್ಥದಲ್ಲಿ ‘ಪಿಕ್‌ನಿಕ್‌ ಸ್ಪಾಟ್‌’ ಆಗಿ ಬದಲಾಗಿದೆ. ಈ ರಸ್ತೆಯ ಮೂಲಕ ಹಾದು ಹೋಗುವವರೆಲ್ಲ ಕೆಲಹೊತ್ತು ಇಲ್ಲಿಗೆ ಹೋಗಿ ಹಸಿರಿನ ಸೊಬಗು ಕಣ್ತುಂಬಿಕೊಳ್ಳುತ್ತಿದ್ದಾರೆ. ಯುವಕ,ಯುವತಿಯರ ನೆಚ್ಚಿನ ಸೆಲ್ಫಿ ಪಾಯಿಂಟ್‌ ಕೂಡ ಆಗಿದೆ. ಹವ್ಯಾಸಿ ಛಾಯಾಗ್ರಾಹಕರು ಇಲ್ಲಿಗೆ ಭೇಟಿ ಕೊಡುತ್ತಿದ್ದಾರೆ. ವಿವಿಧ ಬಗೆಯ ಪಕ್ಷಿಗಳು ಇಲ್ಲಿಗೆ ಲಗ್ಗೆ ಇಡುತ್ತಿದ್ದು, ಅವುಗಳನ್ನು ಸೆರೆ ಹಿಡಿಯುತ್ತಿದ್ದಾರೆ.

ADVERTISEMENT

ಸಣ್ಣ ನೀರಾವರಿ ಇಲಾಖೆ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಗೆ ಸೇರಿದ ಈ ಸಣ್ಣ ಕೆರೆಯು 20 ಹೆಕ್ಟೇರ್‌ ಪ್ರದೇಶದಲ್ಲಿ ಹರಡಿಕೊಂಡಿದೆ. ‘ಯು’ ಆಕಾರದಲ್ಲಿ ಕೆರೆಯ ಸುತ್ತ ವಾಕಿಂಗ್‌ ಪಥ ನಿರ್ಮಿಸಲಾಗಿದೆ. ಏರಿ ಮೇಲಿನ ವಾಕಿಂಗ್‌ ಟ್ರ್ಯಾಕ್‌ನ ಎರಡು ಬದಿಯಲ್ಲಿಯೂ ಫೆನ್ಸಿಂಗ್‌ ಮಾಡಿರುವುದು ವಿಶೇಷ. ಕೆರೆಗೆ ಸೇರಿದ ಜಾಗದ ರಕ್ಷಣೆಯ ಜೊತೆಗೆ ವಾಕಿಂಗ್‌ ಮಾಡುವವರಿಗೆ ಯಾವುದೇ ರೀತಿಯ ಅಪಾಯ ಎದುರಾಗದಿರಲಿ, ಯಾರು ಕೂಡ ನೀರಿಗೆ ಇಳಿಯದಿರಲಿ ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗಿದೆ.

ನರೇಗಾ ಯೋಜನೆಯ ಅಡಿಯಲ್ಲಿ ಸಣ್ಣ ನೀರಾವರಿ ಇಲಾಖೆಯು ಈ ಕೆರೆ ಅಭಿವೃದ್ಧಿಪಡಿಸಿದೆ. ಕೆರೆಯ ಹೂಳು ತೆಗೆಸಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಸುತ್ತಮುತ್ತಲಿನ ರೈತರಿಗೆ ಇದರಿಂದ ಪ್ರಯೋಜನವಾಗಿದೆ.

‘ನಿಜಕ್ಕೂ ಕೆರೆಯ ಸುತ್ತಲೂ ವಾಕಿಂಗ್‌ ಟ್ರ್ಯಾಕ್‌ ನಿರ್ಮಿಸಿ, ಫೆನ್ಸಿಂಗ್‌ ಮಾಡಿರುವುದರಿಂದ ಅದಕ್ಕೆ ವಿಶೇಷ ಕಳೆ ಬಂದಿದೆ. ಗ್ರಾಮದಿಂದ ಸ್ವಲ್ಪ ದೂರದಲ್ಲಿ ಇರುವುದರಿಂದ ಪರಿಸರವೂ ಉತ್ತಮವಾಗಿದೆ. ಮುಖ್ಯರಸ್ತೆಗೆ ಹೊಂದಿಕೊಂಡಂತೆ ಇರುವುದರಿಂದ ಪ್ರತಿಯೊಬ್ಬರ ಗಮನ ಆ ಕಡೆಗೆ ಹೋಗುತ್ತಿದೆ. ಎಲ್ಲ ಕಡೆಗಳಲ್ಲಿ ಇದೇ ರೀತಿ ಅಭಿವೃದ್ಧಿ ಪಡಿಸಿದರೆ ಜನರಿಗೆ ಅನುಕೂಲವಾಗುತ್ತದೆ’ ಎಂದು ವಿದ್ಯಾರ್ಥಿ ಬಸವರಾಜ ಅಭಿಪ್ರಾಯ ಪಟ್ಟಿದ್ದಾರೆ.

ಅಭಿವೃದ್ಧಿಗೆ ಬಲ ತುಂಬಿದ ನರೇಗಾ | ಇಂಗ್ಲಿಷ್‌ನ ‘ಯು’ ಆಕಾರದಲ್ಲಿ ನಡಿಗೆ| ಪಥ ಕೆರೆ ರಕ್ಷಣೆಗೆ ತಂತಿಬೇಲಿ
700 ಮಾನವ ದಿನಗಳಲ್ಲಿ ಈ ಕೆರೆ ಅಭಿವೃದ್ಧಿ ಪಡಿಸಲಾಗಿದೆ. ಇದರಿಂದ ಈಗಲೂ ನೀರಿನ ಮಟ್ಟ ಸುಧಾರಣೆ ಕಾಣುತ್ತಿದೆ. ಬರುವ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಪಡಿಸುವ ಚಿಂತನೆ ಇದೆ
ಡಾ.ಗಿರೀಶ್ ಬದೋಲೆ ಬೀದರ್‌ ಜಿ.ಪಂ. ಸಿಇಒ
ಬೇಸಿಗೆಯಲ್ಲಿ ಕೆರೆಯಲ್ಲಿ ನೀರು ಇಳಿಮುಖಗೊಂಡ ನಂತರ ಸಣ್ಣ ನೀರಾವರಿ ಇಲಾಖೆಯಿಂದ ನರೇಗಾ ಅಡಿಯಲ್ಲಿ ಇನ್ನಷ್ಟು ಹೂಳು ತೆಗೆಸಲಾಗುವುದು. ಕೆರೆಯಲ್ಲಿ ನೀರಿನ ಸಂಗ್ರಹ ಪ್ರಮಾಣ ಹೆಚ್ಚಾಗಲಿದೆ
ಮಾಣಿಕರಾವ್ ಪಾಟೀಲ್‌ ಬೀದರ್‌ ತಾಲ್ಲೂಕು ಪಂಚಾಯಿತಿ ಬೀದರ್‌ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.