ADVERTISEMENT

ಮಾನ, ಮರ್ಯಾದೆ ಇದ್ದರೆ ಮಾದಿಗ ಸಚಿವರು ರಾಜೀನಾಮೆ ಕೊಡಲಿ: ಫರ್ನಾಂಡಿಸ್

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 11:35 IST
Last Updated 27 ಜುಲೈ 2025, 11:35 IST
   

ಬೀದರ್: 'ಮಾದಿಗ ಸಮುದಾಯದ ಸಚಿವರಿಗೆ ಮಾನ, ಮರ್ಯಾದೆ ಇದ್ದರೆ ಸಚಿವ ಸ್ಥಾನ ತೊರೆದು, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಹೊರ ಬರಬೇಕು' ಎಂದು ಮಾದಿಗ ಸಂಘಟನೆಗಳ ಒಕ್ಕೂಟದ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್ ಆಗ್ರಹಿಸಿದರು.

ಒಳಮೀಸಲಾತಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಚ್ಛಾಶಕ್ತಿ ಇಲ್ಲ. ರಾಜ್ಯ ಸರ್ಕಾರ ಅನೇಕ ಭರವಸೆಗಳನ್ನು ಕೊಟ್ಟು ಕಾಲಹರಣ ಮಾಡುತ್ತಿದೆ. ಸಚಿವ ಎಚ್.ಸಿ.ಮಹದೇವಪ್ಪ ಅವರು ಹೇಳಿದಂತೆ ಸಿದ್ದರಾಮಯ್ಯ ನಡೆದುಕೊಳ್ಳುತ್ತಿದ್ದಾರೆ. ಮಾದಿಗ ಸಮುದಾಯದ ಸಚಿವರು ಸುಮ್ಮನಿರುವುದರ ಬದಲು ಅಧಿಕಾರ ತ್ಯಜಿಸಿ ಹೊರ ಬರಬೇಕೆಂದು ನಗರದಲ್ಲಿ ಭಾನುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಆಯಾ ರಾಜ್ಯದ ದತ್ತಾಂಶ ಆಧರಿಸಿ ಒಳಮೀಸಲಾತಿ ಜಾರಿಗೆ ತರಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿ ಒಂದು ವರ್ಷವಾಗುತ್ತ ಬಂದಿದೆ. ಆದರೆ, ರಾಜ್ಯ ಸರ್ಕಾರ ಅನಗತ್ಯ ಕಾಲಹರಣ ಮಾಡುತ್ತಿದೆ. ಜಾತಿಗಣತಿ ಕೂಡ ರಾಜ್ಯದಲ್ಲಿ ಸಮರ್ಪಕವಾಗಿ ನಡೆದಿಲ್ಲ‌. ಕೆಲವು ಕಡೆ ಶೇ 70ರಿಂದ 80ರಷ್ಟು ಸಮೀಕ್ಷೆ ನಡೆದರೆ, ರಾಜಧಾನಿ ಬೆಂಗಳೂರಿನಲ್ಲೇ ಶೇ 40ರ ಗಡಿ ದಾಟಿಲ್ಲ ಎಂದು ಆರೋಪಿಸಿದರು.

ADVERTISEMENT

ಸರ್ಕಾರದ ಧೋರಣೆ ಬೇಸತ್ತು ಆಗಸ್ಟ್ 1ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅರೆಬೆತ್ತಲೆ ಮೆರವಣಿಗೆ ಮಾಡಿ, ರಾಜ್ಯ ಸರ್ಕಾರದ ಶವಯಾತ್ರೆ ಮಾಡಿ ವಿರೋಧ ದಾಖಲಿಸಲಾಗುವುದು. ಬೀದರ್ ನಲ್ಲಿ ಬೆಳಿಗ್ಗೆ 11ಕ್ಕೆ ನಡೆಯಲಿರುವ ಹೋರಾಟದಲ್ಲಿ ಮಾದಿಗ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಒಕ್ಕೂಟದ ಪ್ರಮುಖರಾದ ಕಮಲಾಕರ ಹೆಗಡೆ, ವಿಶಾಲ್ ಜೋಶಿ, ಜೈಶೀಲ್ ಮೇತ್ರೆ, ವೀರಶೆಟ್ಟಿ, ಸಿದ್ರಾಮ, ಹರೀಶ್, ದಯಾನಂದ ರೇಕುಳಗಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.