ADVERTISEMENT

ಬಸವಕಲ್ಯಾಣ: ಸಾಮರಸ್ಯದ ತಾಣ ಮಾಚಿದೇವ ದೇವಸ್ಥಾನ

ತ್ರಿಪುರಾಂತ ಕೆರೆ ದಂಡೆಯಲ್ಲಿ ಜಾತ್ರೆ ಸಡಗರ: ಪಲ್ಲಕ್ಕಿ ಮೆರವಣಿಗೆ ಇಂದು

ಮಾಣಿಕ ಆರ್ ಭುರೆ
Published 14 ಜನವರಿ 2025, 5:11 IST
Last Updated 14 ಜನವರಿ 2025, 5:11 IST
<div class="paragraphs"><p>ಬಸವಕಲ್ಯಾಣದ ತ್ರಿಪುರಾಂತದಲ್ಲಿ ಮಡಿವಾಳ ಮಾಚಿದೇವರ ಜಾತ್ರೆ ಅಂಗವಾಗಿ ಸೋಮವಾರ ನಡೆದ ಬೈಕ್ ಜಾಥಾ ಹಾಗೂ ಮಾಚಿದೇವರ ಚಿತ್ರದ ಮೆರವಣಿಗೆಗೆ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಚಾಲನೆ ನೀಡಿದರು</p></div>

ಬಸವಕಲ್ಯಾಣದ ತ್ರಿಪುರಾಂತದಲ್ಲಿ ಮಡಿವಾಳ ಮಾಚಿದೇವರ ಜಾತ್ರೆ ಅಂಗವಾಗಿ ಸೋಮವಾರ ನಡೆದ ಬೈಕ್ ಜಾಥಾ ಹಾಗೂ ಮಾಚಿದೇವರ ಚಿತ್ರದ ಮೆರವಣಿಗೆಗೆ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಚಾಲನೆ ನೀಡಿದರು

   

ಬಸವಕಲ್ಯಾಣ: ಮಕರ ಸಂಕ್ರಾಂತಿ ಬಂದರೆ ಸಾಕು ನಗರದ ತ್ರಿಪುರಾಂತ ಕೆರೆ ದಂಡೆಯಲ್ಲಿ ಸಂಭ್ರಮ ಮೇಳೈಸುತ್ತದೆ. ಅದಕ್ಕೆ ಕಾರಣ ಮಡಿವಾಳ ಮಾಚಿದೇವರ ಜಾತ್ರೆ.

ಮಡಿವಾಳ ಮಾಚಿದೇವರ ದೇವಸ್ಥಾನದ ಸಾಮರಸ್ಯದ ತಾಣ. ಹೀಗಾಗಿ ಜಾತ್ರೆ ಅಂಗವಾಗಿ ನಡೆಯುವ ಅಗ್ಗಿ ತುಳಿಯುವ ಕಾರ್ಯಕ್ರಮದಲ್ಲಿ ಜಾತಿ, ವರ್ಗ ಭೇದವಿಲ್ಲದೇ ಸಕಲರೂ ಪಾಲ್ಗೊಳ್ಳುತ್ತಾರೆ.

ADVERTISEMENT

ಬಸವಣ್ಣನವರು ಸಮಾನತೆಗಾಗಿ ಕ್ರಾಂತಿಗೈದರು. ಅವರ ಶರಣಗಣದಲ್ಲಿದ್ದ ಮಾಚಿದೇವರಿಗೆ ಅತ್ಯಂತ ಪ್ರಮುಖ ಸ್ಥಾನವಿತ್ತು. ಸಾಮಾಜಿಕ ಪರಿವರ್ತನೆಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ಅಂದಿನ ಅನೇಕ ಶರಣರ ವಚನಗಳ ಸಂರಕ್ಷಣೆಗೆ ಅವರು ಹೋರಾಡಿದ್ದರು. ಆದ್ದರಿಂದ ವೀರಗಣಾಚಾರಿ ಎಂದೇ ಅವರನ್ನು ಗುರುತಿಸಲಾಗುತ್ತದೆ. ಅವರು ತ್ರಿಪುರಾಂತ ಕೆರೆ ಮತ್ತು ಸಮೀಪದ ಹೊಂಡದಲ್ಲಿ ಬಟ್ಟೆ ಶುಚಿಗೊಳಿಸುವ ಕಾಯಕ ಕೈಗೊಂಡಿದ್ದರು. ಅದಕ್ಕಾಗಿಯೇ ಈ ಕೆರೆ ದಂಡೆಯಲ್ಲಿ ಪಲ್ಲಕ್ಕಿ ಕಟ್ಟೆ ಮತ್ತು ಅಗ್ನಿಕುಂಡ ನಿರ್ಮಿಸಿ  ನೂರಾರು ವರ್ಷಗಳಿಂದ ಜಾತ್ರೆ ಆಯೋಜಿಸುತ್ತ ಬರಲಾಗಿದೆ.

ಹೊಂಡಕ್ಕೆ ಮಾಚಿದೇವರ ಹೊಂಡವೆಂಬ ಹೆಸರಿದೆ. ಈ ಹೊಂಡ ನಡುವೆ ಪುರಾತನ ದೇವಸ್ಥಾನವಿತ್ತು. ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಅಲ್ಲಿ ಕೆಲ ವರ್ಷಗಳ ಹಿಂದೆ ಸುಂದರವಾದ ಹೊಸ ದೇವಸ್ಥಾನ ನಿರ್ಮಿಸಲಾಗಿದೆ. ಎದುರಿಗೆ ನಂದಿ ಮಂಟಪವಿದೆ. ಆವರಣದಲ್ಲಿ ಹಳೆಯ ಬಾವಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಹೊಂಡಕ್ಕೆ ತಡೆಗೋಡೆ ಕಟ್ಟಿ ಅದನ್ನು ಇನ್ನಷ್ಟು ಸುಂದರಗೊಳಿಸಲಾಗಿದ್ದು, ಭಕ್ತರೊಂದಿಗೆ ಪ್ರವಾಸಿಗರನ್ನೂ ಆಕರ್ಷಿಸುತ್ತಿದೆ.

ಜಾತ್ರೆ ಅಂಗವಾಗಿ ಭಕ್ತರು ಈ ದೇವಸ್ಥಾನದಲ್ಲಿ ಬರೀ ನೈವೇದ್ಯ, ತೆಂಗು ಅರ್ಪಿಸುತ್ತಾರೆ. ಆದರೆ, ಎಲ್ಲ ಧಾರ್ಮಿಕ ಚಟುವಟಿಕೆಗಳು ತ್ರಿಪುರಾಂತದಲ್ಲಿ ಹಾಗೂ ಕೆರೆ ದಂಡೆಯಲ್ಲಿ ನಡೆಯುತ್ತವೆ. ತ್ರಿಪುರಾಂತದ ಎರಡು ಪ್ರತ್ಯೇಕ ಮನೆಗಳಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಪಲ್ಲಕ್ಕಿ ಮೆರವಣಿಗೆಯಲ್ಲಿ ಈ ಎರಡೂ ಮೂರ್ತಿಗಳನ್ನು ಜೊತೆಯಲ್ಲಿಯೇ ಕೊಂಡೊಯ್ಯಲಾಗುತ್ತದೆ.

ಉತ್ಸವ ಮೂರ್ತಿಗಳಿಗೆ ಎಣ್ಣೆ ಹಚ್ಚುವುದರೊಂದಿಗೆ ಜಾತ್ರೆ ಚಾಲನೆ ಪಡೆಯುತ್ತದೆ. ವಾರದವರೆಗೆ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ತ್ರಿಪುರಾಂತ ಕೆರೆ ದಂಡೆಯಲ್ಲಿ ಅಗ್ನಿಪೂಜೆ ಮತ್ತು ಕೆಂಡ ಹಾಯುವುದರೊಂದಿಗೆ ಜಾತ್ರೆ ಸಂಪನ್ನಗೊಳ್ಳುತ್ತದೆ. ಜಾತ್ರೆಯ ಕೊನೆಯ ದಿನ ಕೆರೆ ದಂಡೆಯಲ್ಲಿ ಸಾವಿರಾರು ಭಕ್ತರು ಸೇರುವುದು ವಿಶೇಷ.

ಬಸವಕಲ್ಯಾಣದ ತ್ರಿಪುರಾಂತ ಕೆರೆ ದಂಡೆಯಲ್ಲಿನ ಪಲ್ಲಕ್ಕಿ ಕಟ್ಟೆ ಮತ್ತು ಅಗ್ನಿಕುಂಡ

ಬೈಕ್‌ ಮೆರವಣಿಗೆ

ಈ ಸಲ ಜಾತ್ರೆಯು ಜನವರಿ 13ರಿಂದ ಆರಂಭವಾಗಿದೆ. ಸೋಮವಾರ ನಗರದಲ್ಲಿ ಬೈಕ್‌ ಜಾಥಾ ಉದ್ಘಾಟನೆ ಮೂಲಕ ನಾಲ್ಕು ದಿನಗಳ ಜಾತ್ರೆಗೆ ಗವಿಮಠದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಚಾಲನೆ ನೀಡಿದ್ದಾರೆ. ಜನವರಿ 14 ರಂದು ರಾತ್ರಿ ಪಲ್ಲಕ್ಕಿ ಪೂಜೆ ಮತ್ತು ಶಲ್ಯ ಸುಡುವ ಕಾರ್ಯಕ್ರಮವಿದೆ. ಜ.15ರಂದು ರಾತ್ರಿ ನಾಟಕ ಮತ್ತಿತರೆ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ. ಜ.16ರಂದು ಬೆಳಿಗ್ಗೆ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಭಕ್ತರು ಕೆರೆ ದಂಡೆಗೆ ಬಂದು ಅಗ್ನಿಪೂಜೆ ನೆರವೇರಿಸುತ್ತಾರೆ. ಮಹಿಳೆ ಮಕ್ಕಳಾದಿಯಾಗಿ ಕೆಂಡ ಹಾಯುವುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.