ADVERTISEMENT

ಪಶುಮೇಳ ಯಶಸ್ವಿಗೊಳಿಸಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 10:39 IST
Last Updated 14 ಜನವರಿ 2020, 10:39 IST
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ರಾಜ್ಯಮಟ್ಟದ ಪಶುಮೇಳದ ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ರಾಜ್ಯಮಟ್ಟದ ಪಶುಮೇಳದ ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಮಾತನಾಡಿದರು.   

ಬೀದರ್‌: ‘ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಬೀದರ್‌ನಲ್ಲಿ ಫೆಬ್ರುವರಿ 7ರಿಂದ 9ರ ವರೆಗೆ ರಾಜ್ಯ ಮಟ್ಟದ ಪಶುಮೇಳವನ್ನು ಆಯೋಜಿಸಲಾಗಿದೆ. ಮೇಳದ ಯಶಸ್ವಿಗೆ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು‘ ಎಂದು ಸಚಿವ ಪ್ರಭು ಚವಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಸಚಿವರು ‘ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಮೇಳ ನಡೆಸುವುದು ಸೂಕ್ತ’ ಎಂದರು.

‘ಮೇಳವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು. ಉಪಮುಖ್ಯಮಂತ್ರಿ ಹಾಗೂ ಇತರ ಸಚಿವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು’ ಎಂದರು.

ADVERTISEMENT

‘ಪಶುಸಂಗೋಪನೆಯಲ್ಲಿ ಆದ ಹೊಸ ಸಂಶೋಧನೆಯನ್ನು ರೈತರಿಗೆ ಪರಿಚಯಿಸುವುದು, ಸಾಧನೆಗೈದ ರೈತರಿಂದ ಇತರೆ ರೈತರಿಗೆ ಪ್ರೇರಣೆ ನೀಡುವುದು, ನಿರುದ್ಯೋಗಿಗಳು ಪಶು ಸಂಗೋಪನೆಯಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡುವುದು, ಒಂದೇ ಸೂರಿನಡಿ ಇಲಾಖೆಯ ಯೋಜನೆ ಮತ್ತು ಸಾಧನೆಗಳ ಪರಿಚಯ ಮತ್ತು ಉಪಯುಕ್ತತೆಯ ಬಗ್ಗೆ ಮಾಹಿತಿ ನೀಡುವುದು. ವಿವಿಧ ಜಾನುವಾರು ತಳಿಗಳ ಹಾಗೂ ಕೋಳಿ ತಳಿಗಳ ಪ್ರದರ್ಶನ ಮತ್ತು ಅವುಗಳ ಉತ್ಪಾದಕತೆಯ ವೈಜ್ಞಾನಿಕ ಮಾಹಿತಿ ನೀಡುವುದು ಇದರ ಉದ್ದೇಶವಾಗಿದೆ’ ಎಂದು ತಿಳಿಸಿದರು.

‘90 ಜಾನುವಾರು ಪ್ರದರ್ಶನ ಮಳಿಗೆಗಳು ಹಾಗೂ 100 ವಾಣಿಜ್ಯ ಮಳಿಗೆಗಳು, ವಿವಿಧ ತಳಿಯ ಜಾನುವಾರುಗಳ ಪ್ರದರ್ಶನ ನಡೆಸಲಾಗುವುದು’.‘ಅಮೃತ ಮಹಲ್, ಹಳ್ಳಿಕಾರ್, ಖಿಲಾರಿ, ದೇವಣಿ, ಓಂಗೋಲ್, ಲ್ನಾಡ್ ಗಿಡ್ಡ, ಗಿರ್, ವಿದೇಶಿ ಜಾನುವಾರು ತಳಿಗಳಾದ ಹೆಚ್.ಎಫ್, ಜೆರ್ಸಿ ತಳಿಗಳು ಹಾಗೂ ಕುರಿ, ಮೇಕೆ, ಎಮ್ಮೆ, ಹಂದಿ, ದೇಶಿ ಕೋಳಿ ತಳಿಗಳು ಹೀಗೆ ಸುಮಾರು 400ರವರೆಗೆ ತಳಿಗಳ ಪ್ರದರ್ಶನ ಇರಲಿದೆ. ನೆರೆಯ ರಾಜ್ಯದ ರೈತರಿಗೂ ಪ್ರದರ್ಶನದ ವೀಕ್ಷಣೆಗೆ ಅನುಕೂಲ ಮಾಡಿಕೊಡಲಾಗುವುದು’ ಎಂದು ತಿಳಿಸಿದರು.

‘ಜಿಲ್ಲಾ ಪಂಚಾಯಿತಿ ಹಾಗೂ ರಾಜ್ಯವಲಯದ ವ್ಯಾಪ್ತಿಯ ಇಲಾಖೆಗಳು ಪ್ರದರ್ಶನ ಮಳಿಗೆಗಳನ್ನು ತೆರೆಯಬೇಕು. ಪಂಚಾಯತ್‌ ರಾಜ್‌ ಸಂಸ್ಥೆಗಳ ಪ್ರತಿನಿಧಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕ್ರಮ ವಹಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಸಿದರು.

‘ಪಶು ಮೇಳನದ ಬಗ್ಗೆ ಎಲ್ಲ ಗ್ರಾಮಗಳಲ್ಲಿ ಶಾಲಾ ಮಕ್ಕಳಿಂದ ಜಾಥಾ ನಡೆಸಿ ಜಾಗೃತಿ ಮೂಡಿಸಬೇಕು. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.

‘ಪಶು ಮೇಳದ ಸ್ಥಳದಲ್ಲಿತಾತ್ಕಾಲಿಕ ಶೌಚಾಲಯಗಳ ನಿರ್ಮಾಣ ಮಾಡಬೇಕು. ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕು’ ಎಂದು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.

ಸಚಿವರು ರಾಜ್ಯಮಟ್ಟದ ಪಶುಮೇಳದಬ್ಯಾನರ್, ಭಿತ್ತಿಪತ್ರ, ಕರಪತ್ರಗಳನ್ನು ಬಿಡುಗಡೆ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪೂರೆ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆಯುಕ್ತ ನಟೇಶ್, ನಿರ್ದೇಶಕ ಡಾ.ಎಂ.ಟಿ.ಮಂಜುನಾಥ, ಹೆಚ್ಚುವರಿ ನಿರ್ದೇಶಕ ಡಾ.ಮಂಜುನಾಥ ಪಾಳೆಗಾರ್, ಜಿಲ್ಲಾಧಿಕಾರಿ ಡಾ.ಹೆಚ್.ಆರ್.ಮಹಾದೇವ, ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ್ ಹಾಗೂ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.