
ಹುಮನಾಬಾದ್: ಕಲ್ಯಾಣ ಕರ್ನಾಟಕ ಭಾಗದ ಭಾವೈಕ್ಯತೆಯ ಕೇಂದ್ರ ಬಿಂದುವಾಗಿರುವ ತಾಲ್ಲೂಕಿನ ಮಾಣಿಕ ನಗರದ ಪ್ರಸಿದ್ಧ ಮಾಣಿಕ ಪ್ರಭು ದೇವಸ್ಥಾನದಲ್ಲಿ ಸಂಗೀತ ದರ್ಬಾರ್ ಜರುಗಿತು. ಮಾಣಿಕ್ ಪ್ರಭು ದೇವಸ್ಥಾನದ 208ನೇ ಜಾತ್ರಾ ಮಹೋತ್ಸವ ಹಾಗೂ ದತ್ತ ಜಯಂತಿ ಕಾರ್ಯಕ್ರಮದಲ್ಲಿ ಸಂಗೀತ ದರ್ಬಾರ್ ಕಾರ್ಯಕ್ರಮಕ್ಕೆ ಅತ್ಯಂತ ಮಹತ್ವದ ಸ್ಥಾನ ನೀಡಲಾಗಿದೆ.
ಮಾಣಿಕ ಪ್ರಭು ಹಾಗೂ ಜ್ಞಾನರಾಜ ಮಹಾರಾಜ ಪ್ರಭುಗಳು ಸಂಗೀತ ಪ್ರೇಮಿಗಳಾಗಿದ್ದು, ಇಲ್ಲಿ ಭಕ್ತಿ ಸಂಗೀತ, ಸುಗಮ–ಸಂಗೀತ ಹಿಂದೂಸ್ಥಾನಿ ಸಂಗೀತ ಸೇರಿದಂತೆ ನಾನಾ ರೀತಿಯ ಸಂಗೀತ ಕಲಾವಿದರು ಇಲ್ಲಿ ಸಂಗೀತದ ರಸದೌತಣ ಉಣಬಡಿಸಿದ್ದಾರೆ. ಅವರಲ್ಲಿ ಪ್ರಮುಖರೆಂದರೆ ಮಲ್ಲಿಕಾರ್ಜುನ ಮನ್ಸೂರ, ಲತಾ ಮಂಗೇಶ್ಕರ್, ಭೀಮಸೇನ ಜೋಷಿ, ಉಸ್ತಾದ ಜಾಕೀರ್ ಹುಸೇನ್, ಸಂಗೀತಾ ಕಟ್ಟಿ ಸೇರಿದಂತೆ ಮಹಾನ್ ಕಲಾವಿದರು, ಇಲ್ಲಿ ಸಂಗೀತ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಪ್ರತಿ ವರ್ಷ ಇಲ್ಲಿ ರಾತ್ರಿಯಿಡೀ ನಡೆಯುವ ಸಂಗೀತ ದಾರ್ಬಾರ್‌ನಲ್ಲಿ ಸಂಗೀತ ಆಸಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಈಗಿನ ಪೀಠಾಧಿಪತಿ ಜ್ಞಾನರಾಜ ಮಾಣಿಕ ಪ್ರಭು ಸಹ ಈ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದು, ಅದಕ್ಕೆ ಸಂಸ್ಥಾನದ ಕಾರ್ಯದರ್ಶಿ ಆನಂದರಾಜ ಪ್ರಭು ಹಾಗೂ ಸಂಗೀತ ಕಲಾವಿದರು ಸಾಥ್ ನೀಡುತ್ತ ಬರುತ್ತಿದ್ದಾರೆ. ಇಲ್ಲಿನ ಮಾಣಿಕ ಪ್ರಭು ಸಂಸ್ಥಾನ ಸಂಗೀತಕಲ್ಲದೇ, ಧಾರ್ಮಿಕ, ಶೈಕ್ಷಣಿಕ, ಕ್ರೀಡೆ ಸೇರಿದಂತೆ ವಿವಿಧ ಸೇವೆಗಳ ಮೂಲಕ ತನ್ನದೇ ವೈವಿಧ್ಯತೆಯನ್ನು ಹೊಂದಿದೆ.
ಭಾಗವಹಿಸಿದ ಕಲಾವಿದರು: ವಿಶ್ವ ವಿಖ್ಯಾತ ಹಾರ್ಮೋನಿಯಂ ಕಲಾವಿದ ತನ್ಮಯ ದೇವಚಕ್ಯೆ, ಸಾತಾರಾದ ಜಾಧವ ಶಹಾನಾಯಿ ವಾದನ, ಅಜಯ ಸುಗಾಂವಕರ, ಕೇದಾರ ದೇಶಪಾಂಡೆ, ಜಯಂತ ಕೇಜಕರ(ಪುಣೆ) ರಾಗ ಬಸಂತ ಬಹಾರ ಗಾಯನ, ಬೆಂಗಳೂರಿನ ರಮೇಶ ಕುಲಕರ್ಣಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯನ, ಸೌರಭ ನಾಯಿಕ್ ಸೇರಿದಂತೆ ಇತರೆ ಕಲಾವಿದರು ತಮ್ಮ ಮಧುರ ಕಂಠದಿಂದ ಸಂಗೀತ ಸುಧೆಯನ್ನು ಹರಿಸಿ ಭಕ್ತಿ ಸೇವೆ ಸಲ್ಲಿಸಿದರು. ಸಭೆಯಲ್ಲಿ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳ ಹಲವಾರು ಪ್ರಮುಖರು, ಗಣ್ಯರು, ಸಂಗೀತ ಕಲಾವಿದರು ಹಾಜರಿದ್ದರು.