ಹುಲಸೂರ: ಕಳೆದ ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ತಾಲ್ಲೂಕು ವಿವಿಧ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸೇತುವೆ ಜಲಾವೃತವಾಗಿದ್ದು, ಗ್ರಾಮಗಳಿಗೆ ರಸ್ತೆ ಸಂಪೂರ್ಣ ಕಡಿತವಾಗಿದೆ.
ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, 15 ಸಾವಿರ ಕ್ಯೂಸೆಕ್ ನೀರು ಮಾಂಜ್ರಾ ನದಿಗೆ ಹರಿಬಿಡಲಾಗಿದೆ. ಇದರಿಂದ ಕೊಂಗಳಿ ಗ್ರಾಮದ ಬಳಿ ಇರುವ ಸೇತುವೆ ಪಕ್ಕದ ರಸ್ತೆಯಲ್ಲಿ ನೀರು ಆವರಿಸಿಕೊಂಡಿದೆ. ಇದರಿಂದ ಮೆಹಕರ-ಕೊಂಗಳಿ, ವಾಂಜರಖೆಡಾ ಗ್ರಾಮದಿಂದ ಔರಾದ (ಶಾ), ತುಗಾಂವ (ಎಚ್)- ಹಲಸಿ ಗ್ರಾಮಕ್ಕೆ ಹೋಗುವ ರಸ್ತೆ ಸಂಚಾರ ಕಡಿತಗೊಂಡಿದೆ.
ನದಿಗೆ ಒಳಹರಿವು ಹೆಚ್ಚಾದ ಹಿನ್ನೆಲೆ ನದಿಪಾತ್ರದ ರೈತರ ಬೆಳೆಗಳು ಹಾನಿಯಾಗಿದ್ದು, ರೈತರ ಜಮೀನುಗಳಲ್ಲಿನ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಜಮೀನಿನಲ್ಲಿ ಇಟ್ಟ ಕೃಷಿ ಉಪಕರಣಗಳೂ ನೀರಿನ ರಭಸಕ್ಕೆ ಹರಿದು ಹೋಗುತ್ತಿವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಪರಿಹಾರ ನೀಡಬೇಕು ಎಂದು ರೈತರಾದ ಧನರಾಜ ಚೌರೆ, ಜೈಯಶ್ರೀ ಚೌರೆ, ರಾಜಕುಮಾರ ಚೌರೆ, ಭೀಮ ಚೌರೆ ಅವರು ತಹಶೀಸೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಮನವಿ ಮಾಡಿದ್ದಾರೆ.
ಶುಕ್ರವಾರ ಕೊಂಗಳಿ ಗ್ರಾಮದ ಬಳಿ ಇರುವ ಸೇತುವೆಗೆ ತಹಶೀಲ್ದಾರ್ ಶಿವಾನಂದ ಮೇತ್ರೆ ಅವರು ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ,‘ರೈತರ ಮುಂಗಾರು ಹಂಗಾಮಿನ ಬೆಳೆಗಳು ಫಲವತ್ತಾದ ಮಣ್ಣು ಸಹಿತ ಬೆಳೆ ಹಾನಿಯಾಗಿದೆ. ಈ ಕುರಿತು ವರದಿ ಸಲ್ಲಿಸುವ ಮೂಲಕ ರೈತರಿಗೆ ನೆರವಾಗಲಾಗುವುದು ಎಂದು ‘ಪ್ರಜಾವಾಣಿ’ ಗೆ ತಿಳಿಸಿದರು.
ರೈತನ ಕೈ ಸೇರದ ಹೆಸರು ಧಾನ್ಯ
ಪಟ್ಟಣದ ರೈತ ಶಿವರಾಜ ವಿಶ್ವನಾಥ ಪಾರಶೇಟೆ ನಾಲ್ಕು ದಿನಗಳ ಹಿಂದೆ ಐದು ಎಕರೆಯಲ್ಲಿ ಬೆಳೆದ ಹೆಸರು ಫಸಲು ರಾಸಿ ಮಾಡಿದರು ಹೊಲದಲ್ಲಿ ಜಮಾಯಿಸಿ ಇಟ್ಟ ಸುಮಾರು 30 ಕ್ವಿಂಟಲ್ ಹೆಸರು ಧಾನ್ಯ ಮನೆಗೆ ತರಬೇಕು ಎನ್ನುವಷ್ಟರಲ್ಲಿ ಅತಿಯಾದ ಮಳೆಯಿಂದಾಗಿ ರೈತನ ಜಮೀನಿನಲ್ಲಿ ಹೆಸರು ಧಾನ್ಯ ಮಳೆ ನೀರಿನಿಂದ ಒದ್ದೆಯಾಗಿದರ ಪರಿಣಾಮ ಹೆಸರು ಧಾನ್ಯ ಉಪಯೋಗಕ್ಕೆ ಬಾರದಂತ್ತಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಶಿವಾನಂದ ಮೆತ್ರೆ ಅವರ ಎದುರಿಗೆ ತನ್ನ ಅಳಲು ತೋಡಿಕೊಂಡರು.
ಜಲಾವೃತಗೊಂಡ ಐತಿಹಾಸಿಕ ತೋರಿ ಬಸವಣ್ಣ ದೇವಸ್ಥಾನ
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ತಾಲ್ಲೂಕಿನ ಉಕ್ಕಿ ಹರಿಯುತ್ತಿರುವ ಮಾಂಜ್ರಾ ನದಿಯ ಪಕ್ಕದಲ್ಲಿರುವ ಐತಿಹಾಸಿಕ ತೋರಿ ಬಸವಣ್ಣ ದೇವಸ್ಥಾನ ದೇವಸ್ಥಾನ ಮುಳುಗಡೆಯಾಗಿದೆ. ಕರ್ನಾಟಕ ಮಹಾರಾಷ್ಟ್ರದಿಂದ ನಿತ್ಯ ನೂರಾರು ಭಕ್ತರು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಆದರೆ ದೇವಸ್ಥಾನ ಅರ್ಧದಷ್ಟು ಮುಳುಗಿದ್ದರಿಂದ ದೂರದಲ್ಲಿ ನಿಂತುಕೊಂಡೇ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಕಳೆದ 7 ವರ್ಷಗಳ ಹಿಂದೆ ನೀರು ನುಗ್ಗಿ ಈ ದೇವಸ್ಥಾನ ಮುಳುಗಿತ್ತು. ಅದಾದ ನಂತರ ಇದೇ ವರ್ಷ ಮುಳುಗಡೆಯಾಗಿದೆ. ಈ ಹಿನ್ನಲೆ ಭಕ್ತಾದಿಗಳು ಪರದಾಡುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.