ಭಾಲ್ಕಿ ತಾಲ್ಲೂಕಿನ ಕಾರಂಜಾ ಜಲಾಶಯದಿಂದ ನೀರು ಹೊರ ಬಿಟ್ಟಿರುವುದರಿಂದ ಹಾಗೂ ಮಳೆಯಿಂದಾಗಿ ಗೋಧಿಹಿಪ್ಪರಗಾ ಗ್ರಾಮದ ಸಮೀಪದ ಹೊಲಗಳಲ್ಲಿ ನೀರು ನಿಂತಿರುವುದು
ಭಾಲ್ಕಿ: ತಾಲ್ಲೂಕಿನಲ್ಲಿ ಲಖನಗಾಂವ ಗ್ರಾಮದ ಬಳಿ ಮಾಂಜ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲಿಂದ ನೀರು ಹರಿಯುತ್ತಿರುವುದರಿಂದ ಸಂಚಾರ ಬಂದ್ ಆಗಿದೆ. ತಾಲ್ಲೂಕಿನಲ್ಲಿ ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಮಳೆ, ಔರಾದ್ ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆ ಹಾಗೂ ಕಾರಂಜಾ ಜಲಾಶಯದಿಂದ ನೀರು ಹೊರ ಬಿಟ್ಟಿರುವುದರಿಂದ ಸೇತುವೆ ಮೇಲಿಂದ ನೀರು ಹರಿಯುತ್ತಿದೆ.
ಈ ಮಾರ್ಗದಿಂದ ಸೋನಾಳ, ಕಮಲನಗರಕ್ಕೆ ತೆರಳುವ ರಸ್ತೆ ಬಂದ್ ಮಾಡಲಾಗಿದೆ. ಸೇತುವೆ ಸ್ಥಳಕ್ಕೆ ತಹಶೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ ಭೇಟಿ ನೀಡಿ, ‘ಸಾರ್ವಜನಿಕರು ಸುರಕ್ಷತೆಯ ದೃಷ್ಟಿಯಿಂದ ನೀರಿನ ಮಟ್ಟ ಕಡಿಮೆ ಆಗುವವರೆಗೆ ಈ ಸೇತುವೆ ಮೇಲಿಂದ ಸಂಚಾರ ಮಾಡಬಾರದು’ ಎಂದು ತಿಳಿಸಿದರು.
ಮಲ್ಲಿಕಾರ್ಜುನ ದೇವಾಲಯ ಮುಳುಗಡೆ: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಾರಂಜಾ ಜಲಾಶಯದ ಒಳ ಹರಿವು ಹೆಚ್ಚಾಗಿದ್ದು, ಸೋಮವಾರ ಒಂದು ಗೇಟ್ ಹಾಗೂ ಮಂಗಳವಾರ ಮೂರು ಗೇಟ್‌ಗಳ ಮೂಲಕ ಸುಮಾರು ಐದು ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ ಎಂದು ಕಾರಂಜಾ ಜಲಾಶಯದ ಎಇಇ ವಿಜ್ಞೇಶ ತಿಳಿಸಿದರು.
ಜಲಾಶಯದಿಂದ ನೀರು ಹೊರ ಬಿಟ್ಟಿರುವುದರಿಂದ ತಾಲ್ಲೂಕಿನ ಕಟ್ಟಿತೂಗಾಂವ ಗ್ರಾಮ ಸಮೀಪದ ಮಲ್ಲಿಕಾರ್ಜುನ ದೇವಸ್ಥಾನ ಮುಳುಗಡೆಯಾಗಿದೆ. ಪ್ರತಿವರ್ಷ ಕಾರಂಜಾ ಜಲಾಶಯದಿಂದ ನೀರು ಹೊರ ಬಿಟ್ಟಾಗ ಈ ದೇವಸ್ಥಾನ ಮುಳುಗಡೆ ಆಗುತ್ತದೆ. ದೇವಸ್ಥಾನ ಮುಳುಗಡೆ ಆಗಿರುವುದರಿಂದ ಭಕ್ತರು ದೂರದಿಂದಲೇ ಮಲ್ಲಿಕಾರ್ಜುನ ದೇವರ ದರುಶನ ಪಡೆಯುತ್ತಿದ್ದಾರೆ.
ಎರಡು ಮನೆ ಭಾಗಶಃ ಕುಸಿತ: ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆಗೆ ಕುಂಟೆಸಿರ್ಸಿ ಗ್ರಾಮದ ಮೈತ್ರದೇವಿ ಪ್ರಭುರಾವ್ ಅವರಿಗೆ ಸೇರಿದ ಹಾಗೂ ಚಳಕಾಪೂರ ಗ್ರಾಮದ ಕಾಂತಾಬಾಯಿ ಮನೋಹರರಾವ್ ಅವರ ಮನೆಗಳು ಭಾಗಶಃ ಕುಸಿದಿವೆ ಎಂದು ತಹಶೀಲ್ದಾರ್ ಕಚೇರಿ ಅಧಿಕಾರಿ ತಿಳಿಸಿದ್ದಾರೆ.
ಹೊಲಗಳಿಗೆ ನುಗ್ಗಿದ ನೀರು: ತಾಲ್ಲೂಕಿನ ಕಾರಂಜಾ ಜಲಾಶಯದಿಂದ ನೀರು ಹೊರ ಬಿಟ್ಟಿರುವುದರಿಂದ ಹಾಗೂ ಮಳೆಯಿಂದಾಗಿ ಗೋಧಿಹಿಪ್ಪರಗಾ ಗ್ರಾಮ ಸಮೀಪದ ಹೊಲಗಳಲ್ಲಿ ನೀರು ನಿಂತಿದ್ದು, ಅನ್ನದಾತರಿಗೆ ಬೆಳೆ ಹಾಳಾಗುವ ಭೀತಿ ವಿಪರೀತವಾಗಿ ಕಾಡುತ್ತಿದೆ. ಇನ್ನು ಕಾರಂಜಾ ಜಲಾಶಯದಿಂದ ನೀರು ಹೊರ ಬಿಟ್ಟಿರುವುದರಿಂದ, ಮಳೆಯಿಂದಾಗಿ ಗೋಧಿಹಿಪ್ಪರಗಾ- ಮಾಸಿಮಾಡ ಗ್ರಾಮಗಳ ಮಧ್ಯದ ಸೇತುವೆ ಮೇಲಿಂದ ನೀರು ಹರಿಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.