ADVERTISEMENT

ಫಲಿತಾಂಶ ಪಡೆಯಲು ಮಾಧ್ಯಮ ಪ್ರತಿನಿಧಿಗಳ ಪರದಾಟ

ಎಲೆಕ್ಟ್ರಾನಿಕ್ ಮತಯಂತ್ರ ಇದ್ದರೂ ಎಣಿಕೆ ವಿಳಂಬ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2020, 12:26 IST
Last Updated 30 ಡಿಸೆಂಬರ್ 2020, 12:26 IST
ಬೀದರ್‌ನ ಬಿ.ವಿ.ಭೂಮರಡ್ಡಿ ಕಾಲೇಜಿನಲ್ಲಿ ಸ್ಥಾಪಿಸಲಾಗಿದ್ಧ ಮಾಧ್ಯಮ ಕೇಂದ್ರದಲ್ಲಿ ಕುರ್ಚಿ ಬಿಟ್ಟರೆ ಬೇರೆ ಏನೂ ವ್ಯವಸ್ಥೆ ಇರಲಿಲ್ಲ
ಬೀದರ್‌ನ ಬಿ.ವಿ.ಭೂಮರಡ್ಡಿ ಕಾಲೇಜಿನಲ್ಲಿ ಸ್ಥಾಪಿಸಲಾಗಿದ್ಧ ಮಾಧ್ಯಮ ಕೇಂದ್ರದಲ್ಲಿ ಕುರ್ಚಿ ಬಿಟ್ಟರೆ ಬೇರೆ ಏನೂ ವ್ಯವಸ್ಥೆ ಇರಲಿಲ್ಲ   

ಬೀದರ್: ಬೀದರ್‌ನ ಬಿ.ವಿ.ಭೂಮರೆಡ್ಡಿ ಕಾಲೇಜಿನಲ್ಲಿ ಸ್ಥಾಪಿಸಲಾಗಿದ್ಧ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ಕಾರ್ಯ ಬೆಳಿಗ್ಗೆ ಎಂಟು ಗಂಟೆಗೆ ಆರಂಭವಾದರೂ ತ್ವರಿತಗತಿಯಲ್ಲಿ ಫಲಿತಾಂಶ ದೊರಕಲಿಲ್ಲ. ಜಿಲ್ಲಾಡಳಿತ ಎರಡು ಗಂಟೆಯ ನಂತರ ಒಬ್ಬೊಬ್ಬ ಅಭ್ಯರ್ಥಿಯ ಫಲಿತಾಂಶ ಕೊಡಲು ಶುರು ಮಾಡಿತು. ಗ್ರಾಮ ಪಂಚಾಯಿತಿಗಳ ಪೂರ್ಣ ಫಲಿತಾಂಶ ಪಡೆಯಲು ಪತ್ರಕರ್ತರು ಸಂಜೆಯ ವರೆಗೂ ಪರದಾಡಬೇಕಾಯಿತು.

ರಾಜ್ಯದಲ್ಲಿ ಬೀದರ್‌ ಜಿಲ್ಲೆಯಲ್ಲಿ ಅಷ್ಟೇ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಲಾಗಿತ್ತು. ಮಧ್ಯಾಹ್ನ 12 ಗಂಟೆಯ ವೇಳೆಗೆ ಎಲ್ಲ ಪಂಚಾಯಿತಿಗಳ ಫಲಿತಾಂಶ ಪ್ರಕಟವಾಗಲಿದೆ ಎನ್ನುವ ನಿರೀಕ್ಷೆ ಹುಸಿ ಆಯಿತು. ಜಿಲ್ಲೆಯಲ್ಲಿ ಬಹುತೇಕ ಹೊಸ ಅಧಿಕಾರಿಗಳೇ ಬಂದಿದ್ದಾರೆ. ಸರಿಯಾದ ಪೂರ್ವ ಸಿದ್ಧತೆಗಳು ಇಲ್ಲದ ಕಾರಣ ಅನೇಕ ಅಚಾತುರ್ಯಗಳು ನಡೆದವು.

ಜಿಲ್ಲಾಧಿಕಾರಿ, ಬೀದರ್‌ ಉಪ ವಿಭಾಗಾಧಿಕಾರಿ ಹಾಗೂ ಬೀದರ್‌ ತಹಶೀಲ್ದಾರರಿಗೆ ಮನವಿ ಮಾಡಿಕೊಂಡರೂ ಸಕಾಲಕ್ಕೆ ಫಲಿತಾಂಶ ಮಾಧ್ಯಮ ಪ್ರತಿನಿಧಿಗಳ ಕೈಸೇರಲಿಲ್ಲ. ಹೀಗಾಗಿ ಮಾಧ್ಯಮ ಪ್ರತಿನಿಧಿಗಳು ತೊಂದರೆ ಅನುಭವಿಸಬೇಕಾಯಿತು.

ADVERTISEMENT

ಮಾಧ್ಯಮ ಕೇಂದ್ರದಲ್ಲೂ ಅವ್ಯವಸ್ಥೆ:ಮಾಧ್ಯಮ ಕೇಂದ್ರದಲ್ಲಿ ಕುರ್ಚಿಗಳು ಬಿಟ್ಟರೆ ಬೇರೇನೂ ವ್ಯವಸ್ಥೆ ಮಾಡಿರಲಿಲ್ಲ. ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಿರಲಿಲ್ಲ. ಬೆಳಿಗ್ಗೆ 10 ಗಂಟೆ ತನಕ ಒಂದು ಚಿಕ್ಕ ಬಾಟಲಿ ನೀರು ಮಾತ್ರ ಕೊಡಲಾಗಿತ್ತು. ನಂತರ ಕುಡಿಯುವ ನೀರಿಗೂ ಪರದಾಡಬೇಕಾಯಿತು.

ಮಾಧ್ಯಮ ಪ್ರತಿನಿಧಿಗಳು ಸಕಾಲಕ್ಕೆ ಫಲಿತಾಂಶದ ಮಾಹಿತಿ ಕೊಡುವಂತೆ ಜಿಲ್ಲಾಡಳಿತಕ್ಕೆ ಮಂಗಳವಾರವೇ ಮನವಿ ಮಾಡಿಕೊಂಡಿದ್ದರು. ಆದರೆ, ಪ್ರಯೋಜನ ಆಗಲಿಲ್ಲ. 2015ರಲ್ಲಿ ಮಾಧ್ಯಮ ಕೇಂದ್ರಗಳಿಗೆ ಆಗಾಗ ಮಾಹಿತಿ ಪೂರೈಸಲು ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 12.30ರ ವೇಳೆಗೆ ಎಲ್ಲ ಗ್ರಾಮ ಪಂಚಾಯಿತಿಗಳ ಫಲಿತಾಂಶ ಹೊರಬಿದ್ದಿತ್ತು. ಅಂದಿನ ಜಿಲ್ಲಾಧಿಕಾರಿ ಪಿ.ಸಿ.ಜಾಫರ್‌ ಹಾಗೂ ಬೀದರ್‌ ಉಪ ವಿಭಾಗಾಧಿಕಾರಿ ಆ್ಯನಿಸ್‌ ಜಾಯ್‌ ಅವರು ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದರು.
****
ಅಚ್ಚುಕಟ್ಟಾದ ಪೊಲೀಸ್‌ ವ್ಯವಸ್ಥೆ:ಪೊಲೀಸ್‌ ಸಿಬ್ಬಂದಿ ಬೆಳಿಗ್ಗೆ 6 ಗಂಟೆಗೆ ಮತ ಎಣಿಕೆ ಕೇಂದ್ರಗಳಲ್ಲಿ ಬಂದೋಬಸ್ತ್‌ನಲ್ಲಿ ತೊಡಗಿದ್ದರು. ಬೀದರ್‌ನ ಭೂಮರಡ್ಡಿ ಕಾಲೇಜಿನ ಎದುರು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಂಡರು.
ಮತ ಎಣಿಕೆ ಪ್ರಕ್ರಿಯೆ ಸಂಜೆಯ ವರೆಗೂ ನಡೆದ ಕಾರಣ ಪೊಲೀಸರು ಬಿಸಿಲಲ್ಲಿ ನಿಂತು ಆಯಾಸ ಪಡುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.