ADVERTISEMENT

ರೋಗಿಗಳ ಮಾಹಿತಿ ಪಡೆಯಿರಿ

ಹುಮನಾಬಾದ್‌: ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಮೇ 2020, 11:09 IST
Last Updated 4 ಮೇ 2020, 11:09 IST
ಹುಮನಾಬಾದ್‍ನ ಮಿನಿ ವಿಧಾನ ಸೌಧದ ಆವರಣದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಅವರು ಮಾತನಾಡಿದರು
ಹುಮನಾಬಾದ್‍ನ ಮಿನಿ ವಿಧಾನ ಸೌಧದ ಆವರಣದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಅವರು ಮಾತನಾಡಿದರು   

ಹುಮನಾಬಾದ್: ಕೋವಿಡ್‌ ವೈರಾಣು ಹರಡುವುದನ್ನು ತಡೆಗಟ್ಟಲು ಖಾಸಗಿ ಆಸ್ಪತ್ರೆಯ ವೈದ್ಯರು ಮತ್ತು ಔಷಧ ವಿತರಕರ ಸಹಕಾರ ಬಹಳ ಅವಶ್ಯಕ. ಎಲ್ಲರೂ ಸರ್ಕಾರದ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಹೇಳಿದರು.

ಪಟ್ಟಣದ ಮಿನಿ ವಿಧಾನ ಸೌಧ ಆವರಣದಲ್ಲಿ ಭಾನುವಾರ ನಡೆದ ಖಾಸಗಿ ವೈದ್ಯರು ಹಾಗೂ ಔಷಧ ವಿತರಕರ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನ ಎಲ್ಲಾ ಖಾಸಗಿ ಆಸ್ಪತ್ರೆಗೆ ಮತ್ತು ಔಷಧಿ ಅಂಗಡಿಗೆ ಬರುವ ಪ್ರತಿಯೊಬ್ಬ ರೋಗಿಯ ಸಂಪೂರ್ಣ ವಿಳಾಸ ಹಾಗೂ ಅವರ ಮೊಬೈಲ್‌ ಸಂಖ್ಯೆಯನ್ನು ಕಡ್ಡಾಯವಾಗಿ ಪಡೆದು, ತಮ್ಮ ದಾಖಲೆಯಲ್ಲಿ ನೋಂದಾಯಿಸಿಕೊಳ್ಳಿಬೇಕು ಎಂದರು.

ADVERTISEMENT

ಖಾಸಗಿ ಆಸ್ಪತ್ರೆ ಮತ್ತು ಔಷಧ ಅಂಗಡಿಗೆ ಬಂದಂತಹ ರೋಗಿಗಳಲ್ಲಿ ಅತ್ಯಂತ ಶಂಕಿತ ವ್ಯಕ್ತಿ ಮತ್ತು ಹೆಚ್ಚಿನ ಜ್ವರ, ಕೆಮ್ಮ, ಉಸಿರಾಟದ ತೊಂದರೆ ಕಂಡು ಬಂದರೆ, ತಕ್ಷಣ ತಾಲ್ಲೂಕು ಅಡಳಿತ ಮತ್ತು ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದು
ಸೂಚಿಸಿದರು.

ಕೋವಿಡ್‌ ವೈರಾಣು ಗಾಳಿಯಿಂದ ಹರಡುವ ಸಾಧ್ಯತೆ ಇರುವ ಕಾರಣ ಪ್ರತಿಯೊಬ್ಬರೂ ಕಡ್ಡಾಯವಾಗಿ 6 ಅಡಿ ಅಂತರ ಕಾಯ್ದುಕೊಂಡು, ದಿನನಿತ್ಯ ಮಾಸ್ಕ್‌ ಧರಿಸಿ, ಸ್ಯಾನಿಟೈಸರ್ ಉಪಯೋಗಿಸಬೇಕು. ಖಾಸಗಿ ವೈದ್ಯರು, ಮತ್ತು ಔಷಧಿ ವಿತರಕರ ಬೇಡಿಕೆ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು
ಎಂದರು.

ಹುಮನಾಬಾದ್ ತಾಲ್ಲೂಕಿನಲ್ಲಿ 35 ಖಾಸಗಿ ವೈದ್ಯಕೀಯ ಸಂಸ್ಥೆಯವರು ಕೋವಿಡ್‌ ವೈರಾಣು ತಡೆಯಲು ಶ್ರಮಿಸುತ್ತಿರುವುದು ಶ್ಲಾಘನೀಯ. ಇನ್ನುಳಿದ ಖಾಸಗಿ ಸಂಸ್ಥೆಯವರು ಕೂಡ ಎಂದಿನಂತೆ ನಿರಂತರವಾಗಿ ಜನರ ಸೇವೆ ಮಾಡಲು ಮುಂದೆ ಬರಬೇಕು ಎಂದರು.

ತಾಲ್ಲೂಕಿನ ವಿವಿಧೆಡೆ ಅರ್ಹರಲ್ಲದ ವೈದ್ಯರು ಕೂಡ ಜನರ ಆರೋಗ್ಯ ತಪಾಸಣೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ದೂರುಗಳು ಮತ್ತೆ ಬಂದರೆ ಅರ್ಹರಲ್ಲದ ವೈದ್ಯರ ವಿರುದ್ದ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿ.ಪಂ ಸಿಇಒ ಜ್ಞಾನೇಂದ್ರಕುಮಾರ ಗಂಗ್ವಾರ ಮಾತನಾಡಿದರು. ಡಿಎಚ್‌ಒ ಡಾ.ವಿ.ಜಿ.ರೆಡ್ಡಿ, ಸಹಾಯಕ ಔಷಧ ನಿರ್ದೇಶಕ ಶರಣಬಸಪ್ಪ, ತಹಶೀಲ್ದಾರ್ ನಾಗಯ್ಯ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ತಾಲ್ಲೂಕು ಆರೋಗ್ಯ ಅಧಿಕಾರಿ ಅಶೋಕ ಮೈಲಾರೆ ಹಾಗೂ ಮುಖ್ಯ ವೈದ್ಯಾಧಿಕಾರಿ ಡಾ. ನಾಗನಾಥ ಹುಲಸೂರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.