
ಔರಾದ್: ತಾಲ್ಲೂಕಿನ ಜಮಾಲಪೂರ ಸರ್ಕಾರಿ ಪ್ರಾಥಮಿಕ ಶಾಲೆಯ 22 ಮಕ್ಕಳು ಮಂಗಳವಾರ ಬಿಸಿಯೂಟ ಸೇವನೆಯಿಂದ ಅಸ್ವಸ್ಥಗೊಂಡಿದ್ದು ಒಂದು ಮಗುವನ್ನು ಬೀದರ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ಸೇವಿಸಿದ ಕೆಲ ವಿದ್ಯಾರ್ಥಿಗಳಲ್ಲಿ ಹೊಟ್ಟೆ ನೋವು ಹಾಗೂ ವಾಂತಿ ಭೇದಿ ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡ ಪಾಲಕರು ಎಲ್ಲ 58 ಮಕ್ಕಳನ್ನು ಆಂಬುಲೆನ್ಸ್‌ನಲ್ಲಿ ಔರಾದ್ ಸಾರ್ವಜನಿಕ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ.
58 ವಿದ್ಯಾರ್ಥಿಗಳ ಪೈಕಿ 22 ವಿದ್ಯಾರ್ಥಿಗಳು ಹೊಟ್ಟೆ ನೋವು ಹಾಗೂ ವಾಂತಿ ಭೇದಿಯಿಂದ ಬಳಲಿರುವುದರಿಂದ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ವಿದ್ಯಾರ್ಥಿನಿ ಸಾಕ್ಷಿಯನ್ನು ಬ್ರಿಮ್ಸ್‌ಗೆ ಕಳುಹಿಸಲಾಗಿದೆ. ಉಳಿದ ಎಲ್ಲರೂ ಆರೋಗ್ಯದಿಂದ ಇದ್ದಾರೆ ಎಂದು ತಹಶೀಲ್ದಾರ್ ಮಹೇಶ ಪಾಟೀಲ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಗಾಯತ್ರಿ ಪ್ರಜಾವಾಣಿಗೆ ತಿಳಿಸಿದ್ದಾರೆ.
ಬಿಸಿಯೂಟಕ್ಕೆ ಬಳಸುವ ಆಹಾರ ಧಾನ್ಯ ಸರಿ ಇಲ್ಲ. ಮಕ್ಕಳು ಅಸ್ವಸ್ಥಗೊಳ್ಳಲು ಇದೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ತಹಶೀಲ್ದಾರ್ ಹೇಳಿದ್ದಾರೆ.
ಮಕ್ಕಳ ಆರೋಗ್ಯ ವಿಚಾರಣೆ ವಿಚಾರಿಸಿದ ಸಿಇಒ:
ಜಿಲ್ಲಾ ಪಂಚಾಯತ್ ಸಿಇಒ ಡಾ. ಗಿರೀಶ್ ಬದೋಲೆ ಔರಾದ್ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಬಿಸಿಯೂಟ ಸೇವನೆಯಿಂದ ಅಸ್ವಸ್ಥಗೊಂಡ ಮಕ್ಕಳ ಆರೋಗ್ಯ ವಿಚಾರಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಗಾಯತ್ರಿ ಅವರಿಂದ ಮಕ್ಕಳ ಆರೋಗ್ಯದ ಕುರಿತು ಮಾಹಿತಿ ಪಡೆದರು. ಪ್ರತಿ ಮಗುವಿನ ಬಗ್ಗೆ ಕಾಳಜಿ ವಹಿಸಿ ಪೂರ್ಣ ಗುಣಮುಖರಾದ ನಂತರ ಅವರನ್ನು ಮನೆಗೆ ಕಳುಹಿಸಿ. ಜಮಾಲಪೂರ ಶಾಲೆಗೆ ಬಿಸಿಯೂಟ ಧಾನ್ಯ ವಿತರಣೆ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಾ.ಪಂ. ಇಒ ಕಿರಣ ಪಾಟೀಲ ಅಧಿಕಾರಿಗಳು ಇದ್ದರು.
ವರದಿ ನೀಡಲು ಆಯೋಗ ಸೂಚನೆ
‘ರಾಜ್ಯದ ಬೇರೆ ಬೇರೆ ಕಡೆ ಇಂತಹ ಘಟನೆಗಳು ಸಂಭವಿಸುತ್ತಿದ್ದು ಮುನ್ನೆಚ್ಚರಿಕೆ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ನಡುವೆಯೂ ಔರಾದ್ ತಾಲ್ಲೂಕಿನ ಜಮಾಲಪೂರ ಶಾಲೆ ಮಕ್ಕಳು ಅಸ್ವಸ್ಥರಾಗಿದ್ದು ಕಳವಳಕಾರಿ ಸಂಗತಿ. ಈ ಬಗ್ಗೆ 5 ದಿನಗಳಲ್ಲಿ ಆಯೋಗಕ್ಕೆ ವರದಿ ಸಲ್ಲಿಸಬೇಕು’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ತಿಳಿಸಿದ್ದಾರೆ.
ಕಳಪೆ ಆಹಾರ ಪೂರೈಕೆ: ಕ್ರಮಕ್ಕೆ ಆಗ್ರಹ
ತಾಲ್ಲೂಕಿನ ಶಾಲೆ ಹಾಗೂ ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದೆ. ಗ್ರಾಮ ಸಂಚಾರದ ವೇಳೆ ನನಗೆ ಈ ವಿಷಯ ಗೊತ್ತಾಗಿದೆ. ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಪ್ರಭು ಚವಾಣ್ ಹೇಳಿದರು. ಔರಾದ್ ಆಸ್ಪತ್ರೆಗೆ ಭೇಟಿ ನೀಡಿ ಜಮಾಲಪೂರ ಶಾಲೆ ಮಕ್ಕಳ ಆರೋಗ್ಯ ವಿಚಾರಿಸಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.