
ಸಾಮಾಜಿಕ, ಆರ್ಥಿಕ ಸಮೀಕ್ಷೆಯ ಭಾಗವಾಗಿ ಬೀದರ್‌ನಲ್ಲಿ ಸಮೀಕ್ಷೆದಾರರು ಮಹಿಳೆಯೊಬ್ಬರಿಂದ ಮಾಹಿತಿ ಸಂಗ್ರಹಿಸಿದರು
ಬೀದರ್: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಬೀದರ್ ಜಿಲ್ಲೆಯಾದ್ಯಂತ ಪ್ರಗತಿಯಲ್ಲಿದ್ದು, ಅಕ್ಟೋಬರ್ 29ರ ತನಕ ಜಿಲ್ಲೆಯಲ್ಲಿ ಶೇ 85ರಷ್ಟು ಸಮೀಕ್ಷೆ
ಪೂರ್ಣಗೊಂಡಿದೆ.
ಈಗಾಗಲೇ ರಾಜ್ಯ ಸರ್ಕಾರ ಸಮೀಕ್ಷೆಯನ್ನು ಅಕ್ಟೋಬರ್ 31ರ ವರೆಗೆ ವಿಸ್ತರಿಸಿದೆ. ಇನ್ನೆರಡೇ ದಿನಗಳು ಉಳಿದಿದ್ದು, ಜಿಲ್ಲೆಯಲ್ಲಿ ಇನ್ನುಳಿದ ಶೇ 15ರಷ್ಟು ಜನರನ್ನು ತಲುಪಿ, ಮಾಹಿತಿ ದಾಖಲಿಸಬೇಕಿದೆ.
ದೀಪಾವಳಿ ರಜೆ ನಂತರ ಶಾಲೆಗಳು ಆರಂಭಗೊಂಡಿರುವುದರಿಂದ ಸಮೀಕ್ಷೆಯಿಂದ ಶಾಲಾ ಶಿಕ್ಷಕರನ್ನು ಕೈಬಿಡಲಾಗಿದೆ. ಅವರ ಬದಲಿಗೆ ಗ್ರಾಮ ಲೆಕ್ಕಿಗರು, ಪಿಡಿಒ ಸೇರಿದಂತೆ ಇತರೆ ಸಿಬ್ಬಂದಿಯನ್ನು ನಿಯೋಜಿಸಿ, ಸಮೀಕ್ಷೆ ಮಾಡಿಸಲಾಗುತ್ತಿದೆ.
ಜಿಲ್ಲೆಯಲ್ಲಿರುವ ಎಲ್ಲಾ ಮನೆಗಳನ್ನು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿ ಸಂಪರ್ಕಿಸಿದ್ದಾರೆ. ಒಂದುವೇಳೆ ಮನೆಯಲ್ಲಿ ಇಲ್ಲದಿದ್ದರೂ ಅಂತಹವರನ್ನು ದೂರವಾಣಿ ಮೂಲಕ ಸಂಪರ್ಕಿಸಲಾಗಿದೆ. ಆದರೆ, ಕೆಲವರು ಕೆಲಸದ ನಿಮಿತ್ತ ನೆರೆಯ ಮಹಾರಾಷ್ಟ್ರ, ತೆಲಂಗಾಣಕ್ಕೆ ತೆರಳಿರುವುದರಿಂದ ಸಮಸ್ಯೆ ಎದುರಾಗಿದೆ. ಕುಟುಂಬದ ಯಾರಾದರೂ ಒಬ್ಬ ಸದಸ್ಯರ ಮೂಲಕ ಎಲ್ಲಾ ವಿವರ ದಾಖಲಿಸಲು ಮನವರಿಕೆ ಮಾಡಲಾಗುತ್ತಿದೆ.
ವಲಸಿಗರ ಮಾಹಿತಿಗೆ ಪರದಾಟ:
ಬೀದರ್ ಜಿಲ್ಲೆ ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣದೊಂದಿಗೆ ಗಡಿ ಹಂಚಿಕೊಂಡಿದೆ. ಜಿಲ್ಲೆಯ ಜನ ಹೆಚ್ಚಾಗಿ ಈ ಎರಡೂ ರಾಜ್ಯಗಳಿಗೆ ವಲಸೆ ಹೋಗುತ್ತಾರೆ. ಕೆಲವರು ತಿಂಗಳ ಹೆಚ್ಚಿನ ದಿನ ಅಲ್ಲೇ ಕೆಲಸ ಮಾಡಿ, ಎರಡ್ಮೂರು ದಿನಗಳಷ್ಟೇ ಊರಿಗೆ ಬಂದು ಹೋಗುತ್ತಾರೆ.
ಈಗ ಇಂತಹವರ ಮಾಹಿತಿ ಕಲೆ ಹಾಕುವುದಕ್ಕೆ ಸಿಬ್ಬಂದಿ ಪರದಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ. ಸಮೀಕ್ಷಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ ಹಲವು ಸಲ ವಲಸಿಗರನ್ನು ಸಂಪರ್ಕಿಸಿದರೂ ಅವರಿಂದ ಸ್ಪಂದನೆ ಸಿಗುತ್ತಿಲ್ಲ ಎಂಬುದು ಗೊತ್ತಾಗಿದೆ.
ಮಾಹಿತಿ ಕೊಡಲು ನಕಾರ
ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಗೃಹಲಕ್ಷ್ಮೀ, ಶಕ್ತಿ, ಗೃಹಜ್ಯೋತಿ, ಯುವನಿಧಿ ಪ್ರಮುಖವಾದವು. ಬಹುತೇಕರು ಈ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ಸಮೀಕ್ಷೆ ವೇಳೆ ನಿಖರವಾದ ಮಾಹಿತಿ ದಾಖಲಿಸಿದರೆ ಈ ಯೋಜನೆಗಳ ಲಾಭ ತಪ್ಪಬಹುದು ಎಂಬ ಭೀತಿಯಿಂದ ಕೆಲವರು ಮಾಹಿತಿ ಹಂಚಿಕೊಳ್ಳದಿರುವುದು ಗೊತ್ತಾಗಿದೆ.
ಈ ಕುರಿತು ಸಮೀಕ್ಷೆದಾರರು ಎಷ್ಟೇ ಮನವರಿಕೆ ಮಾಡಿದರೂ ಫಲ ಕೊಟ್ಟಿಲ್ಲ. ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಲ್ಲ ಎಂದು ಸ್ವತಃ ಸರ್ಕಾರವೇ ಹೇಳಿರುವುದರಿಂದ ಒತ್ತಡ ಹಾಕಬೇಡಿ ಎಂದು ಹೇಳಿದ ಘಟನೆಗಳು ನಡೆದಿವೆ. ಈಗ ಸಮೀಕ್ಷೆ ಪೂರ್ಣಗೊಳ್ಳಲು ಇನ್ನೆರಡೇ ದಿನಗಳು ಬಾಕಿ ಉಳಿದಿದ್ದು, ಇನ್ನೂ ಶೇ 15ರಷ್ಟು ಜನರ ಮಾಹಿತಿ ದಾಖಲಿಸುವ ಸವಾಲು ಜಿಲ್ಲಾಡಳಿತದ ಎದುರಿಗಿದೆ.
ಬೀದರ್ ಜಿಲ್ಲೆಯಾದ್ಯಂತ ಈಗಾಗಲೇ ಶೇ 85ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಅಕ್ಟೋಬರ್ 31ರೊಳಗೆ ನಿಗದಿತ ಗುರಿ ತಲುಪುವ ವಿಶ್ವಾಸ ಇದೆಶಿಲ್ಪಾ ಶರ್ಮಾ ಜಿಲ್ಲಾಧಿಕಾರಿ ಬೀದರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.