ADVERTISEMENT

ನನ್ನ ಹೆಸರು ಹೇಳಿ ಬ್ಲಾಕ್ ಮೇಲ್: ಸಚಿವ ಚವಾಣ್ ಅಸಮಾಧಾನ

ಔರಾದ್: ಸಭೆಯಲ್ಲಿ ಸಚಿವ ಚವಾಣ್ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 2:50 IST
Last Updated 8 ಜೂನ್ 2022, 2:50 IST
ಔರಾದ್ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಅವರು ನಡೆಸಿದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು
ಔರಾದ್ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಅವರು ನಡೆಸಿದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು   

ಔರಾದ್: ‘ಕೆಲವರು ನನ್ನ ಹೆಸರು, ಜಾತಿ ಹೇಳಿಕೊಂಡು ವಸೂಲಿ, ಬ್ಲಾಕ್‌ಮೇಲ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ’ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಅಸಮಾಧಾನ ವ್ಯಕ್ತಪಡಿಸಿದರು.

ಸೋಮವಾರ ಇಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ‘ಉಪ ನೋಂದಣಾಧಿಕಾರಿಗಳು ತಮ್ಮ ಜಾತಿಯವರು ಎಂದು ಹೇಳಿಕೊಂಡು ನಿಯಮಬಾಹಿರವಾಗಿ ಹಣ ಪಡೆಯುತ್ತಿದ್ದಾರೆ. ಪ್ರತಿ ನೋಂದಣಿಗೆ ಇಂತಿಷ್ಟು ಹಣ ನಿಗದಿ ಮಾಡಲಾಗಿದೆ’ ಎಂಬ ದೂರು ಬಂದಿದೆ ಎಂದು ಸಚಿವರು ನೇರವಾಗಿ ಉಪ ನೋಂದಣಾಧಿಕಾರಿ ಪ್ರೇಮಲಾಬಾಯಿ ಅವರನ್ನು ತರಾಟೆಗೆ ತೆಗೆದುಕೊಂಡರು.

‘ತಾಲ್ಲೂಕಿಗೆ ಬರಲು ನಾನು ನಿಮಗೆ ಶಿಫಾರಸ್ಸು ಮಾಡಿಲ್ಲ. ನೀವೆ ಬಂದಿದ್ದೀರಿ. ಉತ್ತಮವಾಗಿ ಕೆಲಸ ಮಾಡಿದರೆ ಇಲ್ಲೆ ಇರ್ರಿ, ಇಲ್ಲ ನಮ್ಮ ಹೆಸರಿಗೆ ಕಲಂಕ ತಂದರೆ ನಾನು ಸುಮ್ಮನೆ ಕೂಡುವುದಿಲ್ಲ’ ಎಂದು ಎಚ್ಚರಿಸಿದರು.

ADVERTISEMENT

‘ನನ್ನ ಬಳಿ ಕೆಲ ತಿಂಗಳು ಪಿಎ ಕೆಲಸ ಮಾಡಿ ಬಿಟ್ಟು ಹೋದವರೊಬ್ಬರು ನನ್ನ ಹೆಸರು ಹೇಳಿ ಬ್ಲಾಕ್ ಮೇಲ್ ಮಾಡುವುದು ಗಮನಕ್ಕೆ ಬಂದಿದೆ. ನಾನು ಯಾರಿಗೂ ಕಾನೂನು ಬಾಹಿರ ಕೆಲಸ ಮಾಡಲು ಆಸ್ಪದ ಕೊಡುವುದಿಲ್ಲ. ಅಂತವರು ಯಾರೇ ನಿಮ್ಮ ಬಳಿ ಬಂದರೆ ನೇರವಾಗಿ ನನಗೆ ಮಾಹಿತಿ ನೀಡಿ’ ಎಂದು ಅಧಿಕಾರಿಗಳಿಗೆ ತಿಳಿಸಿದರು. ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ, ರಮೇಶ ಪೆದ್ದೆ, ತಾ.ಪಂ. ಇಒ ಬೀರೇಂದ್ರಸಿಂಗ್
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.