ADVERTISEMENT

ಅರಣ್ಯದೊಳಗೆ ದನಕರು ಮೇಯಿಸುವುದರ ಮೇಲೆ ನಿರ್ಬಂಧ: ಶಾಸಕ ಬೆಲ್ದಾಳೆ ಕಿಡಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 5:43 IST
Last Updated 25 ಜುಲೈ 2025, 5:43 IST
ಡಾ. ಶೈಲೇಂದ್ರ ಕೆ. ಬೆಲ್ದಾಳೆ
ಡಾ. ಶೈಲೇಂದ್ರ ಕೆ. ಬೆಲ್ದಾಳೆ   

ಬೀದರ್‌: ‘ಅರಣ್ಯ ಪ್ರದೇಶದೊಳಗೆ ದನಕರು, ಕುರಿ, ಮೇಕೆ ಇನ್ನಿತರೆ ಸಾಕು ಪ್ರಾಣಿಗಳನ್ನು ಮೇಯಿಸುವುದರ ಮೇಲೆ ನಿರ್ಬಂಧ ಹೇರಿರುವ ಕ್ರಮ ರೈತ ವಿರೋಧಿಯಾದುದು’ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆಗಿರುವ ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಕೆ. ಬೆಲ್ದಾಳೆ ಟೀಕಿಸಿದ್ದಾರೆ.

ಈ ಆದೇಶದ ಮೂಲಕ ರಾಜ್ಯ ಸರ್ಕಾರವು ಬಡವರು, ಹಿಂದುಳಿದವರು, ದಲಿತರು, ಹೈನುಗಾರರ ಹಾಗೂ ರೈತರ  ಹೊಟ್ಟೆ ಮೇಲೆ ಮಣ್ಣು ಹಾಕುವ ಕೆಲಸ ಮಾಡಿದೆ. ಅವೈಜ್ಞಾನಿಕವಾದ ಈ ಆದೇಶ ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಅರಣ್ಯ ಪ್ರದೇಶ ಹಾಗೂ ಅದರಲ್ಲಿನ ವನ್ಯಜೀವಿ ನಾಡಿನ ಬಹುಮೂಲ್ಯ ಸಂಪತ್ತು. ಅವುಗಳ ಸಂರಕ್ಷಣೆ, ಸಂವರ್ಧನೆ ತೀರ ಅಗತ್ಯ. ತಲೆತಲಾಂತರಗಳಿಂದ ಅರಣ್ಯ ಭೂಮಿಯನ್ನೇ ಅವಲಂಬಿಸಿದ ಲಕ್ಷಾಂತರ ದನಕರು, ಕುರಿ, ಮೇಕೆ ಮುಂತಾದ ಸಾಕು ಪ್ರಾಣಿಗಳ ಜೀವ ಹಿಂಡುವ ಹಾಗೂ ಇವುಗಳನ್ನೇ ನಂಬಿ ಬದುಕಿನ ಬಂಡಿ ಸಾಗಿಸುತ್ತಿರುವ ಬಡಪಾಯಿ ಜನರ ಮೇಲೆ ಅನ್ಯಾಯ ಮಾಡುವುದು ಸರ್ವಥಾ ಸಮರ್ಥನೀಯವಲ್ಲ. ಈ ಆದೇಶ ಸರ್ಕಾರದ ಜನ ವಿರೋಧಿ, ರೈತ ವಿರೋಧಿ ನೀತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರಣ್ಯ ಸಂರಕ್ಷಣೆ, ಸಂವರ್ಧನೆಗಾಗಿ ರಾಜ್ಯದ ಯಾವುದೇ ಅರಣ್ಯ ಪ್ರದೇಶದೊಳಗೆ ಸಾಕುಪ್ರಾಣಿಗಳನ್ನು ಮೇಯಿಸಲು ನಿರ್ಬಂಧ ಹೇರುವಂತೆ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ  ಸಚಿವ ಈಶ್ವರ ಬಿ. ಖಂಡ್ರೆ ಅವರು ಜುಲೈ 22ರಂದು ಹೊರಡಿಸಿದ ಟಿಪ್ಪಣಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಇದು ವಾಸ್ತವ ಏನೆಂಬುದು ತಿಳಿಯದೇ ಹಾಗೂ ಪೂರ್ವಾಪರ ವಿಚಾರ ಮಾಡದೇ ಫರ್ಮಾನು ಹೊರಡಿಸಿದಂತಿದೆ. ಸರ್ಕಾರ ಏನೇ ನಿರ್ಧಾರ ಕೈಗೊಳ್ಳುವಾಗ ಎಲ್ಲರ ಹಿತ ಗಮನಿಸಬೇಕು. ಅರಣ್ಯ ರಕ್ಷಣೆಯ ನೆಪದಲ್ಲಿ ಲಕ್ಷಾಂತರ ಜನ-ಜಾನುವಾರುಗಳ ಬದುಕು ಮೂರಾಬಟ್ಟೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಬೀದರ್‌ನಿಂದ ಹಿಡಿದು ಚಾಮರಾಜನಗರವರೆಗೆ ಲಕ್ಷಾಂತರ ರೈತರು ಭೂ ಹೀನರಿದ್ದಾರೆ. ಇವರು ತಮ್ಮ ದನಕರು, ಕುರಿ, ಮೇಕೆ ಹಾಗೂ ಸಾಕು ಪ್ರಾಣಿಗಳನ್ನು ಮೇಯಿಸಲು  ಶತ-ಶತಮಾನಗಳಿಂದಲೂ ಅಕ್ಕ-ಪಕ್ಕದ ಅರಣ್ಯ ಪ್ರದೇಶ  ಸೇರಿದಂತೆ ಸರ್ಕಾರಿ ಕಂದಾಯ ಜಮೀನು, ಗೈರಾಣ ಭೂಮಿಯೇ ಅವಲಂಬಿಸಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಗೈರಾಣ, ಗೋಮಾಳ, ಕಂದಾಯ ಜಾಗ ಬಹುತೇಕ ಕಡೆ ಇಲ್ಲಕ್ಕೆ ಸಮಾನವಾಗಿದೆ. ಇಂತಹದರಲ್ಲಿ ಅರಣ್ಯ ಪ್ರದೇಶವೇ ಈ ಎಲ್ಲ ಜೀವ ಸಂಕುಲಗಳಿಗೆ ಏಕೈಕ ಆಸರೆಯಾಗಿದೆ. ಇದನ್ನು ನೆಚ್ಚಿಯೇ ಹೈನುಗಾರಿಕೆ ಸೇರಿ ವಿವಿಧ ಉಪ ಕಸುಬು ಮಾಡುತ್ತ ಅಸಂಖ್ಯ ಬಡ  ಜನರು ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಈಗ ಅರಣ್ಯ ಪ್ರದೇಶದೊಳಗೆ ಎಂಟ್ರಿ ಬೇಡ ಎಂದರೆ ಹೇಗೆ? ಇವರ ಗತಿ ಏನು ಎಂದು ಡಾ. ಬೆಲ್ದಾಳೆ ಪ್ರಶ್ನಿಸಿದ್ದಾರೆ.

ಸರ್ಕಾರದ ಈ ಆದೇಶ ಹಿಂದುಳಿದ ಬೀದರ್ ಜಿಲ್ಲೆಯ ಅನೇಕ ಬಡವರು, ರೈತರಲ್ಲೂ ತಲ್ಲಣ ಸೃಷ್ಟಿಸಿದೆ. ಬೀದರ್ ಜಿಲ್ಲೆಯ ಹಲವು ಕಡೆಗಳಲ್ಲಿ ಅರಣ್ಯ ಪ್ರದೇಶಗಳಿವೆ. ಸುತ್ತಲಿನ ಹತ್ತಾರು ಗ್ರಾಮಗಳ ಬಡವರ ಜಾನಾವಾರುಗಳು ಮೇಯಲು ಮುಖ್ಯವಾಗಿ ಈ ಅರಣ್ಯ ಪ್ರದೇಶಗಳೇ ಆಧಾರವಾಗಿವೆ. ಇದೀಗ ಇಲ್ಲಿ ಜಾನುವಾರುಗಳಿಗೆ ಪ್ರವೇಶ ನಿರ್ಬಂಧ ಹೇರಿದರೆ ಏನು ಮಾಡೋದು ಎಂಬ ಚಿಂತೆ ಜನರಿಗೆ, ರೈತರಿಗೆ ಕಾಡುತ್ತಿದೆ. ಕೂಡಲೇ ಸರ್ಕಾರ ತನ್ನ ಆದೇಶ ಹಿಂಪಡೆಯದಿದ್ದರೆ ಪಕ್ಷವು ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.

ಕುರಿಗಾಹಿಗಳಿಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಹೇಳುತ್ತಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೇಕ ಸಲ ಕುರಿಗಾಹಿಗಳಿಗೆ ಅಭಯ ನೀಡುವ ಮಾತನಾಡಿದ್ದಾರೆ. ಈಗ ದನಕರುಗಳ ಜೊತೆಗೆ ಕುರಿ ಮೇಕೆಗಳಿಗೂ ಅರಣ್ಯದೊಳಗೆ ಎಂಟ್ರಿಗೆ ಬ್ಯಾನ್ ಮಾಡಿರುವುದು ಈ ಕಸುಬು ನಂಬಿದವರಿಗೆ ಆಘಾತ ನೀಡಿದೆ. ಸರ್ಕಾರ ತಕ್ಷಣ ಈ ಆದೇಶ ಹಿಂಪಡೆದು ಬಡವರಲ್ಲಿ ಮನೆ ಮಾಡಿದ ಆತಂಕ ನಿವಾರಿಸಬೇಕು.
ಡಾ.ಶೈಲೇಂದ್ರ ಬೆಲ್ದಾಳೆ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT