ADVERTISEMENT

ಖೂಬಾ, ಪ್ರಭು ಚವಾಣ್‌ರಿಂದ ಮತದಾರರಿಗೆ ಬೆದರಿಕೆ: ಈಶ್ವರ ಖಂಡ್ರೆ ಗಂಭೀರ ಆರೋಪ

‘ಜಗಳಕ್ಕೆ ಪ್ರಯತ್ನಿಸಿದ ಬಿಜೆಪಿ ಅಭ್ಯರ್ಥಿ ಬೆಂಬಲಿಗರು’

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 1:47 IST
Last Updated 11 ಡಿಸೆಂಬರ್ 2021, 1:47 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೀದರ್: ‘ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಬಿಜೆಪಿ ಪರವಾಗಿಯೇ ಮತ ಚಲಾಯಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಬೆದರಿಕೆ ಹಾಕಿದ್ದರು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಗಂಭೀರ ಆರೋಪ ಮಾಡಿದರು.

‘ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಹಣದ ಹೊಳೆ ಹರಿಸಿದೆ. 15ನೇ ಹಣಕಾಸು ಯೋಜನೆ, ಉದ್ಯೋಗ ಖಾತರಿ ಯೋಜನೆ ಬಂದ್ ಮಾಡಿಸುತ್ತೇವೆ. ವಸತಿ ಯೋಜನೆ ಸ್ಥಗಿತಗೊಳಿಸುತ್ತೇವೆ. ನಿಮ್ಮ ನೆಂಟರನ್ನು ವರ್ಗಾವಣೆ ಮಾಡಿಸುತ್ತೇವೆ ಎಂದು ಬೆದರಿಕೆ ಒಡ್ಡಿದ್ದರು’ ಎಂದು ನಗರದಲ್ಲಿ ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ದೂರಿದರು.

‘ಮತದಾರರಿಗೆ ಆಮಿಷ ಒಡ್ಡಿ ಬೆಳ್ಳಿ ನಾಣ್ಯ ಹಾಗೂ ಮಹಿಳಾ ಸದಸ್ಯೆಯರಿಗೆ ಸೀರೆ ವಿತರಿಸಿದ್ದಾರೆ. ಸದಸ್ಯರಿಗೆ ಬೆದರಿಕೆ ಹಾಕಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಆದರೆ, ಸ್ಥಳೀಯ ಸಂಸ್ಥೆಗಳ ಸದಸ್ಯರು ಇವರ ದುರಹಂಕಾರ ಹಾಗೂ ದರ್ಪಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ಪರ ಮತ ಚಲಾಯಿಸಿದ್ದಾರೆ. ಈ ಚುನಾವಣೆ ಫಲಿತಾಂಶದಿಂದ ಬಿಜೆಪಿ ಅವನತಿ ಆರಂಭವಾಗಲಿದೆ’ ಎಂದರು.

ADVERTISEMENT

‘ನಾನು ಬೆಳಿಗ್ಗೆ ಮತದಾನ ಮಾಡಲು ಹೋದಾಗಿನಿಂದ ಕೊನೆಯ ವರೆಗೂ ನನ್ನ ಬೆನ್ನು ಹತ್ತಿ ಕಾರಿಗೆ ಅಡ್ಡಗಟ್ಟಿ ಏನಾದರೂ ಅಪಾಯ ಮಾಡಬೇಕು ಎಂದು ಬಿಜೆಪಿಯವರು ಸಂಚು ಮಾಡಿದ್ದರು. ಸಮಾಜಘಾತುಕ ಶಕ್ತಿಗಳನ್ನು ಕರೆದುಕೊಂಡು ನನ್ನ ಕಾರಿನ ಹಿಂದೆ ಸುತ್ತಾಡಿದ್ದಾರೆ’ ಎಂದು ತಿಳಿಸಿದರು.

‘ಜ್ಯಾಂತಿಯ ವೈಜಿನಾಥ ಪಾಟೀಲರ ಹೊಲದಲ್ಲಿ ನಿರ್ಮಿಸಿದ ಕಲ್ಯಾಣ ಮಂಟಪಕ್ಕೆ ಭೇಟಿ ಕೊಟ್ಟಾಗ ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಬೆಂಬಲಿಗರು 15 ನಿಮಿಷ ಕಾಲು ಕೆರೆದು ಜಗಳ ತೆಗೆಯಲು ಪ್ರಯತ್ನ ಮಾಡಿದರು. ನಾನು ಸಂಯಮ ಕಾಯ್ದುಕೊಂಡು ಶಾಂತಿ ಕದಡದಂತೆ ನೋಡಿಕೊಂಡೆ’ ಎಂದರು.

‘ನಾನು ಮೊದಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಭಾಲ್ಕಿ ಎಸಿಪಿಗೆ ಮಾಹಿತಿ ನೀಡಿದ್ದೆ. ಪೊಲೀಸರು ಸ್ಥಳಕ್ಕೆ ಬಂದರೂ ಮೂಕ ಪ್ರೇಕ್ಷಕರಾಗಿದ್ದರು’ ಎಂದು ತಿಳಿಸಿದರು.

ಭಾಲ್ಕಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ವೈಜಿನಾಥ ಪಾಟೀಲ ಜ್ಯಾಂತಿ, ಕಾಂಗ್ರೆಸ್ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಹಣಮಂತರಾವ್ ಚವಾಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.