ಜನವಾಡ: ಬೀದರ್ ತಾಲ್ಲೂಕಿನ ಬಗದಲ್ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಸಿರು ಪ್ರೀತಿಯಿಂದಾಗಿ ಗಮನ ಸೆಳೆಯುತ್ತಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪರಿಸರ ಕಾಳಜಿಯ ಫಲವಾಗಿ ಈಗ ಶಾಲೆಯ ಆವರಣ ಹಸಿರುಮಯವಾಗಿದೆ.
‘ಗಿಡ-ಮರಗಳಿಂದಾಗಿ ಆಹ್ಲಾದಕರ ವಾತಾವರಣ ನಿರ್ಮಾಣವಾಗಿದೆ. ಶಾಲೆಯ ಸೌಂದರ್ಯ ಹೆಚ್ಚಿದೆ. ಪಾಲಕರು, ಅಧಿಕಾರಿಗಳಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ.
ಶಾಲೆಯ ಆವರಣದಲ್ಲಿ ಮಾವು, ನೇರಳೆ, ಜಾಪಾಳ, ಬಾರೆ, ಹಲಸು, ಕಾಜು, ತೆಂಗು, ಹುಣಸೆ, ಆಲ, ಅರಳಿ, ಬೇವು, ಮಹಾಗನಿ, ಸಾಗವಾನಿ, ಅಶೋಕ, ಚೆರ್ರಿ, ಸಿಲ್ವರ್ ಓಕ್ ಸೇರಿ ವಿವಿಧ ಬಗೆಯ ಗಿಡ-ಮರಗಳು ಇವೆ.
ಔಷಧ ಸಸ್ಯಗಳ ಪ್ರತ್ಯೇಕ ವನ ಸಹ ಇದ್ದು, ಇದರಲ್ಲಿ ಸರ್ಪಗಂಧಿ, ನೋನಿ, ಅಡುಸೋಗೆ, ತುಳಸಿ, ಅಡಿ ಉತ್ತರಾಣಿ, ದೊಡ್ಡ ಪತ್ರೆ, ಪಾರಿಜಾತ ಸೇರಿ 100 ಬಗೆಯ ಸಸಿಗಳು ಇವೆ. ವಿದ್ಯಾರ್ಥಿಗಳೇ ಮರ-ಗಿಡಗಳನ್ನು ದತ್ತು ಪಡೆದು, ನೀರುಣಿಸಿ, ಪೋಷಿಸಿ ಬೆಳೆಸುತ್ತಿರುವುದು ವಿಶೇಷವಾಗಿದೆ. ಕಳೆದ ರಕ್ಷಾ ಬಂಧನ ವೇಳೆ ಶಿಕ್ಷಕರು ವಿದ್ಯಾರ್ಥಿಗಳಿಂದ ಮರಗಳಿಗೆ ರಾಖಿ ಕಟ್ಟಿಸಿ, ವಿದ್ಯಾರ್ಥಿಗಳು ಹಾಗೂ ಮರಗಳ ಬಾಂಧವ್ಯ ಇನ್ನಷ್ಟು ಗಟ್ಟಿಗೊಳಿಸಿದ್ದಾರೆ.
‘ಶಾಲೆಯ ಆವರಣ ಹಸಿರುಮಯ ಆಗಿಸುವ ಸಂಕಲ್ಪ ತೊಟ್ಟು ಮೊದಲಿಗೆ 2015 ರಲ್ಲಿ 200 ಸಸಿಗಳನ್ನು ನೆಟ್ಟೆವು. ಮೂರು ಬಾರಿ ಸಸಿ ನೆಡುವ ಅಭಿಯಾನ ನಡೆಸಿದೆವು. ಪ್ರತಿ ವರ್ಷ ಸಸಿಗಳನ್ನು ನೆಡುತ್ತಲೇ ಬಂದೆವು. ವಿದ್ಯಾರ್ಥಿಗಳು ತಮ್ಮ ಜನ್ಮದಿನದ ಪ್ರಯುಕ್ತ ಸಸಿಗಳನ್ನು ನೆಟ್ಟರು. ಈಗ ಸಸಿಗಳ ಸಂಖ್ಯೆ 1,800ಕ್ಕೆ ತಲುಪಿದೆ’ ಎಂದು ತಿಳಿಸುತ್ತಾರೆ ಶಾಲೆಯ ಪ್ರಾಚಾರ್ಯ ಚನ್ನಬಸವ ಹೇಡೆ.
‘ಶಾಲೆಯ ಆವರಣದಲ್ಲಿ ಆಟದ ಮೈದಾನ ಹೊರತುಪಡಿಸಿ, ಉಳಿದ ಎಲ್ಲೆಡೆ ಹಣ್ಣು, ಅಲಂಕಾರಿಕ ಹಾಗೂ ಔಷಧ ಸಸ್ಯಗಳನ್ನು ನೆಡಲಾಗಿದೆ. ಆರಂಭದಲ್ಲಿ ನೆಟ್ಟ ಗಿಡಗಳು ದೊಡ್ಡದಾಗಿ ಬೆಳೆದಿವೆ. 6 ರಿಂದ 10ನೇ ತರಗತಿವರೆಗಿನ ಶಾಲೆಯಲ್ಲಿ 250 ವಿದ್ಯಾರ್ಥಿಗಳು ಇದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೂ ಮರ-ಗಿಡಗಳನ್ನು ದತ್ತು ಕೊಡಲಾಗಿದೆ. ಅವರೇ ಭಾನುವಾರ, ರಜಾ ದಿನ ಹಾಗೂ ಅವಶ್ಯಕತೆ ಇದ್ದಾಗ ಕೊಳವೆಬಾವಿಯಿಂದ ಮರಗಳಿಗೆ ನೀರುಣಿಸುತ್ತಾರೆ. ಬೋಧಕ, ಬೋಧಕೇತರ ಸಿಬ್ಬಂದಿಯೂ ಮರಗಳ ಸಂರಕ್ಷಣೆ ಮಾಡುತ್ತಾರೆ’ ಎಂದು ಅವರು ತಿಳಿಸಿದರು.
‘ಶಾಲಾ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ಬಟ್ಟೆ ಚೀಲಗಳ ಬಳಕೆಗೆ ಮಾತ್ರ ಅವಕಾಶ ಇದೆ. ಶಾಲೆ ಸಂಪೂರ್ಣ ಪರಿಸರ ಸ್ನೇಹಿಯಾಗಿದೆ. ಪರಿಸರದ ಉಳಿವಿಗೆ ಎಲ್ಲರೂ ಹಸಿರು ಪ್ರೀತಿ ಬೆಳೆಸಿಕೊಳ್ಳಬೇಕಿದೆ’ ಎಂದು ಹೇಳಿದರು.
ಅರಣ್ಯ ಇಲಾಖೆ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಪಾಲಕರ ಸಹಕಾರದಿಂದ ಶಾಲೆಯ ಆವರಣ ಹಸಿರಾಗಿಸಲು ಸಾಧ್ಯವಾಗಿದೆಚನ್ನಬಸವ ಹೇಡೆ, ಪ್ರಾಚಾರ್ಯ
ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ಶ್ರಮದಿಂದ ಶಾಲೆಯಲ್ಲಿ ಉದ್ಯಾನ ನಿರ್ಮಾಣವಾಗಿದೆ. ವಿದ್ಯಾರ್ಥಿಗಳಿಗೆ ನಿಸರ್ಗದ ಮಡಿಲಲ್ಲಿ ಓದಲು ಅನುಕೂಲವಾಗಿದೆ.ರೋಹಿತ್ ಲಾಲಪ್ಪ 10ನೇ ತರಗತಿ ವಿದ್ಯಾರ್ಥಿ
ಶಾಲೆಯಲ್ಲಿ ಸಂಪೂರ್ಣ ಹಸಿರಿದೆ. ಮಕ್ಕಳ ಭೇಟಿಗೆ ಹೋದಾಗ ಕೆಲ ಹೊತ್ತು ನಿಸರ್ಗದ ಮಡಿಲಲ್ಲಿ ಕಾಲ ಕಳೆಯುತ್ತೇವೆ. ಶಾಲೆಯ ಪರಿಸರ ಪ್ರೇಮ ಪ್ರಶಂಸನೀಯಬಜರಂಗ ತಮಗೊಂಡ ಪೋಷಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.