ADVERTISEMENT

ಮಾತೃಭಾಷೆಗೆ ಮೊದಲ ಆದ್ಯತೆ ಸಿಗಲಿ: ಬಸವಲಿಂಗ ಪಟ್ಟದ್ದೇವರ ಅಭಿಮತ

ಔರಾದ್ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಸವಲಿಂಗ ಪಟ್ಟದ್ದೇವರ ಅಭಿಮತ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 4:24 IST
Last Updated 5 ಫೆಬ್ರುವರಿ 2026, 4:24 IST
ಔರಾದ್‌ನಲ್ಲಿ ನಡೆದ 7ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಪ್ರಜಾವಾಣಿ’ ದಿನದರ್ಶಿಕೆಯನ್ನು ಗಣ್ಯರು  ಬಿಡುಗಡೆ ಮಾಡಿದರು
ಔರಾದ್‌ನಲ್ಲಿ ನಡೆದ 7ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಪ್ರಜಾವಾಣಿ’ ದಿನದರ್ಶಿಕೆಯನ್ನು ಗಣ್ಯರು  ಬಿಡುಗಡೆ ಮಾಡಿದರು    

ಔರಾದ್: ‘ಇಂಗ್ಲಿಷ್ ಪ್ರಭಾವದ ಈ ಕಾಲಘಟ್ಟದಲ್ಲಿ ನಮ್ಮ ಮೂಲ ಗುರುತಾದ ಮಾತೃಭಾಷೆಯ ಉಳಿವು ಅಗತ್ಯ. ರಷ್ಯಾ, ಚೀನಾ ದೇಶಗಳಲ್ಲಿ ತಮ್ಮ ಭಾಷೆಯಲ್ಲೇ ಶಿಕ್ಷಣ, ಆಡಳಿತ ಹಾಗೂ ತಂತ್ರಜ್ಞಾನ ಅಭಿವೃದ್ಧಿ ನಡೆಯುತ್ತಿರುವುದು ಗಮನಾರ್ಹ. ಅದೇ ರೀತಿ ನಮ್ಮ ದೇಶದಲ್ಲೂ ಮಾತೃಭಾಷೆಗೆ ಪ್ರಥಮ ಸ್ಥಾನ ಸಿಗಬೇಕು’ ಎಂದು ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.

ಇಲ್ಲಿಯ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ ತಾಲ್ಲೂಕು ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ದೇಶದ ಬೇರೆ ಬೇರೆ ಕಡೆಯಿಂದ ಕಲ್ಯಾಣ ನಾಡಿಗೆ ಬಂದವರು ಇಲ್ಲಿ ಕನ್ನಡ ಕಲಿತು ಕನ್ನಡದಲ್ಲೇ ವಚನ ಬರೆದರು. ಆದರೆ ನಾವು ಮಾತ್ರ ನಮ್ಮ ಮಾತೃ ಭಾಷೆಗೆ ಕಡೆಗಣನೆ ಮಾಡುತ್ತಿದ್ದೇವೆ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆದರೆ ಮಕ್ಕಳಿಗೆ ವಿಷಯಗ್ರಹಿಕೆ ಸುಲಭವಾಗುತ್ತದೆ, ಚಿಂತನೆ ಶಕ್ತಿಗೆ ಬಲ ಸಿಗುತ್ತದೆ, ಸಂಸ್ಕೃತಿ ಮತ್ತು ಪರಂಪರೆ ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತದೆ ಎಂದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಕೃತಿಕ ಚಿಂತಕರು ಚಟ್ನಳ್ಳಿ ಮಹೇಶ ಕನ್ನಡ ನಾಡಿನಲ್ಲಿ ಇರುವವರೆಲ್ಲರೂ ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ನಮ್ಮ ಉಸಿರಾಗಬೇಕು. ಕುಲ ಕನ್ನಡ, ಧರ್ಮ ಮಾನವ ಎಂಬಂತೆ ಭಾಷೆ ನಮ್ಮ ಸಂಸ್ಕೃತಿ, ಮಾನವೀಯತೆಯೇ ನಮ್ಮ ಧರ್ಮವಾಗಬೇಕು ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಆಶಯ ನುಡಿ ನುಡಿದರು. ತಾಲ್ಲೂಕು ಅಧ್ಯಕ್ಷ ಬಾಲಾಜಿ ಅಮರವಾಡಿ ಸ್ವಾಗತಿಸಿದರು.

ಸಮ್ಮೇಳನಾಧ್ಯಕ್ಷ ಮನ್ಮಥ ಡೋಳೆ, ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಸಂಜೀವಕುಮಾರ ಜುಮ್ಮಾ, ತಹಶೀಲ್ದಾರ್ ಮಹೇಶ ಪಾಟೀಲ, ತಾ.ಪಂ ಇಒ ಕಿರಣ ಪಾಟೀಲ, ಕೃಷಿ ತಜ್ಞೆ ಕವಿತಾ ಮಿಶ್ರಾ, ಸಾಹಿತಿ ಶಿವಶಂಕರ ಟೋಕರೆ, ಕಾಲೇಜು ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಕಾಂತ ಶಾಬಾದಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ. ರಂಗೇಶ, ಶಿವರಾಜ ಅಲ್ಮಾಜೆ, ರಾಮಶೆಟ್ಟಿ ಪನ್ನಾಳೆ, ಖಂಡೋಬಾ ಕಂಗಟೆ, ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಜಾಹೀರಾತು ವಿಭಾಗದ ಎಜಿಎಂ ಗುರುಪ್ರಕಾಶ ಮುಗಳಿ, ದೇವೇಂದ್ರ ಕರಂಜೆ ಸೇರಿದಂತೆ ಮತ್ತಿತರರು ಇದ್ದರು.

‘ಗಡಿಯಲ್ಲಿ ಕನ್ನಡ ಸಾಹಿತಿಗಳು ಪತ್ರಿಕೆಗಳು ಬೆಳೆಯಬೇಕು’

ನಮ್ಮ ಮಾತೃಭಾಷೆ ಬಂಜಾರಾ ಆದರೂ ಕನ್ನಡದ ಬಗ್ಗೆ ನನಗೆ ತುಂಬಾ ಅಭಿಮಾನ ಇದೆ. ಹೀಗಾಗಿ ಈಗ ಕನ್ನಡ ಕಲಿತಿದ್ದೇನೆ ಎಂದು ಶಾಸಕ ಪ್ರಭು ಚವಾಣ್ ಹೇಳಿದರು. ಔರಾದ್ ತಾಲ್ಲೂಕಿನಲ್ಲಿ ಯಾವುದೇ ಭಾಷಾ ವಿವಾದ ಇಲ್ಲ. ಇಲ್ಲಿ ಎಲ್ಲ ಭಾಷಿಕರು ಪರಸ್ಪರ ಸಹೋದರತೆಯಿಂದ ಬಾಳುತ್ತಾರೆ. ಅನ್ಯ ಭಾಷಿಕರು ಕನ್ನಡದ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದಾರೆ. ಅವರು ಕನ್ನಡ ಕಲಿಯಲು ಮುಂದೆ ಬರುತ್ತಿದ್ದಾರೆ. ಹೀಗಾಗಿ ಇಲ್ಲಿ ಕನ್ನಡ ಶಾಲೆಗಳು ಜಾಸ್ತಿಯಾಗಬೇಕು. ಕನ್ನಡ ಪತ್ರಿಕೆ ಓದುಗರ ಸಂಖ್ಯೆ ಹೆಚ್ಚಬೇಕು ಎಂದು ತಿಳಿಸಿದರು. ನನಗೆ ಕನ್ನಡ ಪತ್ರಿಕೆಗಳು ಹಾಗೂ ಸಾಹಿತಿಗಳ ಬಗ್ಗೆ ತುಂಬಾ ಗೌರವ ಇದೆ. ಅನೇಕ ಸಾಹಿತಿಗಳ ಪುಸ್ತಕ ಪ್ರಕಟಣೆಗೆ ನೆರವು ನೀಡಿದ್ದೇನೆ. ಮುಂದೆಯೂ ನೀಡುತ್ತೇನೆ. ನಾನು ಶಾಸಕನಾದ ನಂತರ ಆರು ತಾಲ್ಲೂಕು ಮಟ್ಟದ ಹಾಗೂ ಅನೇಕ ವಲಯ ಸಮ್ಮೇಳನ ಯಶಸ್ವಿಯಾಗಿ ನಡೆದಿವೆ. ಮುಂದೆಯೂ ಕನ್ನಡ ಕೆಲಸಕ್ಕೆ ತನು ಮನು ಧನದಿಂದ ಸಹಕರಿಸುತ್ತೇನೆ ಎಂದು ಹೇಳಿದರು.

‘ಕನ್ನಡ ಮಾಧ್ಯಮ ಶಾಲೆಗಳಿಗೆ ನಿಯಮದಲ್ಲಿ ಸರಳೀಕರಣ ಅಗತ್ಯ’ 

ಗಡಿ ಭಾಗದ ಕನ್ನಡ ಶಾಲೆಗಳ ಬಗ್ಗೆ ಸರ್ಕಾರ ವಿಶೇಷ ಕಾಳಜಿ ವಹಿಸಬೇಕು ಎಂದು ಬುಧವಾರ ಇಲ್ಲಿ ನಡೆದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಮನ್ಮಥ ಡೋಳೆ ಹೇಳಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕನ್ನಡ ಶಾಲೆ ಹಾಗೂ ಕನ್ನಡಿಗರ ಬಗ್ಗೆ ಹೆಚ್ಚು ಮಾತನಾಡಿದ ಅವರು ಸರ್ಕಾರ ಅನೇಕ ಕಠಿಣ ನಿಯಮ ಮಾಡುತ್ತಿರುವುದು ಕನ್ನಡ ಶಾಲೆಗೆ ಕುತ್ತು ಬಂದಿದೆ. ಹೀಗಾಗಿ ಸರ್ಕಾರ ಕನ್ನಡ ಶಾಲೆ ವಿಷಯ ಬಂದಾಗ ಮುಕ್ತ ಮನಸ್ಸಿನಿಂದ ಸಹಕಾರ ನೀಡಬೇಕು ಎಂದರು. ಈ ಭಾಗದಲ್ಲಿ ಹೊಸ ರೈಲು ಮಾರ್ಗ ಆರಂಭಿಸುವುದು ಇಲ್ಲಿ ಕಾರ್ಖಾನೆಗಳು ಆರಂಭಿಸಿ ಯುವಕರಿಗೆ ಕೆಲಸ ಕೊಡುವುದು ಇಲ್ಲಿಯ ನವಿಲು ಹಾಗೂ ಜಿಂಕೆ ಸಂತತಿ ಉಳಿಯಲು ಕ್ರಮ ಕೈಗೊಳ್ಳಬೇಕು. ಇಲ್ಲಿ ಸರ್ಕಾರಿ ಮಹಿಳಾ ಪದವಿ ಮಹಾವಿದ್ಯಾಲಯ ಸೇರಿದಂತೆ ವೃತ್ತಿಪರ ಕಾಲೇಜು ತೆರೆಯಬೇಕು. ಕೃಷಿ ನೀರಾವರಿ ಹೈನುಗಾರಿಕೆಗೆ ಉತ್ತೇಜನ ನೀಡಲು ವಿಶೇಷ ಕಾಳಜಿ ವಹಿಸುವಂತೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.