ADVERTISEMENT

ಸಾಮಾಜಿಕ, ಆರ್ಥಿಕ ಸಮೀಕ್ಷೆ: ನೆಟ್‌ವರ್ಕ್‌ಗಾಗಿ ಮರ, ಟ್ಯಾಂಕ್‌ ಏರಿದರು!

ಸಾಮಾಜಿಕ, ಆರ್ಥಿಕ ಸಮೀಕ್ಷೆ: ನಿವಾರಣೆಯಾಗದ ತೊಡಕು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 0:21 IST
Last Updated 25 ಸೆಪ್ಟೆಂಬರ್ 2025, 0:21 IST
ಬೀದರ್‌ ಜಿಲ್ಲೆ ಹುಲಸೂರ ತಾಲ್ಲೂಕಿನ ಮಿರಖಲ್‌ ಗ್ರಾಮದಲ್ಲಿ ಸಮೀಕ್ಷಕರೊಬ್ಬರು ಮರವೇರಿರುವುದು
ಬೀದರ್‌ ಜಿಲ್ಲೆ ಹುಲಸೂರ ತಾಲ್ಲೂಕಿನ ಮಿರಖಲ್‌ ಗ್ರಾಮದಲ್ಲಿ ಸಮೀಕ್ಷಕರೊಬ್ಬರು ಮರವೇರಿರುವುದು   

ಬೀದರ್‌: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನೆಟ್‌ವರ್ಕ್ ಸಮಸ್ಯೆ ಮುಂದುವರಿದಿದೆ. ಸಮೀಕ್ಷಕರೊಬ್ಬರು ನೆಟ್‌ವರ್ಕ್‌ಗಾಗಿ ಜಿಲ್ಲೆಯ ಹುಲಸೂರ ತಾಲ್ಲೂಕಿನ ಮಿರಖಲ್‌ ಗ್ರಾಮದಲ್ಲಿ ಬುಧವಾರ ಮರವೇರಿದ್ದಾರೆ. 

ಸಮೀಕ್ಷಕ, ಶಿಕ್ಷಕ ಗೋವಿಂದ ಮಹಾರಾಜ ಅವರು ಸಮೀಕ್ಷೆಗಾಗಿ ಗ್ರಾಮಕ್ಕೆ ತೆರಳಿದ್ದರು. ಆದರೆ, ನೆಟ್‌ವರ್ಕ್‌ ಸಿಗಲಿಲ್ಲ. ಆಗ ಬೇವಿನ ಮರವೇರಿದ್ದಾರೆ. ಆದರೆ, ಅವರಿಗೆ ಕರ್ನಾಟಕದ ಬದಲು ನೆರೆಯ ಮಹಾರಾಷ್ಟ್ರದ ನೆಟ್‌ವರ್ಕ್‌ ದೊರೆತಿದೆ. ಮರದಿಂದ ಕೆಳಗಿಳಿದು ಸಮೀಕ್ಷೆಗೆ ಮುಂದಾದಾಗ ಸರ್ವರ್‌ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಅವರು ಸಮೀಕ್ಷೆ ಕೈಗೊಳ್ಳಲು ಸಾಧ್ಯವಾಗಲಿಲ್ಲ.

ಹುಲಸೂರ ತಾಲ್ಲೂಕಿನ ಬೇಲೂರಿನಲ್ಲಿ ಶಿಕ್ಷಕರೊಬ್ಬರು ನೀರಿನ ಟ್ಯಾಂಕ್‌ ಏರಿ ಪ್ರಯತ್ನಿಸಿದ್ದಾರೆ. ಆದರೂ ಸಮಸ್ಯೆ ಬಗೆಹರಿಯಲಿಲ್ಲ. ಜಿಲ್ಲೆಯಲ್ಲಿ ಮೂರನೇ ದಿನವೂ ಸರ್ವರ್‌ ಸಮಸ್ಯೆ ಕಾಡಿತು.

ADVERTISEMENT

ಕಲಬುರಗಿ ಜಿಲ್ಲೆಯಲ್ಲಿ ತಾಂತ್ರಿಕ ತೊಂದರೆ ಮುಂದುವರಿದಿತ್ತು. ‘ಬೆಳಿಗ್ಗೆಯಿಂದ ಒಂದು ಮನೆಯಷ್ಟೇ ಸಮೀಕ್ಷೆ ಸಾಧ್ಯವಾಗಿದೆ. ಎರರ್‌, ಟೈಮ್‌ ಔಟ್‌, ಕುಟುಂಬದ ಚಿತ್ರ ಅಪ್‌ಲೋಡ್‌ನಲ್ಲಿ ತಾಂತ್ರಿಕ ತೊಂದರೆಯಂಥ ಸಮಸ್ಯೆ ಕಾಡಿತು’ ಎಂದು ನಗರದಲ್ಲಿ ಸಮೀಕ್ಷಕರೊಬ್ಬರು ಹೇಳಿದರು.

ಹುಲಸೂರ ತಾಲ್ಲೂಕಿನ ಬೇಲೂರ ಗ್ರಾಮದಲ್ಲಿ ನೀರಿನ ಟ್ಯಾಂಕ್‌ ಏರಿ ಸಮೀಕ್ಷೆಗೆ ಪ್ರಯತ್ನ ಪಟ್ಟರು

ಜಿಲ್ಲಾಧಿಕಾರಿಗೆ ಮೊರೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲೂ ತಾಂತ್ರಿಕ ಸಮಸ್ಯೆ ಮುಂದುವರಿದಿದ್ದರಿಂದ ಸಮೀಕ್ಷಕರು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಇಲ್ಲಿ ನಡೆಯುತ್ತಿದ್ದ ಕಾಫಿ ದಸರೆ ವೇಳೆಯೇ ಕೆಲವು ಸಮೀಕ್ಷಕರು ಭೇಟಿ ಮಾಡಿ ಸಮಸ್ಯೆ ಕುರಿತು ಹೇಳಿಕೊಂಡರು. ನಂತರ, ಕೆಲವರು ಕಚೇರಿಯಲ್ಲಿ ಮನವಿ ಸಲ್ಲಿಸಿದರು.

‘ಒಟಿಪಿ ಬಾರದೇ ಸಮೀಕ್ಷೆ ಪೂರ್ಣಗೊಳ್ಳುತ್ತಿಲ್ಲ. ಒಂದೊಂದು ಮನೆಯಲ್ಲೂ ಸಮಯ ಆಗುತ್ತಿದೆ. ಮನೆಯವರೂ ಬೇಸರ ಮಾಡಿಕೊಳ್ಳುತ್ತಿದ್ದಾರೆ’ ಎಂದು ಸಮೀಕ್ಷಕರೊಬ್ಬರು ತಿಳಿಸಿದರು.

‘ಒಂದು ಜಿಲ್ಲೆ ಅಥವಾ ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ನಡೆಸಿ, ಸಮಸ್ಯೆ ನಿವಾರಿಸಿ ನಂತರ ಇಡೀ ರಾಜ್ಯಕ್ಕೆ ಅನ್ವಯಿಸ
ಬೇಕಾಗಿತ್ತು. ಆದರೆ, ಸಿದ್ಧತೆ ಇಲ್ಲದೇ ಸಮೀಕ್ಷೆಗೆ ಮುಂದಾಗಿದ್ದು ತೊಡಕಾಗಿದೆ’ ಎಂದು ನಾಗರಿಕರೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.