ಭಾಲ್ಕಿ: ಪಟ್ಟಣದಲ್ಲಿರುವ ಸುಮಾರು 13 ಎಟಿಎಂಗಳಿಗೆ ಭದ್ರತಾ ಸಿಬ್ಬಂದಿ ಇಲ್ಲದಿರುವುದರಿಂದ ಬ್ಯಾಂಕ್ ಗ್ರಾಹಕರಿಗೆ ಹಣದ ಭದ್ರತೆಯ ಜೊತೆಗೆ ಅವರ ಜೀವದ ಭಯವೂ ಕಾಡುತ್ತಿದೆ.
ಪಟ್ಟಣದ ಸುಭಾಷಚಂದ್ರ ಬೋಸ್ ವೃತ್ತ ಸಮೀಪ ಎಸ್‌ಬಿಐ, ಎಚ್‌ಡಿಎಫ್‌ಸಿ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಸುಮಾರು ಐದು ಎಟಿಎಂಗಳಿವೆ. ಸರಾಫ್ ಬಜಾರ್ ಸಮೀಪ ಎರಡು, ಚನ್ನಬಸವಾಶ್ರಮ ಸಂಕೀರ್ಣ, ಎದುರುಗಡೆ ಸೇರಿ ಮೂರು, ಇನ್ನು ಬಸವೇಶ್ವರ ವೃತ್ತ ಸಮೀಪ, ಬಸ್ ನಿಲ್ದಾಣ, ಚನ್ನಬಸವೇಶ್ವರ ಪದವಿ ಕಾಲೇಜು ಸಮೀಪ ಒಂದೊಂದು ಸೇರಿದಂತೆ ಒಟ್ಟು ಹದಿಮೂರು ಎಟಿಎಂಗಳಿವೆ. ಆದರೆ ಒಂದು ಎಟಿಎಂಗೂ ಭದ್ರತಾ ಸಿಬ್ಬಂದಿ ಇಲ್ಲ.
‘ಗ್ರಾಹಕರ ಹಣದ ವ್ಯವಹಾರಕ್ಕೆ ಭದ್ರತೆ ಮತ್ತು ಸುರಕ್ಷತೆ ನೀಡುವುದು ಬ್ಯಾಂಕ್‌ಗಳ ಮುಖ್ಯ ಕಾರ್ಯವಾಗಿದೆ. ಆದರೆ, ಪಟ್ಟಣದ ಎಟಿಎಂಗಳಿಗೆ ಭದ್ರತಾ ಸಿಬ್ಬಂದಿಯ ಕಾವಲು ಇಲ್ಲದಿರುವುದು ದುರ್ದೈವದ ಸಂಗತಿ. ಕೆಲ ಬ್ಯಾಂಕ್‌ಗಳಲ್ಲಿ ಕೆಲಸದ ಅವಧಿಯಲ್ಲಿ ಭದ್ರತಾ ಸಿಬ್ಬಂದಿ ಬಾಗಿಲು ಬಳಿ ಪಿಸ್ತೂಲ್‌ನೊಂದಿಗೆ ನಿಂತಿರುತ್ತಾರೆ. ಇನ್ನುಳಿದ ಕೆಲ ಬ್ಯಾಂಕ್‌ಗಳ ಬಾಗಿಲು ಬಳಿಯೂ ಸಿಬ್ಬಂದಿ ಇರುವುದಿಲ್ಲ. ಎಟಿಎಂಗಳಲ್ಲಂತೂ ಇರುವುದೇ ಇಲ್ಲ’ ಎಂದು ವಕೀಲ ಮಹೇಶ ಪರಸಣ್ಣೆ ಸೇರಿದಂತೆ ಇತರರು ಅಸಮಾಧಾನ ವ್ಯಕ್ತಪಡಿಸಿದರು.
ಎಟಿಎಂಗಳಿಗೆ ವಯಸ್ಕರು, ಮಹಿಳೆಯರು, ಹಿರಿಯ ನಾಗರಿಕರು, ಅಂಗವಿಕಲರು ಬರುತ್ತಾರೆ. ಹಣವನ್ನು ಡ್ರಾ ಮಾಡಿಕೊಳ್ಳುವ ಸಂದರ್ಭದಲ್ಲಿ ಅನಾಹುತಗಳಾದರೆ ಯಾರು ಹೊಣೆ? ಎಂಬುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆಯಾಗಿದೆ.
ಈಚೆಗೆ ಬೀದರ್ ಹೃದಯ ಭಾಗದ ಎಸ್‌ಬಿಐ ಮುಖ್ಯ ಶಾಖೆ ಸಮೀಪ ಗುಂಡಿನ ಸುರಿಮಳೆಗೈದು ಸಿನಿಮೀಯ ರೀತಿಯಲ್ಲಿ ದುಷ್ಕರ್ಮಿಗಳು ಹಣ ದರೋಡೆ ನಡೆಸಿರುವ ಕೃತ್ಯ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಈ ಘಟನೆ ನಡೆದು ಮೇಲೂ ಸಂಬಂಧಪಟ್ಟ ಬ್ಯಾಂಕ್‌ನವರು ಎಚ್ಚೆತ್ತುಕೊಳ್ಳದಿರುವುದು ನಿರ್ಲಕ್ಷ್ಯದ ಪರಮಾವಧಿ ಎಂದು ಗ್ರಾಹಕರು ದೂರುತ್ತಿದ್ದಾರೆ.
ಕೆಲ ತಿಂಗಳುಗಳ ಹಿಂದೆ ತಹಶೀಲ್ದಾರ್ ಕಚೇರಿ ಸಮೀಪದ ಎಟಿಎಂ ಕೇಂದ್ರದಲ್ಲಿ ಕಳ್ಳತನಕ್ಕೆ ಯತ್ನ ನಡೆದಿತ್ತು. ಎಲ್ಲಿಯೂ, ಯಾವಾಗಲೂ ಇಂತಹ ದುರ್ಘಟನೆ ಮರುಕಳಿಸುವ ಸಾಧ್ಯತೆ ಹೆಚ್ಚು ಇದೆ. ಹಾಗಾಗಿ, ಗ್ರಾಹಕರ ಹಣದ ಸುರಕ್ಷತೆ ಮತ್ತು ಅವರ ಸಹಾಯಕ್ಕಾಗಿ ಕೂಡಲೇ ಹೋಂಗಾರ್ಡ್ ಇಲ್ಲವೇ ನಿವೃತ್ತ ಸೈನಿಕರನ್ನು ನೇಮಿಸಿ ಎಟಿಎಂಗಳನ್ನು ಸುರಕ್ಷಿತ ಸ್ಥಳಗಳನ್ನಾಗಿ ಪರಿವರ್ತಿಸಬೇಕು ಎಂಬುದು ಪಟ್ಟಣ ವಾಸಿಗಳ ಒತ್ತಾಯವಾಗಿದೆ.
ಎಟಿಎಂಗಳ ಸುರಕ್ಷತೆಗಾಗಿ ಭದ್ರತಾ ಸಿಬ್ಬಂದಿ ನೇಮಿಸುವ ಸಂಬಂಧ ಈ ಮುಂಚೆ ಎಲ್ಲ ಬ್ಯಾಂಕ್ ವ್ಯವಸ್ಥಾಪಕರ ಸಭೆ ನಡೆಸಲಾಗಿದೆ. ಲಿಖಿತವಾಗಿಯೂ ತಿಳಿಸಲಾಗಿದೆ. ಈಗ ಮತ್ತೊಮ್ಮೆ ಸಭೆ ಕರೆದು ತಿಳಿಸುತ್ತೇನೆಶಿವಾನಂದ ಪವಾಡಶೆಟ್ಟಿ ಡಿವೈಎಸ್ಪಿ ಭಾಲ್ಕಿ
ಗ್ರಾಹಕರ ಜೊತೆಗೆ ಹಣದ ಸುರಕ್ಷತೆ ಮತ್ತು ಸಾರ್ವಜನಿಕರಲ್ಲಿ ಭದ್ರತೆಯ ಭಾವ ಬೆಳೆಯಲು ಆಯಾ ಬ್ಯಾಂಕ್‌ನವರು ತಮ್ಮ ಎಟಿಎಂಗಳಿಗೆ ಕಡ್ಡಾಯವಾಗಿ ಭದ್ರತಾ ಸಿಬ್ಬಂದಿ ನೇಮಿಸಬೇಕುಮಹೇಶ ಪರಸಣ್ಣೆ ವಕೀಲ ಭಾಲ್ಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.