ADVERTISEMENT

ಶಿಕ್ಷಣ | ಹಲವು ದಾಖಲೆ ಬರೆದ ನಾರ್ಮಾ ಫೆಂಡ್ರಿಚ್

1903ರಲ್ಲಿ ಶಾಲೆ ಆರಂಭಿಸಿ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸೇವಾ ಕಾರ್ಯ

ಚಂದ್ರಕಾಂತ ಮಸಾನಿ
Published 13 ಆಗಸ್ಟ್ 2022, 10:28 IST
Last Updated 13 ಆಗಸ್ಟ್ 2022, 10:28 IST
ಬೀದರ್‌ನ ಮಂಗಲಪೇಟೆಯಲ್ಲಿರುವ ನಾರ್ಮಾ ಫೆಂಡ್ರಿಚ್ ಕ್ರೈಸ್ತ ಮಿಷನರಿಯ ಮೊದಲ ಕನ್ನಡ ಶಾಲೆ
ಬೀದರ್‌ನ ಮಂಗಲಪೇಟೆಯಲ್ಲಿರುವ ನಾರ್ಮಾ ಫೆಂಡ್ರಿಚ್ ಕ್ರೈಸ್ತ ಮಿಷನರಿಯ ಮೊದಲ ಕನ್ನಡ ಶಾಲೆ   

ಬೀದರ್‌: ನಾರ್ಮಾ ಫೆಂಡ್ರಿಚ್ ಕ್ರೈಸ್ತ ಮಿಷನರಿ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ 125 ವರ್ಷಗಳು ಸಂದಿವೆ. ಜಿಲ್ಲೆಯಲ್ಲಿ ಹಲವು ಪ್ರಥಮ ದಾಖಲೆ ಬರೆದ ಮಿಷನರಿ ಶಾಲೆಗಳು ಪ್ರಸ್ತುತ ಶತಮಾನೋತ್ಸವ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಒಟ್ಟಿಗೆ ಆಚರಿಸುತ್ತಿವೆ.

ಜಿಲ್ಲೆಯಲ್ಲಿ ಮೊದಲ ಶಾಲೆ 1903ರಲ್ಲಿ ಬೀದರ್‌ನ ಮಂಗಲಪೇಟೆಯಲ್ಲಿ ಆರಂಭವಾಯಿತು. ನಾರ್ಮಾ ಫೆಂಡ್ರಿಚ್ ಕ್ರೈಸ್ತ ಮಿಷನರಿ 1903ರಲ್ಲಿ ಬಾಲಕರ ಕನ್ನಡ ಮಾಧ್ಯಮ ಶಾಲೆ ಆರಂಭಿಸಿತು. 1908ರಲ್ಲಿ ಹತ್ತು ಬಾಲಕಿಯರಿಗೆ ಉಚಿತ ಪ್ರವೇಶ ನೀಡಿ, ಮೊದಲ ಬಾಲಕಿಯರ ಪ್ರಾಥಮಿಕ ಶಾಲೆಯನ್ನೂ ಪ್ರಾರಂಭಿಸಲಾಯಿತು.

ಎನ್.ಎಫ್.ಶಾಲೆಯ ಮೊದಲ ಮುಖ್ಯ ಶಿಕ್ಷಕಿ ಮಿಸ್ ನಾರ್ಮಾ ಫೆಂಡ್ರಿಚ್ ಅವರು 1908ರಲ್ಲಿ ಲಕ್ಷ್ಮಿಬಾಯಿ ನರಸಪ್ಪ ಅಗಸಲಗೇರಿಗೆ ಮೊದಲ ಪ್ರವೇಶ ನೀಡಿದ ದಾಖಲೆ ಶಾಲೆಯಲ್ಲಿದೆ. ಬಡ ಮಕ್ಕಳಿಗಾಗಿ ವಸತಿ ಸಹಿತ ಶಾಲೆ ಆರಂಭಿಸಿ ವಿದ್ಯಾದಾನ ಮಾಡಿದ ಕೀರ್ತಿ ‘ನಾರ್ಮಾ ಫೆಂಡ್ರಿಚ್‘ ಮಿಷನರಿಗೆ ಸಲ್ಲುತ್ತದೆ.

ADVERTISEMENT

1908ರಲ್ಲಿ ಕಾಲರಾ ಹಾಗೂ ಸಿಡುಬು ರೋಗದಿಂದ ತಂದೆ–ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳ ನೆರವಿಗಾಗಿ 1910ರಲ್ಲಿ ಮಂಗಲಪೇಟೆಯಲ್ಲಿ ಮಕ್ಕಳ ವಸತಿ ಶಾಲೆ ಆರಂಭಿಸಿತು. ಅದೇ ವರ್ಷ ಬೀದರ್‌ನ ನಾವದಗೇರಿ ಮತ್ತು ಜನವಾಡದಲ್ಲಿ ಕನ್ನಡ ಮಾಧ್ಯಮ ಶಾಲೆ ಶುರು ಮಾಡಿತು. ಸಾಮಾಜಿಕ ವ್ಯವಸ್ಥೆಯಲ್ಲಿ ಆಗ ಜಾರಿಯಲ್ಲಿದ್ದ ಬಾಲ್ಯವಿವಾಹ ಮತ್ತು ವಿಧವೆಯರ ದುಸ್ಥಿತಿ ಅರಿತು ಐವರು ವಿಧವೆಯರ ಶಿಕ್ಷಣಕ್ಕೂ ವ್ಯವಸ್ಥೆ ಮಾಡಿದ ದಾಖಲೆಗಳು ಇಂದಿಗೂ ಲಭ್ಯ ಇವೆ.

ಕ್ರೈಸ್ತ ಮಿಷನರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರಿಗೆ ಆರಂಭದ ದಿನಗಳಲ್ಲಿ ಇಂಗ್ಲಿಷ್‌ ಬಿಟ್ಟು ಬೇರೆ ಭಾಷೆ ಸುಲಲಿತವಾಗಿ ಬರುತ್ತಿರಲಿಲ್ಲ. ಆದರೆ, ಇಲ್ಲಿ ನೆಲೆಸಿ ಅವರೆಲ್ಲ ಕನ್ನಡ ಕಲಿತರು. ಗುಣಮಟ್ಟದ ಶಿಕ್ಷಣ ಕೊಡಲು ದೂರದ ಬೆಂಗಳೂರು, ಕೋಲಾರದ ಶಿಕ್ಷಕರನ್ನು ನೇಮಿಸಿಕೊಂಡರು. ಮುಂದೆ ಮಿಷನರಿಗಳಲ್ಲಿ ಇದ್ದವರೇ ಕನ್ನಡ ಕಲಿತು, ಮಕ್ಕಳಿಗೆ ಶಿಕ್ಷಣ ನೀಡಿದರು.

ಎಲಿಜಾಬೆತ್‌ ಬಿ ಅವರು 1912ರಲ್ಲಿ ಶಾಲೆಗೆ ಸುಸಜ್ಜಿತ ಕಟ್ಟಡಕ್ಕೆ ಅಡಿಪಾಯ ಹಾಕಿಸಿದರು. ಮಕ್ಕಳಿಗೆ ಕನ್ನಡ, ನೈಸರ್ಗಿಕ ಶಿಕ್ಷಣ ಪದ್ಧತಿ, ಇತಿಹಾಸ, ಭೂಗೋಳ, ತೋಟಗಾರಿಕೆ, ಹೊಲಿಗೆ, ಬಡಿಗ, ಗೃಹ ವಿಜ್ಞಾನ, ಕಸೂತಿ, ನರ್ಸಿಂಗ್ ಬೋಧಿಸಲು ವ್ಯವಸ್ಥೆ ಮಾಡಿದರು.

1914ರ ಮೊದಲ ಜಾಗತಿಕ ಮಹಾಯುದ್ಧದ ವೇಳೆ ಪೆನ್ನಿ ಫರ್ನ್ ಫಿಷರ್ ಮಿಷನರಿ ಬೀದರ್‌ಗೆ ಬಂದು ಮಕ್ಕಳಿಗೆ ಶಾಸನಗಳ ಪರಿಚಯ ಮಾಡಿ ಇತಿಹಾಸ ಬೋಧಿಸಿತು. ಮಕ್ಕಳ ಮನಶಾಸ್ತ್ರಜ್ಞ ಮಿಸ್ ಮಿಲ್ಲರ್ ಅವರು 1916ರಲ್ಲಿ ಮೊದಲ ಬಾರಿಗೆ ಮನೋವಿಜ್ಞಾನ ವಿಷಯ ಪರಿಚಯಿಸಿದರು. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿಸಿದ ನಂತರ ಮಿಷನರಿಯು 1939ರಲ್ಲಿ ಪ್ರೌಢ ಶಿಕ್ಷಣ ಶಾಲೆ ಪ್ರಾರಂಭಿಸಿತು.

ಅಂದಿನ ಪ್ರಾಚಾರ್ಯೆ ಆ್ಯಡಾ ಲೂಕ್ ಶೈಕ್ಷಣಿಕ ಶಿಸ್ತು ಮತ್ತು ಆಡಳಿತ ವ್ಯವಸ್ಥೆ ಬಲಗೊಳಿಸಿದರು. ಒಂದೇ ಶಾಲೆಯಲ್ಲಿ ಬಾಲಕರು ಮತ್ತು ಬಾಲಕಿಯರಿಗೆ ಬೋಧನೆ ಶುರು ಮಾಡಲಾಯಿತು. 1942-43ರಲ್ಲಿ ಬಾಲಕ–ಬಾಲಕಿಯರ ಸಹ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಲಾಯಿತು.

ಶಾಲೆಗೆ ಕನ್ನಡ ಪತ್ರಿಕೆಗಳನ್ನು ತರಿಸಿ ಕಡ್ಡಾಯವಾಗಿ ಮಕ್ಕಳಿಂದ ಓದಿಸಲಾಗುತ್ತಿತ್ತು. ಸುಸಜ್ಜಿತ ಕಟ್ಟಡ, ವಸತಿ ಶಾಲೆ, ಊಟ ಮತ್ತು ಶೈಕ್ಷಣಿಕ ಶಿಸ್ತಿನೊಂದಿಗೆ ಅಗಾಧವಾಗಿ ಬೆಳೆಯಿತು. ಉಚಿತ ಊಟ, ವಸತಿ ಹಾಗೂ ಶಿಕ್ಷಣ ನೀಡಿದ್ದು ಶಾಲೆಯ ಹಿರಿಮೆಯಾಗಿದೆ. ಈ ಶಾಲೆಯಲ್ಲಿ 1903 ರಿಂದ ಈವರೆಗೆ ಎರಡೂವರೆ ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ.

ಇಲ್ಲಿನ ಹಲವು ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಐಎಫ್‍ಎಸ್ ಅಧಿಕಾರಿಗಳಾಗಿ ದ್ದಾರೆ. ಜಿಲ್ಲಾಧಿಕಾರಿಯಾಗಿದ್ದ ಡಿ.ಮಂಜುನಾಥ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ವಿಜಯ ಸಾಸನೂರು, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಬಸವರಾಜ ನೇಳಗೆ ಇದೇ ಶಾಲೆಯ ವಿದ್ಯಾರ್ಥಿಗಳು. ರಾಜಕೀಯ ಕ್ಷೇತ್ರದಲ್ಲೂ ಇಲ್ಲಿನ ವಿದ್ಯಾರ್ಥಿಗಳು ಪ್ರತಿಭೆ ಮೆರೆದಿದ್ದಾರೆ. ಈಗಿನ ಶಾಸಕರಾದ ಬಂಡೆಪ್ಪ ಕಾಶೆಂಪೂರ ಮತ್ತು ರಹೀಂ ಖಾನ್‌ ಇದೇ ಶಾಲೆಯ ವಿದ್ಯಾರ್ಥಿಗಳು. ಇಬ್ಬರೂ ಸಚಿವರಾಗಿದ್ದರು.

ಶಿಕ್ಷಣ ಸಂಸ್ಥೆ ಪ್ರಾಥಮಿಕ, ಪ್ರೌಢ, ಪಿಯುಸಿ ಮತ್ತು ಪದವಿಯವರೆಗೆ ಇಂದಿಗೂ ಉಚಿತ ಶಿಕ್ಷಣ ನೀಡುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದ ಪ್ರಯುಕ್ತ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಶಾಲೆಯ ಶತಮಾನೋತ್ಸವ ಸಂಭ್ರಮದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಮೆರುಗು ಇಮ್ಮಡಿ ಗೊಳಿಸಿದೆ.

‘ನಾರ್ಮಾ ಫೆಂಡ್ರಿಚ್ ಕ್ರೈಸ್ತ ಮಿಷನರಿ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿದೆ. ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಜ್ಞಾನ ಬೀಜ ಬಿತ್ತಿದೆ. ಅದರ ಸವಿ ನೆನಪಿನಲ್ಲಿ ಶಾಲೆಯಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎನ್ನುತ್ತಾರೆ ನಾರ್ಮಾ ಫೆಂಡ್ರಿಚ್ ಸಂಸ್ಥೆಯ ಚೇರಮನ್‌ ನೆಲ್ಸನ್‌ ಸುಮಿತ್ರಾ.

‘ಸ್ವಾತಂತ್ರ್ಯ ಪೂರ್ವ ಮತ್ತು ನಂತರವೂ ನಾರ್ಮಾ ಫೆಂಡ್ರಿಚ್ ಶಾಲೆಗಳು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ. ಪ್ರಸ್ತುತ ಇಲ್ಲಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ಇವೆ. ನಾರ್ಮಾ ಫೆಂಡ್ರಿಚ್ ಮಿಷನರಿ ಎಲ್ಲ ಧರ್ಮ, ಜಾತಿಯ ಮಕ್ಕಳಿಗೆ
ಶಿಕ್ಷಣ ನೀಡಿರುವುದು ಅಭಿಮಾನದ ಸಂಗತಿ’ ರೆವರೆಂಡ್‌ ಡಿ.ಜೆ.ಟಿ. ಸೀಮಂಡ್ಸ್‌ ಕನ್ನಡ ಸಾಹಿತ್ಯ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎಂ.ಮಚ್ಚೆ ಹೇಳುತ್ತಾರೆ.

ಮಾಸದ ನೆನಪುಗಳು
* ರಾಷ್ಟ್ರಪತಿ ಭೇಟಿ ನೀಡಿದ ಶಾಲೆ
1957ರ ಜೂನ್‌ 30ರಂದು ಅಂದಿನ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ ಅವರು ಶಾಲೆಗೆ ಭೇಟಿ ಕೊಟ್ಟುಶಾಲೆಯ ಶಿಕ್ಷಣ ಪದ್ಧತಿ, ಶಿಸ್ತು ಮತ್ತು ಅಚ್ಚು ಕಟ್ಟುತನ ವೀಕ್ಷಿಸಿ ಪ್ರಶಂಸಿದ್ದರು. ಶಾಲೆಯ ಸ್ಕೌಟ್ಸ್ ಮಕ್ಕಳು ಗೌರವ ವಂದನೆ ಸಲ್ಲಿಸಿದ್ದನ್ನು ನೋಡಿ ಖುಷಿಪಟ್ಟಿದ್ದರು.

* 1921ರಲ್ಲಿ ಮಿಸ್ ಆ್ಯನಾ ಹೆರಾಲ್ಡ್ ಕ್ರೈಸ್ತ ಮಿಷನರಿಯು ಚಿಟಗುಪ್ಪದಲ್ಲಿ ಕನ್ನಡ ಶಾಲೆ ಆರಂಭಿಸಿತು. ಆರಂಭದಲ್ಲಿ ಮರದ ಕೆಳಗೆ ಮಕ್ಕಳಿಗೆ ಪಾಠ ಮಾಡಲಾಗುತ್ತಿತ್ತು. ಇಂದು ಈ ಶಾಲೆ ಸ್ವಂತ ಕಟ್ಟಡದಲ್ಲಿದ್ದು, ಶತಮಾನೋತ್ಸವದ ಹೊಸ್ತಿಲಲ್ಲಿದೆ.

ಡಾ.ಡಬ್ಲ್ಯೂ.ಎಚ್‌.ಎಲ್. ಬ್ಯಾಟ್ಸ್‌ಟನ್ 1903ರಲ್ಲಿ ಬೀದರ್‌ನಲ್ಲಿ ಮೊದಲು ಮಿಷನ್‌ ಆಸ್ಪತ್ರೆ ಆರಂಭಿಸಿದರು. ಮಿಷನರಿಗಳ ನೆರವಿನಿಂದ 1906ರಲ್ಲಿ ಮಂಗಲಪೇಟೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಯಿತು. ಕಟ್ಟಡ ಇಂದಿಗೂ ಸುಸ್ಥಿತಿಯಲ್ಲಿದೆ. 1910ರಲ್ಲಿ ಮೊದಲ ಬಾರಿಗೆ ಉತ್ತರ ಭಾರತ ಮೂಲದ ವೈದ್ಯ ಡಾ.ಜಾನ್ ಲಿಟಲ್‌ ಅವರನ್ನು ನಿಯೋಜಿಸಲಾಯಿತು. 1971ರ ವರೆಗೆ ಇಲ್ಲಿ 33 ವೈದ್ಯರು ಸೇವೆ ಸಲ್ಲಿಸಿದ್ದಾರೆ.

* ಬೀದರ್‌ನಲ್ಲಿದ್ದ ಮಿಷನರಿ ಆಸ್ಪತ್ರೆಗೆ ಹೈದರಾಬಾದ್‌ ನಿಜಾಮ ಹಲವು ಬಾರಿ ಬಂದು ಚಿಕಿತ್ಸೆ ಪಡೆದಿದ್ದ. ಹೈದರಾಬಾದ್‌ನಿಂದ ಉದಗಿರ್‌ಗೆ ಹೋಗುವ ಮಾರ್ಗದಲ್ಲಿ ಇಲ್ಲಿಗೆ ಭೇಟಿ ಕೊಡದೇ ಇರುತ್ತಿರಲಿಲ್ಲ.

* 1969 ದಶಕದಲ್ಲಿ ರಾಜ್ಯಪಾಲ ವಿ.ವಿ. ಗಿರಿ ಅವರೂ ಶಾಲೆಗೆ ಭೇಟಿ ಕೊಟ್ಟಿದ್ದರು. ಸಂಸ್ಥೆಯ ಶೈಕ್ಷಣಿಕ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ವಿ.ವಿ. ಗಿರಿ ಅವರು ಅದೇ ವರ್ಷ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.