
ಬೀದರ್: ‘ಕೇಂದ್ರ ಚುನಾವಣಾ ಆಯೋಗವು ನಡೆಸುತ್ತಿರುವ ಮತದಾರರ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಈಗ ದೇಶದಲ್ಲಿ ನಡೆಯುತ್ತಿರುವ ರಕ್ತರಹಿತ ರಾಜಕೀಯ ನರಮೇಧವಾಗಿದೆ’ ಎಂದು ಆರ್ಥಿಕ ತಜ್ಞ ಪರಕಾಲ ಪ್ರಭಾಕರ್ ಅವರು ಮಂಗಳವಾರ ಇಲ್ಲಿ ವ್ಯಾಖ್ಯಾನಿಸಿದರು.
ಎಸ್‌ಐಆರ್ ವಿರೋಧಿ ಜನಾಂದೋಲನ ಸಮಿತಿ ಬೀದರ್ ಘಟಕವು ಏರ್ಪಡಿಸಿದ್ದ ಚಿಂತನ ಮಂಥನ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಎಸ್‌ಐಆರ್ ಮೂಲಕ ರಾಜಕೀಯ ಮತ್ತು ಸಾಮಾಜಿಕ ಅಸ್ಮಿತೆಯನ್ನು ಗುರಿ ಮಾಡಲಾಗುತ್ತಿದೆ. ಇದರ ಮೂಲಕ ಭಾರತವನ್ನು ಇಸ್ರೇಲೀಕರಣ ಮಾಡುವ ಹುನ್ನಾರ ನಡೆಸಲಾಗುತ್ತಿದೆ’ ಎಂದು ಆರೋಪಿಸಿದರು.
‘ಆಳುವ ಪಕ್ಷವೇ ಎಸ್‌ಐಆರ್ ಹೆಸರಿನಲ್ಲಿ ರಕ್ತರಹಿತ ರಾಜಕೀಯ ನರಮೇಧಕ್ಕೆ ಮುಂದಾಗಿದೆ. ಎಸ್‌ಐಆರ್‌ನಿಂದ ಜನ ಸಾಯುವುದಿಲ್ಲ. ಆದರೆ, ಅವರ ನಾಗರಿಕತ್ವ ಸಾಯಲಿದೆ. ಎಸ್‌ಐಆರ್ 2ನೇ ಹಂತದ ಪ್ರಕ್ರಿಯೆ ನಂತರ ದೇಶದಲ್ಲಿ 6.20 ಕೋಟಿ ಮತದಾರರು ಮತದಾನದ ಹಕ್ಕು ಕಳೆದುಕೊಳ್ಳಲಿದ್ದಾರೆ’ ಎಂದು ಎಚ್ಚರಿಸಿದರು.
‘ಜಗತ್ತಿನ 85 ರಾಷ್ಟ್ರಗಳಲ್ಲಿ ಇದಕ್ಕಿಂತ ಕಡಿಮೆ ಜನಸಂಖ್ಯೆ ಇದೆ. ಎಸ್‌ಐಆರ್ ಬಳಿಕ ಒಟ್ಟು 16.50 ಕೋಟಿ ಜನ ಮತದಾನದಿಂದ ವಂಚಿತರಾಗಲಿದ್ದು, ನಾಗರಿಕತ್ವ ಕಳೆದುಕೊಳ್ಳಲಿದ್ದಾರೆ. ಇದರಲ್ಲಿ ಹೆಚ್ಚಿನವರು ಮುಸ್ಲಿಮರು. ಇದಕ್ಕಾಗಿ ದೇಶದಲ್ಲಿ ಒಂದು ಹನಿ ಕೂಡಾ ರಕ್ತ ಹರಿಯುವುದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.