ADVERTISEMENT

ಪಟ್ಟದ್ದೇವರ ಶೈಕ್ಷಣಿಕ, ಸಾಮಾಜಿಕ ಸೇವೆ ಅನನ್ಯ

ಗುರುಕುಲ ಕಾಲೇಜಿನ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಸಿದ್ದೇಶ್ವರ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 6:52 IST
Last Updated 15 ಏಪ್ರಿಲ್ 2021, 6:52 IST
ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಿ.ಯು ವಿಜ್ಞಾನ ಕಾಲೇಜಿನ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮವನ್ನು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು
ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಿ.ಯು ವಿಜ್ಞಾನ ಕಾಲೇಜಿನ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮವನ್ನು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು   

ಭಾಲ್ಕಿ: ಡಾ.ಬಸವಲಿಂಗ ಪಟ್ಟದ್ದೇವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಜತೆಗೆ ಸಾಮಾಜಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ವಿಶಿಷ್ಟ ಸೇವೆ ಅನನ್ಯವಾದದ್ದು. ಬರದ ನಾಡಲ್ಲಿ ಶೈಕ್ಷಣಿಕ ಕ್ರಾಂತಿಗೈದಿರುವುದು ಅಭಿನಂದನಾರ್ಹ ಕಾರ್ಯ ಎಂದು ಜ್ಞಾನಯೋಗಿ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕರಡ್ಯಾಳದ ಚನ್ನಬಸ ವೇಶ್ವರ ಗುರುಕುಲದಲ್ಲಿ ಬುಧವಾರ ವಸತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ನಿಸರ್ಗದ ಪರಿಸರದಲ್ಲಿ ಸುಂದರ ಕಟ್ಟಡ ನಿರ್ಮಾಣವಾಗಿದ್ದು, ಈ ಭಾಗವನ್ನು ಜ್ಞಾನ ಹಾಗೂ ಅನುಭಾವದ ಕ್ಷೇತ್ರವನ್ನಾಗಿಸಿದ ಕೀರ್ತಿ ಪಟ್ಟದ್ದೇವರಿಗೆ ಸಲ್ಲುತ್ತದೆ. ಗುರುಕುಲ ಪರಿಸರದಲ್ಲಿ ಸುಮ್ಮನೇ ಕೂತರೇ ಸಾಕು ಮನಸ್ಸು ಸಂತೃಪ್ತಗೊಳ್ಳುತ್ತದೆ. ಇಲ್ಲಿ ಆಸೆ, ಆಮಿಷಗಳಿಗೆ ಅವಕಾಶ ಇಲ್ಲ. ಎಲ್ಲರ ತ್ಯಾಗದ ಫಲವಾಗಿ ಶಿಕ್ಷಣ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.

ADVERTISEMENT

ಸುತ್ತೂರು-ಮೈಸೂರು ವೀರಸಿಂಹಾಸನ ಮಠದ ಜಗದ್ಗುರು ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಡಾ.ಚನ್ನಬಸವ ಪಟ್ಟದ್ದೇವರು ಈ ಭಾಗದಲ್ಲಿ ಶ್ರೇಷ್ಠ ಬದುಕು ನಡೆಸಿದ್ದರು. ನಿಜಾಮನ ಕಾಲದಲ್ಲಿ ಕನ್ನಡ ಕಲಿಸಲು ಹಿಂದೆ ಮುಂದೆ ನೋಡುತ್ತಿದ್ದಂತಹ ಪರಿಸ್ಥಿಯಲ್ಲಿ ಪಟ್ಟದ್ದೇವರು ಕನ್ನಡ ಕಲಿಸುವುದರ ಜತೆಗೆ ಎಲ್ಲ ವರ್ಗದ ಜನರನ್ನು ಸಮನಾಗಿ ಕಂಡಿರುವುದು ಶ್ರೇಷ್ಠವೆನಿಸುತ್ತದೆ’ ಎಂದರು.

‘ಅವರು ಧಾರ್ಮಿಕ ಪ್ರಚಾರ, ಪ್ರಸಾರದ ಜತೆಗೆ ಬಸವಕಲ್ಯಾಣ ನೂತನ ಅನುಭವ ಮಂಟಪ ಕಟ್ಟಿದರ ಪರಿಣಾಮ ಬಸವಕಲ್ಯಾಣ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿದೆ’ ಎಂದು ತಿಳಿಸಿದರು.

ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ನಾನು ಮಠಕ್ಕೆ ಮರೀ ಆಗಬೇಕು ಎಂದು ಬಂದವನಲ್ಲ. ಬಡತನದ ಹಿನ್ನೆಲೆಯಲ್ಲಿ ಓದಿಗೆ ಮಠಕ್ಕೆ ಬಂದಿದ್ದೆ. ಪಟ್ಟದ್ದೇವರ ಆಶಯದಂತೆ ಶ್ರೀಮಠದ ಪೀಠಾಧಿಪತಿ ಆಗಿದ್ದೇನೆ’ ಎಂದರು.

‘ಪಟ್ಟದ್ದೇವರು ಯಾವುದೇ ಆಸ್ತಿ, ಅಂತಸ್ತು, ಸಂಸ್ಥೆ, ಬ್ಯಾಂಕ್ ಬ್ಯಾಲೆನ್ಸ್ ಬಿಟ್ಟು ಹೋಗಿರಲಿಲ್ಲ. ಆದರೆ ಅವರ ದಿವ್ಯಶಕ್ತಿ, ಆಶೀರ್ವಾದದ ಪರಿಣಾಮ ಎಲ್ಲ ಕಾರ್ಯಗಳು ಯಶಸ್ವಿ ಆಗುತ್ತಿವೆ. ಶಿಕ್ಷಣ ಸಂಸ್ಥೆಯ ಬೆಳವಣಿಗೆ ಹಿಂದೆ ಶಿಕ್ಷಕರ, ಪೋಷಕರ ಕೊಡುಗೆಯು ದೊಡ್ಡದಿದೆ’ ಎಂದು ತಿಳಿಸಿದರು.

ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ‘ಡಾ.ಬಸವಲಿಂಗ ಪಟ್ಟದ್ದೇವರು 1992ರಲ್ಲಿ ಗ್ರಾಮೀಣ ಭಾಗದಲ್ಲಿ ಆರಂಭಿಸಿದ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಹೆಮ್ಮರವಾಗಿ ಬೆಳೆಯುತ್ತಿದೆ’ ಎಂದು ತಿಳಿಸಿದರು.

ಬೆಂಗಳೂರು ಕೇಂದ್ರ ಅಪರಾಧ ವಿಭಾಗ ಮುಖ್ಯಸ್ಥ ಸಂದೀಪ ಪಾಟೀಲ ಮಾತನಾಡಿದರು. ಮಾಜಿ ಶಾಸಕ ಪ್ರಕಾಶ ಖಂಡ್ರೆ, ಯುವ ಮುಖಂಡ ಸಾಗರ ಈಶ್ವರ ಖಂಡ್ರೆ, ತಹಶೀಲ್ದಾರ್‌ ಅಣ್ಣಾರಾವ್‌ ಪಾಟೀಲ ಇದ್ದರು.

ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕ ಮಾತನಾಡಿ ದರು. ಆಡಳಿತಾಧಿಕಾರಿ ಮೋಹನ ರೆಡ್ಡಿ ಸ್ವಾಗತಿಸಿದರು ಮಧುಕರ್ ಗಾಂವಕರ್ ನಿರೂಪಿಸಿದರು.

ಬಸವಣ್ಣ ಮೂರ್ತಿ ಅನಾವರಣ:

ವಸತಿ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ನೂತನ ಕಟ್ಟಡದ ಮುಂಭಾಗದಲ್ಲಿ ಪ್ರತಿಷ್ಠಾಪನೆ ಮಾಡಿರುವ ವಿಶ್ವಗುರು ಬಸವಣ್ಣನವರ, ಡಾ.ಚನ್ನಬಸವ ಪಟ್ಟದ್ದೇವರ ಮೂರ್ತಿಯನ್ನು ಬೆಂಗಳೂರು ತರಳಬಾಳು ಕೇಂದ್ರದ ಸಿದ್ಧಯ್ಯನವರು ಅನಾವರಣಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.