ADVERTISEMENT

‘ಕಬ್ಬು ಪೂರೈಸಿದ ರೈತರಿಗೆ ಬಾಕಿ ಪಾವತಿಸಿ’-ಪ್ರಭು ಚವಾಣ್

ಸಕ್ಕರೆ ಕಾರ್ಖಾನೆ, ಜನಪ್ರತಿನಿಧಿಗಳ ಸಭೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 30 ಮೇ 2021, 3:21 IST
Last Updated 30 ಮೇ 2021, 3:21 IST

ಬೀದರ್‌: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಸಿದ ರೈತರ ಬಾಕಿ ಹಣ ಶೀಘ್ರ ಪಾವತಿಸಿ ರೈತರಿಗೆ ನೆರವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಕಾರ್ಖಾನೆಗಳ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.

ಕಳೆದ ವರ್ಷ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಖಾನೆ ಅಧ್ಯಕ್ಷರ ಹಾಗೂ ರೈತರ ಸಭೆಯಲ್ಲಿ ಕಬ್ಬಿಗೆ ₹2,400 ಬೆಲೆ ನಿಗದಿಪಡಿಸಲಾಗಿತ್ತು. ಇದಕ್ಕೆ ಕಾರ್ಖಾನೆಗಳ ಮುಖ್ಯಸ್ಥರು ಹಾಗೂ ರೈತರು ಒಪ್ಪಿಗೆ ನೀಡಿದ್ದರು ಎಂದು ಸ್ಮರಿಸಿದ್ದಾರೆ.

ಮಹಾತ್ಮ ಗಾಂಧಿ ಸಹಕಾರಿ ಸಕ್ಕರೆ ಕಾರ್ಖಾನೆ, ಭಾಲ್ಕೇಶ್ವರ ಶುಗರ್ಸ್ ಲಿಮಿಟೆಡ್, ಬೀದರ್‌ ಸಮೀಪದ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ, ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆಗಳಿಗೆ ರೈತರು ಸಕಾಲಕ್ಕೆ ಕಬ್ಬು ಪೂರೈಸಿದ್ದಾರೆ. ಆದರೆ ಇಲ್ಲಿವರೆಗೆ ಸಭೆಯ ನಿರ್ಣಯದಂತೆ ಬಾಕಿ ಹಣ ಪಾವತಿಸದಿರುವುದು ಸರಿಯಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಈ ಕುರಿತು ಚರ್ಚಿಸಲು ಮೇ 29ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯಲಾಗಿ ಸಭೆಗೆ ಸಂಸದ ಭಗವಂತ ಖೂಬಾ, ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ, ಬಸವಕಲ್ಯಾಣ ಶಾಸಕ ಶರಣು ಸಲಗರ, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ, ರಘುನಾಥರಾವ್ ಮಲ್ಕಾಪೂರೆ ಬಂದಿದ್ದರು. ಆದರೆ ಕಾರ್ಖಾನೆಗಳ ಅಧ್ಯಕ್ಷರು ಕೋವಿಡ್ ಹಾಗೂ ಜ್ವರದ ಕಾರಣ ನೀಡಿ ಗೈರಾಗಿದ್ದರಿಂದ ಸಭೆಯನ್ನು ಮುಂದೂಡಲಾಗಿದೆ ಎಂದು ಹೇಳಿದ್ದಾರೆ.

ರೈತರು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಗಳ ಮುಖ್ಯಸ್ಥರು ರೈತರಿಗೆ ನೆರವಾಗಬೇಕಿದೆ. ರೈತರು ಗಾಳಿ, ಮಳೆ, ಬಿಸಿಲನ್ನು ಲೆಕ್ಕಿಸದೇ ವರ್ಷಗಳ ಕಾಲ ಕಷ್ಟಪಟ್ಟು ಕಬ್ಬು ಬೆಳೆಸಿರುತ್ತಾರೆ. ಅವರ ಶ್ರಮಕ್ಕಾದರೂ ಗೌರವ ಕೊಡಬೇಕಿದೆ. ಸಕ್ಕರೆ ಕಾರ್ಖಾನೆಗಳ ಬೆನ್ನೆಲುಬಾಗಿರುವ ರೈತರ ಹಿತ ಕಾಪಾಡಲು ಮುಂದಾಗಬೇಕಿದೆ ಎಂದು ತಿಳಿಸಿದ್ದಾರೆ.

ಜೂನ್ 5ರಂದು ಮತ್ತೊಮ್ಮೆ ಜಿಲ್ಲೆಯ ಕಾರ್ಖಾನೆಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಜನಪ್ರತಿನಿಧಿಗಳ ಸಭೆ ಕರೆಯಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.