ADVERTISEMENT

ಕೃಷಿ ಕಾಲೇಜು ಮಂಜೂರಾತಿ ನಿರೀಕ್ಷೆಯಲ್ಲಿ ಜನ

ಜಿಲ್ಲೆಯಲ್ಲಿ ನಾಲ್ಕು ಕಡೆ ಇದೆ ಅಗತ್ಯ ಜಾಗ

ಚಂದ್ರಕಾಂತ ಮಸಾನಿ
Published 5 ಮಾರ್ಚ್ 2021, 15:29 IST
Last Updated 5 ಮಾರ್ಚ್ 2021, 15:29 IST

ಬೀದರ್: ತಾಲ್ಲೂಕಿನ ಜನವಾಡ ಸಮೀಪದ ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಧೀನದ ಕೃಷಿ ವಿಜ್ಞಾನ ಕೇಂದ್ರದ‌ಲ್ಲಿ ಕೃಷಿ ಡಿಪ್ಲೊಮಾ ಕೋರ್ಸ್‌ ಮಾತ್ರ ಇದೆ. ಕೃಷಿಕರ ಮಕ್ಕಳ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಬಜೆಟ್‌ನಲ್ಲಿ ಜಿಲ್ಲೆಗೆ ಕೃಷಿ ಕಾಲೇಜು ಮಂಜೂರು ಮಾಡಬೇಕು ಎನ್ನುವ ಒತ್ತಡ ಹೆಚ್ಚುತ್ತಿದೆ.

ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರತಿ ವರ್ಷ 50 ಸ್ಥಾನಗಳಿಗೆ ಪ್ರವೇಶ ನೀಡಿದರೂ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಯಾದಗಿರಿ, ಬಳ್ಳಾರಿ ಜಿಲ್ಲೆಯ ವಿದ್ಯಾರ್ಥಿಗಳೇ ಹೆಚ್ಚು ಸೀಟುಗಳನ್ನು ಪಡೆದು ಕೊಳ್ಳುತ್ತಿದ್ದಾರೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶ ದೊರಕುತ್ತಿಲ್ಲ.

ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳನ್ನು ಬಿಟ್ಟರೆ ದೊಡ್ಡ ಕೈಗಾರಿಕೆಗಳಿಲ್ಲ. ಬಹುತೇಕ ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ಜಿಲ್ಲೆಗೆ ಕೃಷಿ ಕಾಲೇಜು ಮಂಜೂರು ಮಾಡಬೇಕು ಎನ್ನುವುದು ಬಹು ದಿನಗಳ ಬೇಡಿಕೆಯಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮೂರು ವರ್ಷಗಳಿಂದ ಬಜೆಟ್‌ಗೆ ಮುನ್ನ ಪ್ರತಿ ವರ್ಷ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದ್ದಾರೆ.

ADVERTISEMENT

ಕಳೆದ ವರ್ಷ ಗಣರಾಜ್ಯೋತ್ಸವ ಸಮಾರಂಭದಲ್ಲಿ ‘ಬೀದರ್‌ ಜಿಲ್ಲೆಗೆ ಕೃಷಿ ಕಾಲೇಜ್‌ ನ್ನು ತಂದೇ ತರುತ್ತೇನೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಘೋಷಣೆ ಭರವಸೆ ನೀಡಿದ್ದರು. ಆದರೆ, ಬಜೆಟ್‌ನಲ್ಲಿ ಘೋಷಣೆ ಆಗಲಿಲ್ಲ. ಈ ಬಾರಿ ಮತ್ತೆ ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಿದ್ದಾರೆ. ಔರಾದ್‌ ತಾಲ್ಲೂಕಿನ ಕೌಡಗಾಂವದಲ್ಲಿ ಕೃಷಿ ಕಾಲೇಜಿಗೆ ಅಗತ್ಯವಿರುವ ಜಮೀನು ಗುರುತಿಸಿ, ಜಿಲ್ಲಾಡಳಿತ ಮೂಲಕ ಪ್ರಸ್ತಾವವನ್ನೂ ಕಳಿಸಿದ್ದಾರೆ.

‘ಬೀದರ್‌ ತಾಲ್ಲೂಕಿನ ಮಾಳೆಗಾಂವದಲ್ಲಿ 70 ಎಕರೆ ಸರ್ಕಾರಿ ಜಾಗ ಇದೆ. ಜಿಲ್ಲೆಯಲ್ಲಿ ಕೃಷಿ ಕಾಲೇಜು ಆರಂಭಿಸಿದರೆ ಗಡಿ ಭಾಗದ ಕೃಷಿಕರ ಮಕ್ಕಳಿಗೆ ಅನುಕೂಲವಾಗಲಿದೆ. ಈಗಾಗಲೇ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಹೇಳುತ್ತಾರೆ.

‘ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಜಿಲ್ಲೆಗೆ ಬಂದಿದ್ದ ಸಂದರ್ಭದಲ್ಲಿ ಕೆಲವು ಸಂಘಟನೆಗಳು ಮನವಿ ಪತ್ರ ಸಲ್ಲಿಸಿವೆ. ಜಿಲ್ಲೆಯ ಶೇ 75 ರಷ್ಟು ಜನ ಕೃಷಿಯನ್ನು ಅವಲಂಬಿಸಿದ್ದಾರೆ. ಬೀದರ್‌ನಲ್ಲಿ ಕೃಷಿ ಕಾಲೇಜು ಆರಂಭವಾದರೆ ಕೃಷಿಗೆ ಸಂಬಂಧಿಸಿದ ಕೋರ್ಸ್‌ಗಳ ಅಧ್ಯಯನಕ್ಕೆ ನೆರವಾಗಲಿದೆ’ ಎನ್ನುತ್ತಾರೆ ಹೊನ್ನಿಕೇರಿಯ ಪ್ರಗತಿಪರ ರೈತ ರವೀಂದ್ರ ಪಾಟೀಲ.

‘ಜಿಲ್ಲೆಯ ವಿದ್ಯಾರ್ಥಿಗಳು ಕೃಷಿ ಪದವಿ ಪಡೆಯಲು ಕಲಬುರ್ಗಿ, ರಾಯಚೂರು ಇಲ್ಲವೆ ಯಾದಗಿರಿ ಜಿಲ್ಲೆಯ ಭೀಮರಾಯನಗುಡಿಗೆ ತೆರಳಬೇಕಾಗಿದೆ. ಕೃಷಿಕರಿಗೆ ತಮ್ಮ ಮಕ್ಕಳಿಗೆ ವಸತಿ ವ್ಯವಸ್ಥೆ ಕಲ್ಪಿಸಿ ಶಿಕ್ಷಣ ಕೊಡಿಸಲು ಬಹಳ ಕಷ್ಟವಾಗುತ್ತಿದೆ. ಜಿಲ್ಲೆಯಲ್ಲೇ ಕೃಷಿ ಕಾಲೇಜು ಆರಂಭವಾದರೆ ಹೆಚ್ಚು ಅನುಕೂಲವಾಗಲಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಸುನೀಲಕುಮಾರ ಎನ್‌.ಎಂ. ಹೇಳುತ್ತಾರೆ.

‘ಕೃಷಿ ಕಾಲೇಜು ಆರಂಭಿಸಿದರೆ ರೈತರ ಮಕ್ಕಳು ಆಧುನಿಕ ತಂತ್ರಜ್ಞಾನದ ಮೂಲಕ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗಲಿದೆ. ಅಗ್ರೋ ಇಂಡ್‌ಸ್ಟ್ರಿಗಳಲ್ಲಿ ಅವರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ. ಸರ್ಕಾರ ಜಿಲ್ಲೆಗೆ ಕೃಷಿ ಕಾಲೇಜು ಮಂಜೂರು ಮಾಡಬೇಕು’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಒತ್ತಾಯಿಸುತ್ತಾರೆ.

ಬೀದರ್ ತಾಲ್ಲೂಕಿನ ಬಗದಲ್‌ ಹಾಗೂ ಕಮಠಾಣ ಸಮೀಪ ಕಂದಾಯ ಇಲಾಖೆಗೆ ಸೇರಿದ 400 ಎಕರೆ ಜಮೀನು ಇದೆ. ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಈ ಕುರಿತು ಪ್ರಸ್ತಾಪ ಮಾಡಿದ್ದಾರೆ. ಈ ಸ್ಥಳಗಳು ಕೃಷಿ ಕಾಲೇಜು ಆರಂಭಿಸಲು ಸೂಕ್ತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.