ADVERTISEMENT

ಖೂಬಾ ಕುತಂತ್ರದಿಂದ ಆಯೋಗಕ್ಕೆ ದೂರು: ಶಾಸಕ ಪ್ರಭು ಚವಾಣ್ ಗಂಭೀರ ಆರೋಪ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 6:27 IST
Last Updated 21 ಜುಲೈ 2025, 6:27 IST
ಪ್ರಭು ಚವಾಣ್
ಪ್ರಭು ಚವಾಣ್   

ಬೀದರ್: ‘ನನ್ನನ್ನು ಮುಗಿಸಬೇಕೆಂಬ ಒಂದೇ ಉದ್ದೇಶದಿಂದ ಕೇಂದ್ರದ ಮಾಜಿ ಸಚಿವ, ಬಿಜೆಪಿ ಮುಖಂಡ ಭಗವಂತ ಖೂಬಾ‌ ಅವರು ನನ್ನ ವಿರುದ್ಧ ಹುನ್ನಾರ ನಡೆಸುತ್ತಿದ್ದಾರೆ. ಅವರ ಕುತಂತ್ರದಿಂದಲೇ ನನ್ನ ಹಾಗೂ ನಮ್ಮ ಕುಟುಂಬ ಸದಸ್ಯರ ವಿರುದ್ಧ ಮಹಿಳಾ‌ ಆಯೋಗಕ್ಕೆ ದೂರು ಕೊಡಲಾಗಿದೆ’ ಎಂದು ಔರಾದ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚವಾಣ್ ಗಂಭೀರ ಆರೋಪ ಮಾಡಿದರು.

‘ಭಗವಂತ ಖೂಬಾ ಸುಳ್ಳಿನ ಸರದಾರ. ಅವರ ಕೆಲಸವೇ ಸುಳ್ಳು ಹೇಳುವುದು. ಚುನಾವಣೆಯಲ್ಲಿ ನನ್ನನ್ನು ಎರಡು ಸಲ ಸೋಲಿಸಲು ವಿಫಲ ಯತ್ನ ನಡೆಸಿದ್ದಾರೆ. ನನ್ನ ಹೆಸರು ಕೆಡಿಸಲು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಆರ್.ಟಿ.ಇ. ಹಾಕಿಸುವುದು, ದೂರು ಕೊಡಿಸುವುದು, ಸರ್ಕಾರಿ ಕಾಮಗಾರಿ ಮಾಡುತ್ತಿರುವವರಿಗೆ ಕಿರಿಕಿರಿ ಕೊಡುವ ಕೆಲಸ ಮಾಡುತ್ತಿದ್ದಾರೆ. ಔರಾದ್‌ನಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆ ಉಂಟಾಗುತ್ತಿದೆ. ಖೂಬಾ ಅವರು ನೇರವಾಗಿ ಏನೂ ಮಾಡಲ್ಲ. ಅವರ ‘ಟೀಮ್‌’ನಿಂದ ಮಾಡಿಸುತ್ತಾರೆ. ಇವರು ಟೀಮ್ ಲೀಡರ್, ಕ್ಯಾಪ್ಟನ್’ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಖೂಬಾ ಅವರು ನನ್ನ ವಿರುದ್ಧ ನಡೆಸುತ್ತಿರುವ ಸಂಚಿನ ಕುರಿತು ಬಿಜೆಪಿ ಪಕ್ಷದ ವರಿಷ್ಠರ ಗಮನಕ್ಕೆ ತಂದಿರುವೆ. ಈ ಕಾರಣದಿಂದ ಬಹಿರಂಗವಾಗಿ ಅವರ ಹೆಸರು ಹೇಳಿರಲಿಲ್ಲ. ಆದರೆ, ಅವರು ಇಂತಹ ನೀಚ ಕೆಲಸ ಮಾಡುತ್ತಾರೆ ಎಂದು ಗೊತ್ತಿರಲಿಲ್ಲ. ಅವರ ಕಿರಿಕಿರಿಗೆ ಮಾನಸಿಕವಾಗಿ ಬಹಳ ನೊಂದಿದ್ದೇನೆ. ಈ ಎಲ್ಲ ಕೆಲಸಗಳು ಪಕ್ಷದವರಿಗೆ ಹೇಗೆ ಗೊತ್ತಾಗುತ್ತದೆ. ಅವರಿಂದ ಬೇಸತ್ತು ಈಗ ಅವರ ಹೆಸರು ಹೇಳುತ್ತಿದ್ದೇನೆ’ ಎಂದು ಆಕ್ರೋಶದಿಂದ ಹೇಳಿದರು.

ADVERTISEMENT

‘ಮಹಾರಾಷ್ಟ್ರ ಉದಗೀರನ ನಾಮದೇವ್ ರಾಠೋಡ್ ಅವರ ಮಗಳೊಂದಿಗೆ ನನ್ನ ಮಗ ಪ್ರತೀಕ್ ಜೊತೆ 2023ರಲ್ಲಿ ನಿಶ್ಚಿತಾರ್ಥ ನಿಶ್ಚಯವಾಗಿತ್ತು. ಹುಡುಗ-ಹುಡುಗಿ ಪರಸ್ಪರ ಒಪ್ಪಿದ್ದರಿಂದ ಮದುವೆಗೆ ನಿಶ್ಚಯಿಸಲಾಗಿತ್ತು. ಆದರೆ, ಯುವತಿ ಬೇರೊಬ್ಬ ಯುವಕನೊಂದಿಗೆ ನಿರಂತರವಾಗಿ ಚಾಟ್ ಮಾಡುತ್ತಿದ್ದರು. ಈ ವಿಷಯ ಗೊತ್ತಾದ ನಂತರ ನಾಮದೇವ್ ರಾಠೋಡ್ ಅವರ ಕುಟುಂಬದವರನ್ನು ಕರೆಸಿ ವಿಷಯ ತಿಳಿಸಲಾಗಿದೆ. ಆನಂತರ ಬಂಜಾರ ಸಮಾಜದ ಪಂಚರು, ಸಮಾಜದ ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡದಿರಲು 2024ರ ನವೆಂಬರ್‌ನಲ್ಲಿ ನಿರ್ಧರಿಸಲಾಯಿತು’ ಎಂದು ವಿವರಿಸಿದರು. ಯುವತಿಯ ಚಾಟ್ ಸಂಭಾಷಣೆಯ ವಿವರ ತೋರಿಸಿದರು.

ಎರಡೂ ಕುಟುಂಬದವರ ಒಪ್ಪಿಗೆಯಿಂದ ಮದುವೆ ಕೈಬಿಡಲು ನಿರ್ಧರಿಸಲಾಗಿದೆ. ಆದರೆ, ಆ ಯುವತಿಗೆ ಏನು ಆಮಿಷವೊಡ್ಡಿದ್ದಾರೆ ಗೊತ್ತಿಲ್ಲ. ಅವರು ನನ್ನ ಮಗ, ನನ್ನ ಹಾಗೂ ಕುಟುಂಬದವರ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದಾರೆ ಎಂದರು.

‘ನನ್ನ ಮನೆಗೆ ರಾತ್ರಿ ಸಮಯದಲ್ಲಿ ಬಂದು ಜಗಳ ಮಾಡಿಸಲು ಕೂಡ ‘ಕ್ಯಾಪ್ಟನ್’ ಕಾರಣ. ಮದುವೆ ಮುಗಿದು ಹೋದ ವಿಷಯ. ಅವರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ನನ್ನ ಮಗನೊಂದಿಗೆ ಮದುವೆಗೆ ನಿಶ್ಚಯ ಮಾಡಿದ್ದ ಯುವತಿ ನನ್ನ ಮಗಳಂತೆ. ಆದರೆ, ಬೇರೆ ಯವಕನೊಂದಿಗೆ ಚಾಟ್ ಮಾಡಿದ ವಿಷಯ ಗೊತ್ತಾದ ನಂತರವೂ ಮದುವೆ ಮಾಡಲು ಆಗುತ್ತದೆಯೇ? ಹೀಗಾಗಿ ಮದುವೆ ಕೈಬಿಡಲಾಯಿತು. ಆದರೆ, ಅವರ ಮೂಲಕ ಸತತವಾಗಿ‌ ನನ್ನ ವಿರುದ್ಧ ಚಿತಾವಣೆ ಮಾಡಲಾಗುತ್ತಿದೆ. ಈ ರೀತಿ ಏಕೆ ಮಾಡುತ್ತಿದ್ದೀರಿ ಎಂದು ಯುವತಿಯನ್ನು ಕೇಳಿದರೆ, ‘ನಿಮ್ಮ ಬೀದರ್ ದುಶ್ಮನ್ ಈ ರೀತಿ ಮಾಡಿಸುತ್ತಿದ್ದಾರೆ ಎಂದು ಹೇಳಿದ ವಿಡಿಯೊ ಕಾಲ್ ಕೇಳಿಸಿದರು. ನಾನೇ ಮೊದಲು ದೂರು ಕೊಡಬೇಕಿತ್ತು. ಮಹಿಳೆ ಎಂಬ ಕಾರಣದಿಂದ ಗೌರವಕ್ಕೆ ಧಕ್ಕೆ ಬರಬಾರದು ಎಂದು ಸುಮ್ಮನಾಗಿದ್ದೆ. ಆದರೆ, ಬೇರೆಯವರ ಚಿತಾವಣೆಗೆ ಈ ರೀತಿ ಮಾಡಿರುವುದು ಸರಿಯಲ್ಲ. ವಿರೋಧಿಗಳಿಗೆ ನನ್ನ ಮಗ ಪ್ರತೀಕ್ ಮುಖ್ಯ ಅಲ್ಲ, ಆತನ ಹೆಸರಿನ ಮೂಲಕ ನನ್ನ ಹಣಿಯುವ ಕುತಂತ್ರ ಮಾಡುತ್ತಿದ್ದಾರೆ. ನಾನೇ ಅವರ ಮುಖ್ಯ ಟಾರ್ಗೆಟ್. ನನ್ನ ಮಗನಾಗಲಿ, ನಾನಾಗಲಿ ಏನೂ ತಪ್ಪು ಮಾಡಿಲ್ಲ. ಒಂದುವೇಳೆ ತಪ್ಪು ಮಾಡಿದ್ದಾನೆ ಎಂಬ ಅನುಮಾನವಿದ್ದರೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿ’ ಎಂದು ಸವಾಲು ಹಾಕಿದರು.

ಮುಖಂಡರಾದ ಗುಂಡಪ್ಪ ವಕೀಲ, ಶಿವಾಜಿರಾವ್ ಪಾಟೀಲ್, ಧೋಂಡಿಬಾ, ಅರಿಹಂತ ಸಾವಳೆ, ಶಂಕರ್ ರಾಠೋಡ್, ಸುರೇಶ್ ಭೋಸ್ಲೆ, ಶಿವರಾಜ ಅಲ್ಮಾಜೆ, ರಂಗರಾವ್ ಜಾಧವ್, ಕಿರಣ ಪಾಟೀಲ್ ಇದ್ದರು.

ಮಹಿಳಾ ಆಯೋಗ ಕೇಳುವ ನೋಟಿಸ್ ಎಲ್ಲ ಪ್ರಶ್ನೆಗಳಿಗೆ ಸಾಕ್ಷ್ಯ ಸಮೇತ ಉತ್ತರ ಕೊಡುವೆ
ಪ್ರಭು ಚವಾಣ್ ಶಾಸಕ
‘ಬೆಡ್‌ರೂಮ್‌ವರೆಗೆ ರಾಜಕೀಯ’
‘ರಾಜಕೀಯ ಎನ್ನುವುದು ಒಂದು ಹಂತದ ವರೆಗೆ ಇರಬೇಕು. ಆದರೆ ಮನೆ ತನಕ ಬೆಡ್ ರೂಮ್ ವರೆಗೆ ರಾಜಕೀಯ ಬರಬಾರದು’ ಎಂದು ಪ್ರಭು ಚವಾಣ್ ಹೇಳಿದರು.‘2014-15ರಿಂದ ಒಂದಿಲ್ಲೊಂದು ಕಾರಣದಿಂದ ನನ್ನ ಎಲ್ಲ ಕೆಲಸಗಳಿಗೆ ಅಡ್ಡಿಪಡಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಬಹಳ ನೊಂದಿದ್ದೇನೆ. ನಾನು ಎಂದೂ ಶಾಸಕನಂತೆ ನಡೆದುಕೊಂಡಿಲ್ಲ ಜನಸೇವಕನಾಗಿ ಜನರ ನಡುವೆ ಇದ್ದೇನೆ’ ಎಂದರು. ನಿಮ್ಮ ಹಾಗೂ ಭಗವಂತ ಖೂಬಾ ನಡುವಿನ ದ್ವೇಷಕ್ಕೆ ಕಾರಣವೇನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಇದನ್ನು ಖೂಬಾ ಅವರೇ ಹೇಳಬೇಕು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.