ADVERTISEMENT

ಬೀದರ್: ದಲಿತ ಸಂಘಟನೆಗಳ ಪ್ರತಿಭಟನೆ

ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 13:42 IST
Last Updated 6 ಅಕ್ಟೋಬರ್ 2020, 13:42 IST
ಬೀದರ್‌ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮುಖಂಡರು ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರಿಗೆ ಮನವಿಪತ್ರ ಸಲ್ಲಿಸಿದರು
ಬೀದರ್‌ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮುಖಂಡರು ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರಿಗೆ ಮನವಿಪತ್ರ ಸಲ್ಲಿಸಿದರು   

ಬೀದರ್: ಉತ್ತರಪ್ರದೇಶದಲ್ಲಿ ಬಡವರು, ದಲಿತರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದನ್ನು ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ವಿವಿಧ ಸಂಘಟನೆಗಳ ಪ್ರಮುಖರು ಜನವಾಡ ರಸ್ತೆಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಸಮಾವೇಶಗೊಂಡು ಘೋಷಣೆಗಳನ್ನು ಕೂಗುತ್ತ ನಗರದ ಬಿ.ಆರ್. ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಭಗತ್‍ಸಿಂಗ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದರು.

ದಲಿತ ಸಂಘರ್ಷ ಸಮಿತಿ (ಭೀಮವಾದ)ಯ ಜಿಲ್ಲಾ ಸಂಚಾಲಕ ಕಲ್ಯಾಣರಾವ್ ಭೋಸ್ಲೆ ಹಾಗೂ ರಾಜ್ಯ ಘಟಕದ ಉಪಾಧ್ಯಕ್ಷ ರಾಜಕುಮಾರ ಮೂಲಭಾರತಿ ನೇತೃತ್ವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರಿಗೆ ರಾಷ್ಟ್ರಪತಿಗೆ ಬರೆದ ಮನವಿಪತ್ರವನ್ನು ಸಲ್ಲಿಸಿದರು.

ಉತ್ತರಪ್ರದೇಶದ ಹಾಥ್‍ರಸ್‍ನಲ್ಲಿ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಸಾಕ್ಷ್ಯ ಮಾಡಲು ಯುವತಿಯ ಶವವನ್ನು ದಹಿಸಲಾಗಿದೆ. ಅಲ್ಲಿನ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಪರೋಕ್ಷವಾಗಿ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದೆ. ಇದೇ ಕಾರಣಕ್ಕಾಗಿ ದುರ್ಬಲ ವರ್ಗದವರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರಪ್ರದೇಶದಲ್ಲಿ ಅಪಹರಣ, ಅತ್ಯಾಚಾರ, ಕೊಲೆ, ದೌರ್ಜನ್ಯ ಮತ್ತು ದರೋಡೆ ಯಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಮಹಿಳೆಯರು ಮನೆಯಿಂದ ಹೊರಗೆ ಬರುವುದು ಕಷ್ಟವಾಗಿದೆ. ರಾಜಕೀಯವಾಗಿ ಪ್ರಬಲವಾಗಿರುವ ಸಮುದಾಯಗಳು ಬಡ ಕುಟುಂಬಗಳ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಿವೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದರು.

ADVERTISEMENT

ವಿವಿಧ ಸಂಘಟನೆಗಳ ಮುಖಂಡರಾದ ಅರುಣ ಪಟೇಲ್, ರವಿಕುಮಾರ ವಾಘಮಾರೆ, ಶ್ರೀಪತರಾವ್ ದೀನೆ, ಶಿವಕುಮಾರ ನೀಲಕಟ್ಟಿ, ಓಂಪ್ರಕಾಶ ಭಾವಿಕಟ್ಟಿ, ಜೀವನ ಬುಡ್ತಾ, ಬಾಬುರಾವ್ ಮಿಠಾರೆ, ಶಾಲಿವಾನ್ ಬಡಿಗೇರ, ಬಾಬುರಾವ್ ಕೌಠಾ, ಅಂಬಾದಾಸ್ ಗಾಯಕವಾಡ, ಮಲ್ಲಿಕಾರ್ಜುನ ಚಿಟ್ಟಾ, ಪ್ರಭಾಕರ ಹೊನ್ನಾ, ಪ್ರಕಾಶ ಬಲಾಂಡೆ, ಶಿವರಾಜ ಸಾಗರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.