ADVERTISEMENT

ಬೀದರ್ | ತುಂತುರು ಮಳೆ; ಜನ, ವಾಹನ ಸಂಚಾರ ವಿರಳ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 3:14 IST
Last Updated 21 ಜುಲೈ 2024, 3:14 IST

ಭಾಲ್ಕಿ ತಾಲ್ಲೂಕಿನ ಖಾನಾಪೂರ ಗ್ರಾಮದಲ್ಲಿ ಶನಿವಾರ ಸುರಿದ ಜಿಟಿಜಿಟಿ ಮಳೆಯಲ್ಲಿಯೇ ಶಾಲಾ ಮಕ್ಕಳು ಮನೆಗೆ ತೆರಳಿದರು

ಭಾಲ್ಕಿ ತಾಲ್ಲೂಕಿನ ಖಾನಾಪೂರ ಗ್ರಾಮದಲ್ಲಿ ಶನಿವಾರ ಸುರಿದ ಜಿಟಿಜಿಟಿ ಮಳೆಯಲ್ಲಿಯೇ ಶಾಲಾ ಮಕ್ಕಳು ಮನೆಗೆ ತೆರಳಿದರು

ಭಾಲ್ಕಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಶನಿವಾರ ನಸುಕಿನ ಜಾವದಿಂದ ಸಂಜೆಯವರೆಗೂ ಮಳೆಯಾಗಿದೆ.

ADVERTISEMENT

ಬೆಳಿಗ್ಗೆ ಶಾಲೆ, ಕಾಲೇಜು ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಕರ್ತವ್ಯ ನಿಮಿತ್ತ ತೆರಳಬೇಕಿದ್ದ ನೌಕರರು, ಮಕ್ಕಳು, ವಿದ್ಯಾರ್ಥಿಗಳು ಜಿಟಿಜಿಟಿ ಮಳೆಯಲ್ಲಿಯೇ ಹೋಗಬೇಕಾಯಿತು. ಮಳೆಯಿಂದ ರಕ್ಷಿಸಿಕೊಳ್ಳಲು ಕೆಲವರು ಕೊಡೆಗಳ ನೆರವು ಪಡೆದಿದ್ದರೇ ಬಹುತೇಕರು ಮಳೆಯಲ್ಲಿ ನೆನೆಸಿಕೊಂಡು ತೆರಳಿದರು.

ಪ್ರತಿನಿತ್ಯ ದ್ವಿಚಕ್ರ ವಾಹನದ ಮೇಲೆ ಕೆಲಸಗಳಿಗೆ ತೆರಳುತ್ತಿದ್ದವರು ಖಾಸಗಿ ವಾಹನ, ಸರ್ಕಾರಿ ಬಸ್‌ಗಳ ಮೋರೆ ಹೋದರು. ತಳ್ಳುಬಂಡಿಗಳ ಮೇಲೆ ವ್ಯಾಪಾರ ಮಾಡುತ್ತಿದ್ದ ಚಿಲ್ಲರೆ ವ್ಯಾಪಾರಿಗಳು ಮಳೆಯಲ್ಲಿಯೇ ವ್ಯಾಪಾರ ಮುಂದುವರೆಸಿದ ದೃಶ್ಯ ಅಲ್ಲಲ್ಲಿ ಕಂಡು ಬಂತು. ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಬೆಳೆಗಳಿಗೆ ಜೀವ ಕಳೆ ತಂದಿದ್ದು, ಹೊಲದಲ್ಲಿ ಬೆಳೆಗಳು ನಳನಳಿಸುತ್ತಿದ್ದು, ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಹುಲಸೂರ: ರಸ್ತೆ ಗುಂಡಿಗಳಲ್ಲಿ ನೀರು

ಹುಲಸೂರ: ತಾಲ್ಲೂಕಿನಾದ್ಯಂತ ಶನಿವಾರ ಮೋಡ ಕವಿದ ವಾತಾವರಣದ ನಡುವೆ ಇಡೀ ದಿನ ಜಿಟಿಜಿಟಿ ಮಳೆಯಾಗಿದೆ.

ಬೆಿಗ್ಗೆಯೇ ತುಂತುರು ಮಳೆ ಆರಂಭವಾಗಿದ್ದರಿಂದ ಕೃಷಿ ಚಟುವಟಿಕೆ, ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕೆಲಸಗಳಿಗೆ ಅಡಚಣೆ ಉಂಟಾಯಿತು. ಪಟ್ಟಣದ ಮುಖ್ಯರಸ್ತೆ ರಸ್ತೆಗಳಲ್ಲಿರುವ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.

ತಾಲ್ಲೂಕಿನಲ್ಲಿ ಕೆರೆ, ಕಟ್ಟೆ ಹಾಗೂ ಜಲಾಶಯ ಭರ್ತಿಯಾಗುವ ಮಟ್ಟಿಗೆ ಮಳೆಯಾಗಿಲ್ಲ. ಉದ್ದು, ಹೆಸರು, ಸೋಯಾ ಅವರೆ , ತೊಗರಿ ಹಾಗೂ ಕಬ್ಬು ಬೆಳೆಗೆ ಪೂರಕವಾಗಿ ಮಾತ್ರ ಮಳೆಯಾಗಿದ್ದು, ರೈತರು ನಿಟ್ಟುಸಿರು ಬಿಡುವಂತಾಗಿದೆ.

ಸಂಜೆವರೆಗೂ ಮಳೆ

ಚಿಟಗುಪ್ಪ: ತಾಲ್ಲೂಕಿನ ನಿರ್ಣಾ, ಮುತ್ತಂಗಿ, ನಿರ್ಣಾ ವಾಡಿ, ಮನ್ನಾಎಖ್ಖೇಳಿ ಗ್ರಾಮಗಳಲ್ಲಿ ಶನಿವಾರ ಮುಂಜಾನೆಯಿಂದ ಸಂಜೆ ವರೆಗೂ ಜಿಟಿಜಿಟಿ ಮಳೆಯಾಗಿದೆ.

ನಿರಂತರ ಮಳೆಯಿಂದ ಬೀದಿ ಬದಿ ವ್ಯಾಪಾರಿಗಳು ತೊಂದರೆ ಅನುಭವಿಸಬೇಕಾಯಿತು. ‌ಶಾಲಾ ಮಕ್ಕಳು ಕೊಡೆ ಹಿಡಿದುಕೊಂಡು ಮನೆಗಳಿಗೆ ಹೊಗುವುದು ಕಂಡುಬಂತು.

ಔರಾದ್: ಮಳೆಯಲ್ಲೇ ಶಾಲೆಗೆ ಪಯಣ

ಔರಾದ್: ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲೂ ಶನಿವಾರ ದಿನವೀಡಿ ಮಳೆ ಸುರಿಯಿತು.

ನಸುಕಿನಿಂದ ಆರಂಭವಾದ ಜಿಟಿಜಿಟಿ ಮಳೆ ಸಂಜೆ ತನಕವೂ ಇತ್ತು. ಮಳೆ ಹಾಗೂ ಮೋಡದಿಂದ ತಂಪಾಗಿತ್ತು. ಬಹಳಷ್ಟು ಜನ ಮನೆಯಿಂದ ಹೊರಗೆ ಬರಲಿಲ್ಲ. ಈ ಕಾರಣ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ನಿಧಾನಗತಿಯಲ್ಲಿತ್ತು. ವಾಹನ ಸಂಚಾರವೂ ವಿರಳವಾಗಿತ್ತು.

ಈ ಜಿಟಿಜಿಟಿ ಮಳೆಯಿಂದ ಸೋಯಾ, ಉದ್ದು, ತೊಗರಿ ಸೇರಿದಂತೆ ಮುಂಗಾರು ಬೆಳೆಗಳಿಗೆ ತುಂಬಾ ಅನುಕೂಲವಾಗಿದೆ. ಸದ್ಯ ಬೆಳೆ ಕೂಡ ಚೆನ್ನಾಗಿವೆ. ಆದರೆ ಹಳ್ಳ, ಕೊಳ್ಳ, ಕೆರೆ-ಕಟ್ಟೆ ತುಂಬುವಷ್ಟು ಮಳೆಯಾಗಿಲ್ಲ ಎಂದು ರೈತರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.