ADVERTISEMENT

ಹಿಂದೂ ಮುಸ್ಲಿಂ ಸೇರಿ ರಂಜಾನ್, ಹನುಮ ಜಯಂತಿ ಆಚರಣೆ: ಭಾವೈಕ್ಯ ಸಾರುವ ರಕ್ಷಾಳ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 4:16 IST
Last Updated 2 ಜೂನ್ 2019, 4:16 IST
ಔರಾದ್ ತಾಲ್ಲೂಕಿನ ರಕ್ಷಾಳ (ಬಿ) ಗ್ರಾಮದಲ್ಲಿ ಒಂದೇ ಛಾವಣಿ ಅಡಿ ಇರುವ ದೇವಾಲಯ ಮತ್ತು ಮಸೀದಿ –––––––
ಔರಾದ್ ತಾಲ್ಲೂಕಿನ ರಕ್ಷಾಳ (ಬಿ) ಗ್ರಾಮದಲ್ಲಿ ಒಂದೇ ಛಾವಣಿ ಅಡಿ ಇರುವ ದೇವಾಲಯ ಮತ್ತು ಮಸೀದಿ –––––––   

ಔರಾದ್: ತಾಲ್ಲೂಕಿನ ರಕ್ಷಾಳ (ಬಿ) ಗ್ರಾಮದಲ್ಲಿ ಹಿಂದೂ ಮುಸ್ಲಿಮರು ಸೇರಿ ರಂಜಾನ್, ಹನುಮ ಜಯಂತಿ ಆಚರಿಸುವ ರೂಢಿ ಇದೆ.

ಈ ಊರಲ್ಲಿ ಒಂದೇ ಛಾವಣಿ ಅಡಿ ಒಂದು ಕಡೆ ಹನುಮಾನ ದೇವಾಲಯ ಇದ್ದರೆ ಮತ್ತೊಂದು ಕಡೆ ಅರಬಸಾಬ್ ಅವರ ಸಮಾಧಿ ಇದೆ. ಪ್ರತಿ ವರ್ಷ ನವೆಂಬರ್‌ನಲ್ಲಿ ನಡೆಯುವ ಸಂದಲ್ ಕಾರ್ಯಕ್ರಮ ಬಹಳ ವೈಶಿಷ್ಟ್ಯದಿಂದ ಕೂಡಿರುತ್ತದೆ. ಗ್ರಾಮದ ಪೊಲೀಸ್ ಪಾಟೀಲ ಅವರ ಮನೆಯಿಂದಲೇ ಸಂದಲ್ ಮೆರವಣಿಗೆ ಹೊರಡುತ್ತದೆ. ರಕ್ಷಾಳ ಸುತ್ತಲಿನ ಗ್ರಾಮಗಳ ವಿವಿಧ ಸಮುದಾಯದ ಜನ ಪಾಲ್ಗೊಂಡು ತಮ್ಮ ಇಷ್ಟಾರ್ಥ ಪೂರೈಸುತ್ತಾರೆ.

ಅರಬಸಾಬ್ ಅವರ ಸಮಾಧಿ ಪಕ್ಕದಲ್ಲಿರುವ ಹನುಮಾನ ಮಂದಿರ ಇದ್ದು, ಹನುಮಾನ್ ಜಯಂತಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಮುಸ್ಲಿಂ ಸಮುದಾಯದವರು ಮೆರವಣಿಗೆ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಿಭಾವದಿಂದ ಪಾಲ್ಗೊಳ್ಳುತ್ತಾರೆ. ದಾಸೋಹ ಮಾಡುತ್ತಾರೆ. ರಂಜಾನ್ ಹಬ್ಬದ ದಿನದಂದು ಮುಸ್ಲಿಮರು ತಮ್ಮ ಅಕ್ಕ–ಪಕ್ಕದ ಹಿಂದುಗಳನ್ನು ಕರೆದು ಊಟ ಬಡಿಸುತ್ತಾರೆ. ಹಿಂದುಗಳು ಸಹ ಇಫ್ತಾರ್ ಕೂಟ ಆಯೋಜಿಸುವ ಪದ್ಧತಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.

ADVERTISEMENT

‘ಈ ಊರು ಹುಟ್ಟಿಕೊಂಡಿದಾಗಿನಿಂದಲೂ ಅರಬಸಾಬ್ ಮಸೀದಿ ಮತ್ತು ಹನುಮಾನ ಮಂದಿರ ಒಂದೇ ಕಡೆ ಇದೆ. ಎರಡರ ನಡುವೆ ಒಂದೇ ಗೋಡೆ ಇದೆ. ಮೊದಲು ಪತ್ರಗಳಿದ್ದವು. ನಂತರ ಊರಿನ ಜನ ಸೇರಿ ಛಾವಣಿ ಹಾಕಿದ್ದೇವೆ. ಎಂದೂ ಜಾತಿ ಧರ್ಮದ ಜಗಳ ಆಗಿಲ್ಲ’ ಎಂದು ರಕ್ಷಾಳ ಗ್ರಾಮದ ಹಿರಿಯರು ಹೇಳುತ್ತಾರೆ.

‘ರಕ್ಷಾಳ ಹಿಂದೂ ಮುಸ್ಲಿಂ ಭಾವೈಕತೆಗೆ ಹೆಸರು ಪಡೆದಿದೆ. ಇಲ್ಲಿಯ ವ್ಯಾಪಾರಿ ರಫಿಕ್ ಎಂಬುವರು ಪ್ರತಿ ವರ್ಷ ಪಂಢರಪುರಗೆ ಹೋಗುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡುತ್ತಾರೆ’ ಎಂದು ಶಿಕ್ಷಕ ರಾಜಕುಮಾರ ಮೇತ್ರೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.