ADVERTISEMENT

ರಾಜ್ಯದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಅಪರೂಪದ ಪಕ್ಷಿ; ಕರಿ ನವಿಲು ಸಮೀಕ್ಷೆ ಆರಂಭ

ಚಂದ್ರಕಾಂತ ಮಸಾನಿ
Published 19 ಅಕ್ಟೋಬರ್ 2021, 6:16 IST
Last Updated 19 ಅಕ್ಟೋಬರ್ 2021, 6:16 IST
ಬೀದರ್ ತಾಲ್ಲೂಕಿನ ಚೊಂಡಿ ಗ್ರಾಮದ ಹುಲ್ಲುಗಾವಲು ಪ್ರದೇಶದಲ್ಲಿ ಕರಿ ನವಿಲಿಗೆ ಶೋಧ ನಡೆಸಿರುವ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಸದಸ್ಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ
ಬೀದರ್ ತಾಲ್ಲೂಕಿನ ಚೊಂಡಿ ಗ್ರಾಮದ ಹುಲ್ಲುಗಾವಲು ಪ್ರದೇಶದಲ್ಲಿ ಕರಿ ನವಿಲಿಗೆ ಶೋಧ ನಡೆಸಿರುವ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಸದಸ್ಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ   

ಬೀದರ್‌: ಅಳಿವಿನಂಚಿನಲ್ಲಿ ಇರುವ ಕರಿ ನವಿಲುಗಳ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಿದೆ. ಬೀದರ್ ತಾಲ್ಲೂಕಿನ ಚೊಂಡಿ ಸಮೀಪದ ಹುಲ್ಲುಗಾವಲು ಪ್ರದೇಶದಲ್ಲಿ ಕರಿ ನವಿಲು ಕಾಣಿಸಿಕೊಂಡ ನಂತರ ಅರಣ್ಯ ಇಲಾಖೆ ಸಮೀಕ್ಷೆ ಆರಂಭಿಸಿದೆ.

ಪಕ್ಷಿ ಪ್ರಬೇಧಗಳಲ್ಲೇ ಅಪರೂಪದ ಕರಿ ನವಿಲುಗಳ ಸಂಖ್ಯೆ ಬಹಳ ಕಡಿಮೆ ಇದೆ. ಗುಜರಾತ್, ರಾಜಸ್ಥಾನ ಹಾಗೂ ಆಂಧ್ರಪ್ರದೇಶದ ರೊಳ್ಳಪಾಡಂಟು ವನ್ಯಜೀವಿ ಪ್ರದೇಶಗಳಲ್ಲಿ ಮಾತ್ರ ಕರಿ ನವಿಲುಗಳ ವಂಶಾಭಿವೃದ್ಧಿಗೆ ಪೂರಕವಾದ ವಾತಾವರಣ ಇದೆ. ಬೇರೆ ಕಡೆ ಕಾಣಸಿಗುವುದು ತೀರ ವಿರಳ. ಇದೀಗ ಬೀದರ್‌ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವುದು ವನ್ಯ ಜೀವಿ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ.

ಜಿಲ್ಲೆಯ ಔರಾದ್‌ ತಾಲ್ಲೂಕಿನ ಚಟ್ನಾಳ್‌, ಆಲೂರ, ಗಡಿಕುಸನೂರು, ಲಿಂಗಿ ಹಾಗೂ ಬೀದರ್‌ ತಾಲ್ಲೂಕಿನ ಚೊಂಡಿಯಲ್ಲಿ ಕರಿ ನವಿಲುಗಳು ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇಂತಹ ಪಕ್ಷಿಗಳ ಗಣತಿಯಾಗಿಲ್ಲ. ಆದರೆ, ಸಂತತಿ ಉಳಿಸಿಕೊಳ್ಳುವ ದಿಸೆಯಲ್ಲಿ ಪ್ರಯತ್ನ ಆರಂಭವಾಗಿದೆ.

ADVERTISEMENT

1885ರಲ್ಲಿ ಸ್ಥಾಪನೆಯಾದ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಸದಸ್ಯರು ಸೆಪ್ಟೆಂಬರ್ 1ರಿಂದ ಜಿಲ್ಲೆಯಲ್ಲಿ ಕರಿ ನವಿಲುಗಳ ಶೋಧ ಕಾರ್ಯ ಆರಂಭಿಸಿದ್ದಾರೆ. ಸೊಸೈಟಿ ಒಂದು ವಾರದಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಮೀಕ್ಷೆಯನ್ನೂ ಆರಂಭಿಸಲಿದೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಕರಿ ನವಿಲುಗಳ ಸಂರಕ್ಷಣೆಗೆ ಬಜೆಟ್‌ನಲ್ಲಿ ₹ 50 ಲಕ್ಷ ಅನುದಾನ ನೀಡಿದ್ದರು. ಸಮೀಕ್ಷೆ ಕಾರ್ಯಕ್ಕೆಂದೇ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಗೆ ₹ 35 ಲಕ್ಷ ಬಿಡುಗಡೆ ಮಾಡಲಾಗಿದೆ.

‘ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ತಜ್ಞರು ಕರಿ ನವಿಲುಗಳ ಸಮೀಕ್ಷೆ ನಡೆಸಿ ಸಮಗ್ರ ವರದಿ ಸಿದ್ಧಪಡಿಸಿ ಮೇ ಒಳಗೆ ಅರಣ್ಯ ಇಲಾಖೆಗೆ ಸಲ್ಲಿಸಲಿದ್ದಾರೆ. ಅವುಗಳ ರಕ್ಷಣೆಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆಯೂ ಉಲ್ಲೇಖಿಸಲಿದ್ದಾರೆ. ವರದಿ ಆಧಾರದ ಮೇಲೆ ಸರ್ಕಾರ ಕರಿ ನವಿಲುಗಳ ಸಂರಕ್ಷಣೆಗೆ ಯೋಜನೆ ರೂಪಿಸಲಿದೆ’ ಎಂದು ಡಿಎಫ್‌ಒ ಪೇರ್ನಲ್‌ ಶಿವಶಂಕರನ್ ಹೇಳುತ್ತಾರೆ.

‘ಬೀದರ್‌ನಲ್ಲಿ ರಾಜ್ಯ ಮಟ್ಟದ ಹಕ್ಕಿ ಹಬ್ಬ ನಡೆದರೂ ಅಪರೂಪದ ಕರಿ ನವಿಲುಗಳ ಪ್ರಸ್ತಾಪ ಆಗಿರಲಿಲ್ಲ. ಪಕ್ಷಿಗಳು ಎಲ್ಲ ಕಡೆಗೂ ಇವೆ. ಆದರೆ, ಇಂತಹ ಪಕ್ಷಿಗಳು ಇರುವುದು ಬೀದರ್‌ ಜಿಲ್ಲೆಯಲ್ಲಿ ಮಾತ್ರ. ಹೀಗಾಗಿ ಇವುಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಒತ್ತು ಕೊಟ್ಟಿದೆ’ ಎಂದು ಅವರು ತಿಳಿಸುತ್ತಾರೆ.

ಮಿಲನ ಪೂರ್ವದಲ್ಲಿ ಗಂಡು ಹಾಗೂ ಹೆಣ್ಣು ನವಿಲುಗಳು ಸ್ವಚ್ಛಂದವಾಗಿ ಹಾರಾಡುತ್ತವೆ. ಗಂಡು ನವಿಲು ಹಾಡುತ್ತ ಮೈಮರೆಯುವಂತೆ ನರ್ತಿಸುತ್ತದೆ. ಇಂತಹ ದೃಶ್ಯವನ್ನು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ (ಬಿಎನ್‌ಎಚ್‌ಎಸ್) ನಿರ್ದೇಶಕ ಡಾ. ಬಿವಾಶ್‌ ಪಾಂಡವ್ ಕಳೆದ ವಾರ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

‘ಗೋಮಾಳ (ಗಾಯರಾಣ)ಗಳು ಮಾಯವಾಗುತ್ತಿವೆ. ಗೋಮಾಳ ಇದ್ದರೆ ಗ್ರಾಮೀಣ ಆರ್ಥವ್ಯವಸ್ಥೆಯನ್ನು ಸುಸ್ಥಿತಿಯಲ್ಲಿ ಇಡಲು ಸಾಧ್ಯವಾಗಲಿದೆ. ಹುಲ್ಲುಗಾವಲು ಇಲ್ಲದಂತಾಗಿ ಅಪರೂಪದ ಪಕ್ಷಿಗಳು ಕಣ್ಮರೆಯಾಗುತ್ತಿವೆ’ ಎಂದು ಪಕ್ಷಿ ವೀಕ್ಷಕ ವಿವೇಕ ಹೇಳುತ್ತಾರೆ.

‘ಕರಿ ನವಿಲು ತೊಗರಿ, ಹೆಸರು, ಉದ್ದು ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಕೀಟಗಳನ್ನು ಸೇವಿಸುತ್ತದೆ. ಇಂತಹ ಒಂದು ಪಕ್ಷಿ ಇದ್ದರೆ ಎರಡು ಮೂರು ಎಕರೆ ವ್ಯಾಪ್ತಿಯಲ್ಲಿನ ಕ್ರಿಮಿಕೀಟಗಳನ್ನು ನಿಯಂತ್ರಿಸಬಹುದು’ ಎನ್ನುತ್ತಾರೆ ಅವರು.

ಹುಲಿ ಸಂರಕ್ಷಣೆಗೆ ಇರುವಷ್ಟೇ ಬಿಗಿ ಕಾನೂನುಗಳು ಕರಿ ನವಿಲುಗಳ ರಕ್ಷಣೆಗೂ ಇವೆ. ಕರಿ ನವಿಲು ಬೇಟೆಯಾಡಿದ ವ್ಯಕ್ತಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಎರಡನೇ ಬಾರಿ ಬೇಟೆಯಾಡಿದರೆ ಏಳು ವರ್ಷಗಳ ವರೆಗೆ ಶಿಕ್ಷೆ ವಿಧಿಸಬಹುದಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.