ADVERTISEMENT

ಬದುಕಿಗೆ ಹೊಸ ರೂಪ ನೀಡುವ ಪ್ರಯತ್ನ ನಡೆಯಲಿ: ಜಿಲ್ಲಾಧಿಕಾರಿ ರಾಮಚಂದ್ರನ್‌

ಜಿಲ್ಲಾಧಿಕಾರಿಯಿಂದ ‘ಮಾಸ್ಟರ್‌ಮೈಂಡ್‌’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 16:06 IST
Last Updated 27 ಸೆಪ್ಟೆಂಬರ್ 2021, 16:06 IST
ಬೀದರ್‌ನ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್’ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌ ಅವರು ಆನ್‌ಲೈನ್‌ ಪತ್ರಿಕೆ ‘ಮಾಸ್ಟರ್‌ಮೈಂಡ್‌’ ಬಿಡುಗಡೆ ಮಾಡಿದರು. ಬೀದರ್ ಜಿಲ್ಲಾ ವರದಿಗಾರ ಚಂದ್ರಕಾಂತ ಮಸಾನಿ, ಪ್ರಾಚಾರ್ಯ ಪ್ರೊ.ದಿಲೀಪ ಗಡ್ಡೆ, ಐಎಎಸ್ ಪ್ರೊಬೆಷನರಿ ಅಧಿಕಾರಿ ಕೀರ್ತನಾ ಎಚ್‌.ಎಸ್. ಹಾಗೂ ಯುಪಿಎಸ್‌ಸಿಯಲ್ಲಿ 270ನೇ ರ್‍ಯಾಂಕ್‌ ಪಡೆದ ಮಹಮ್ಮದ್‌ ಹಾರಿಸ್‌ ಸುಮೈರ್ ಇದ್ದಾರೆ
ಬೀದರ್‌ನ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್’ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌ ಅವರು ಆನ್‌ಲೈನ್‌ ಪತ್ರಿಕೆ ‘ಮಾಸ್ಟರ್‌ಮೈಂಡ್‌’ ಬಿಡುಗಡೆ ಮಾಡಿದರು. ಬೀದರ್ ಜಿಲ್ಲಾ ವರದಿಗಾರ ಚಂದ್ರಕಾಂತ ಮಸಾನಿ, ಪ್ರಾಚಾರ್ಯ ಪ್ರೊ.ದಿಲೀಪ ಗಡ್ಡೆ, ಐಎಎಸ್ ಪ್ರೊಬೆಷನರಿ ಅಧಿಕಾರಿ ಕೀರ್ತನಾ ಎಚ್‌.ಎಸ್. ಹಾಗೂ ಯುಪಿಎಸ್‌ಸಿಯಲ್ಲಿ 270ನೇ ರ್‍ಯಾಂಕ್‌ ಪಡೆದ ಮಹಮ್ಮದ್‌ ಹಾರಿಸ್‌ ಸುಮೈರ್ ಇದ್ದಾರೆ   

ಬೀದರ್‌: ‘ಬದುಕಿಗೆ ಹೊಸ ರೂಪ ನೀಡುವ ಪ್ರಯತ್ನ ವಿದ್ಯಾರ್ಥಿ ದೆಸೆಯಲ್ಲೇ ಆರಂಭವಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಮೂಲಕ ಉನ್ನತ ಮಟ್ಟದ ಕನಸು ನನಸುಗೊಳಿಸಲು ಮುಂದಾಗಬೇಕು’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌ ಹೇಳಿದರು.

ಇಲ್ಲಿಯ ನೌಬಾದ್‌ನ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್’ ವತಿಯಿಂದ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ದತೆ ಮಾರ್ಗದರ್ಶನ ಕುರಿತ ಕಾರ್ಯಕ್ರಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ರೂಪಿಸಿದ ಆನ್‌ಲೈನ್‌ ಪತ್ರಿಕೆ ‘ಮಾಸ್ಟರ್‌ಮೈಂಡ್‌’ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ತಂದೆ-ತಾಯಿ ಮಕ್ಕಳಿಗಾಗಿ ಏನನ್ನೂ ಮಾಡಲು ಸಿದ್ಧರಿರುತ್ತಾರೆ. ಕಾರಣ ಅವರ ನಿರೀಕ್ಷೆ ಹುಸಿಗೊಳಿಸಬಾರದು. ಸ್ಪರ್ಧಾತ್ಮಕ ಯುಗದಲ್ಲಿ ಇರುವ ಸೌಲಭ್ಯಗಳನ್ನು ಬಳಸಿಕೊಂಡು ಜೀವನದ ಗುರಿ ಸಾಧಿಸಲು ಪ್ರಯತ್ನಿಸಬೇಕು’ ಎಂದು ಸಲಹೆ ಮಾಡಿದರು.

ADVERTISEMENT

’ತಮ್ಮೊಳಗಿನ ಪ್ರತಿಭೆ ಅರಿಯಬೇಕು. ಅದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಮುಂದಡಿ ಇಡಬೇಕು. ಸೋಲುಗಳು ಉಂಟಾದರೂ ಗುರಿ ತಲುಪುವವರೆಗೆ ವಿರಮಿಸಬಾರದು’ ಎಂದು ತಿಳಿಸಿದರು.

‘ಐಎಎಸ್, ವಿಜ್ಞಾನಿ, ಜನಪ್ರತಿನಿಧಿ, ಪತ್ರಕರ್ತ ಮೊದಲಾದ ವೃತ್ತಿಗಳಿಂದ ಸಮಾಜದಲ್ಲಿ ಮೇಲು- ಕೀಳು, ಬಡವ-ಬಲ್ಲಿದ ವ್ಯತ್ಯಾಸ ಸರಿಪಡಿಸಬಹುದು. ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಬಹುದು’ ಎಂದು ಹೇಳಿದರು.

‘ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಕಾರಣಕ್ಕಾಗಿ ಇಂದು ಜಿಲ್ಲಾಧಿಕಾರಿಯಾಗಿ ನಾನು ನಿಮ್ಮ ಮುಂದೆ ಇದ್ದೇನೆ. ಶಿಕ್ಷಣದಿಂದ ಏನು ಬೇಕಾದರೂ ಸಾಧಿಸಬಹುದು. ಶಿಕ್ಷಣವೇ ನಮ್ಮನ್ನು ಎತ್ತರಕ್ಕೆ ಒಯ್ಯುತ್ತದೆ. ಹೆಸರು, ಗೌರವಗಳನ್ನು ತಂದುಕೊಡುತ್ತದೆ’ ಎಂದು ತಿಳಿಸಿದರು.

‘ಭಗತ್‌ಸಿಂಗ್‌ ನಮಗೆಲ್ಲ ಆದರ್ಶ. ಯುವಕರು ಮಹಾನ್ ಪುರುಷರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳಬೇಕು. ಅನ್ಯಾಯವನ್ನು ಪ್ರತಿಭಟಿಸಬೇಕು. ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
‘ಸ್ವಸ್ಥ ಸಮಾಜ ಹಾಗೂ ಗ್ರಾಮ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ವಿದ್ಯಾರ್ಥಿಗಳು ಈ ದಿಸೆಯಲ್ಲಿ ಕಾರ್ಯನಿರ್ವಹಿಸಬೇಕು’ ಎಂದರು.

ಕಾಲೇಜು ದಿನಗಳಲ್ಲೇ ಸಿದ್ಧತೆ ಶುರುವಾಗಲಿ:

ಐಎಎಸ್ ಪ್ರೊಬೆಷನರಿ ಅಧಿಕಾರಿ ಕೀರ್ತನಾ ಎಚ್‌.ಎಸ್. ಮಾತನಾಡಿ, ‘ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಬೇಕಿಲ್ಲ. 10ನೇ ತರಗತಿ ‍ಪಾಸಾಗುತ್ತಲೇ ಕೆಪಿಎಸ್‌ಸಿ ಹಾಗೂ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ನಡೆಸುವಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಇದರಿಂದ ಸ್ಪರ್ಧೆಗೆ ಒಗ್ಗಿಕೊಳ್ಳಲು ಸಾಧ್ಯವಾಗುತ್ತದೆ’ ಎಂದರು.

‘ಶಿಕ್ಷಣ ಪೂರ್ಣಗೊಳಿಸಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡ ತೊಡಗಿದರೆ ಯಶ ಸುಲಭವಾಗಿ ದೊರಕಲಾರದು. ನಾವು ಪಠ್ಯದಲ್ಲಿ ಓದುವ ವಿಷಯವೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇರುವುದರಿಂದ ಜತೆ ಜತೆಯಾಗಿಯೇ ಸಿದ್ಧತೆ ಮಾಡಿಕೊಳ್ಳಬೇಕು. ಜತೆಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿತುಕೊಳ್ಳಲು ಪತ್ರಿಕೆಗಳನ್ನು ಓದುತ್ತಿರಬೇಕು’ ಎಂದು ಹೇಳಿದರು.

‘ವಿದ್ಯಾರ್ಥಿನಿಯರು ಸಮಾಜ ಸೇವೆ ಹಾಗೂ ರಾಷ್ಟ್ರ ಸೇವೆಗೆ ಓದಿನ ಮೂಲಕ ಮುಂದೆ ಬರಬೇಕು. ಅವಕಾಶಗಳ ಸದುಪಯೋಗ ಪಡೆಯಬೇಕು’ ಎಂದರು.

ಆಸಕ್ತಿಯ ವಿಷಯ ಆಯ್ಕೆ ಮಾಡಿಕೊಳ್ಳಿ:

ಯುಪಿಎಸ್‌ಸಿಯಲ್ಲಿ 270ನೇ ರ್‍ಯಾಂಕ್‌ ಪಡೆದ ಮಹಮ್ಮದ್‌ ಹಾರಿಸ್‌ ಸುಮೈರ್ ಮಾತನಾಡಿ, ‘ಒಬ್ಬ ಅಧಿಕಾರಿ ಸಮಾಜದಲ್ಲಿ ಹೇಗೆ ಬದಲಾವಣೆ ತರಲು ಸಾಧ್ಯ ಎನ್ನುವುದನ್ನು ನಾನು ಐಎಎಸ್‌ ಅಧಿಕಾರಿಯನ್ನು ನೋಡಿ ಅರಿತುಕೊಂಡಿದ್ದೇನೆ. ಬೀದರ್‌ ಜಿಲ್ಲಾಧಿಕಾರಿಯಾಗಿದ್ದ ಹರ್ಷ ಗುಪ್ತ ಅವರ ಕಾರ್ಯ ಸಾಧನೆಯೇ ನನಗೆ ಪ್ರೇರಣೆ ಆಯಿತು’ ಎಂದು ತಿಳಿಸಿದರು.

‘ಸುಮ್ಮನೆ ಓದಿ ಪರೀಕ್ಷೆಯಲ್ಲಿ ಉತ್ತರ ಬರೆದರೆ ಉಪಯೋಗವಾಗಲಾರದು. ವಿಷಯವನ್ನು ಚೆನ್ನಾಗಿ ಗೃಹಿಸಿ ಅರ್ಥೈಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವುದೇ ವಿಷಯವನ್ನು ಆಯ್ಕೆ ಮಾಡಿ ಕೊಳ್ಳಬಹುದಾಗಿದೆ. ಆಸಕ್ತಿ ಇರುವ ವಿಷಯದ ಮೂಲಕೇ ಸ್ಪರ್ಧೆ ಎದುರಿಸಲು ಅವಕಾಶ ಇದೆ’ ಎಂದು ಹೇಳಿದರು.

‘ನನ್ನ ಊರಿನಲ್ಲಿ ಪ್ರಜಾವಾಣಿ ಬಳಗದವರು ಹಾಗೂ ಸರ್ಕಾರಿ ಪದವಿ ಪ್ರಥಮ ದರ್ಜೆ ಪವಿ ಕಾಲೇಜಿನ ಸಿಬ್ಬಂದಿ ಸನ್ಮಾನಿಸಿ ಪ್ರೋತ್ಸಾಹಿಸುತ್ತಿರುವುದಕ್ಕೆ ಕೃತಜ್ಞನಾಗಿದ್ದೇನೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ದಿಲೀಪ ಗಡ್ಡೆ ಮಾತನಾಡಿ, ‘ಯಾವುದೇ ಪದವಿ ಪಡೆದರೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಬಹುದಾಗಿದೆ. ಐಎಎಸ್‌ ಅಧಿಕಾರಿಗಳು ನೀಡಿರುವ ಪ್ರೇರಣಾದಾಯಕ ಮಾರ್ಗದರ್ಶನದ ಸದುಪಯೋಗ ಪಡೆಯಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಹಿರಿಯ ವರದಿಗಾರ ಚಂದ್ರಕಾಂತ ಮಸಾನಿ ಸ್ವಾಗತಿಸಿದರು. ಯುಕ್ತಿ ಅರಳಿ ಪ್ರಾರ್ಥನೆ ಗೀತೆ ಹಾಡಿದರು. ಪ್ರೊ.ಶಿವಕುಮಾರ ಉಪ್ಪೆ ನಿರೂಪಿಸಿದರು. ಜಾಹೀರಾತು ವಿಭಾಗದ ಪ್ರತಿನಿಧಿ ಪ್ರವೀಣ ಕುಂದರಗಿ ಪರಿಚಯಿಸಿದರು. ವೀರೇಶ ರಾಮಪುರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.