
ಕಮಲನಗರ: ‘ಪ್ರತಿಯೊಬ್ಬರು ಉತ್ತಮವಾದ ಸಂಸ್ಕಾರ ಬೆಳೆಸಿಕೊಂಡು ಧರ್ಮದ ಹಾದಿಯಲ್ಲಿ ನಡೆದಾಗ ಸಾರ್ಥಕತೆ ಹೊಂದಲು ಸಾಧ್ಯವಾಗುತ್ತದೆ’ ಎಂದು ಭಕ್ತಮುಡಿ ಮಹಾಳಪ್ಪಯ್ಯ ಮಠದ ಶಂಭುಲಿಂಗ ಶಿವಾಚಾರ್ಯರು ಹೇಳಿದರು.
ತಾಲ್ಲೂಕಿನ ಡೋಣಗಾಂವ(ಎಂ) ಗ್ರಾಮದ ಸಮೀಪದ ಭಕ್ತಮುಡಿ ಮಹಾಳಪ್ಪಯ್ಯ ಜಾತ್ರಾ ಮಹೋತ್ಸವದ ನಿಮಿತ್ತ ಬುಧವಾರ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ದೇವರನ್ನು ಭಕ್ತಿ ಪೂರ್ವಕವಾಗಿ ಪೂಜಿಸಿದಲ್ಲಿ ಮನಸ್ಸಿಗೆ ಶಾಂತಿ ನೆಮ್ಮದಿ ದೊರಕಲಿದೆ’ ಎಂದರು.
ಶಿವಣಿ-ಹಲಬರ್ಗಾ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ ಮಾತನಾಡಿ, ‘ಜಾತ್ರೆಗಳು ಹಳ್ಳಿಗಳ ನಡುವೆ ಮತ್ತು ಜನರ ನಡುವೆ ಉತ್ತಮ ಬಾಂಧವ್ಯ ಬೆಳೆಸುತ್ತವೆ. ಮಹಾಳಪ್ಪಯ್ಯ ಜಾತ್ರೆ ಭಾವೈಕ್ಯದ ಸಂದೇಶ ಸಾರುತ್ತದೆ’ ಎಂದರು.
ಹಣೇಗಾಂವ ಮಠದ ಶಂಕರಲಿಂಗ ಶಿವಾಚಾರ್ಯ ಮಾತನಾಡಿದರು.
ಪಲ್ಲಕ್ಕಿ ಉತ್ಸವ : ಮಠದ ಶಂಭುಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ಬೆಳಿಗ್ಗೆ 9 ಗಂಟೆಗೆ ಹಾವಗಿಸ್ವಾಮಿ ಮಠದಿಂದ ಮಹಾಳಪ್ಪಯ್ಯ ಸ್ವಾಮೀಜಿಯವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಗ್ರಾಮದ ವಿವಿಧ ಬಡಾವಣೆಗಳಿಂದ ಬಾಜಾ ಭಜಂತ್ರಿಯೊಂದಿಗೆ ಮಹಾಳಪ್ಪಯ್ಯ ದೇವಸ್ಥಾನದವರೆಗೆ ಮೆರವಣಿಗೆ ಸಡಗರ ಸಂಭ್ರಮದಿಂದ ಜರುಗಿತು. ಭಕ್ತರು ಜಯಘೋಷ ಹಾಕುತ್ತಾ ಸಾಗಿದರು.
ಮಹಾಳಪ್ಪಯ್ಯ ಅವರ ದರ್ಶನಕ್ಕೆ ತಂಡ ತಂಡಗಳಲ್ಲಿ ಭಕ್ತರು ಆಗಮಿಸಿ ಸಾಲು ಸಾಲಾಗಿ ದರ್ಶನ ಪಡೆದರು. ಜಾತ್ರೆ ನಿಮಿತ್ತ ದೇವಸ್ಥಾನವನ್ನು ವಿಶೇಷ ಹೂವುಗಳಿಂದ ಅಲಂಕರಿಸಲಾಗಿತು. ಮಹಾರಾಷ್ಟ್ರ, ತೆಲಂಗಾಣ ಮತ್ತು ರಾಜ್ಯದ ಸುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ನೈವೇದ್ಯ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ತೊಟ್ಟಿಲು ತೂಗುವುದು, ಜಂಗಿ ಕುಸ್ತಿ ಸೇರಿ ವಿವಿಧ ಕಾರ್ಯಕ್ರಮಗಳು ನಡೆದವು.
ಉಮಾಕಾಂತ ದೇಶಿ ಕೇಂದ್ರ ಸ್ವಾಮಿ, ಬಸವಲಿಂಗ ಶಿವಾಚಾರ್ಯ ಕವಳಾಸ, ಶಿವಾನಂದ ಮಹಾಸ್ವಾಮಿ ಸಾಯಗಾಂವ, ಸಿದ್ಧಲಿಂಗ ಶಿವಾಚಾರ್ಯ ದೇವಣಿ, ವೀರುಪಾಕ್ಷ ಶಿವಾಚಾರ್ಯ ಹಾಗೂ ಇನ್ನಿತರರು ಇದ್ದರು.
ಬಂದ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಶಾಂತಿ ಸುವ್ಯವಸ್ಥೆಗಾಗಿ ಕಮಲನಗರ ಸಿಪಿಐ ಶ್ರೀಕಾಂತ ಅಲ್ಲಾಪೂರ, ಪಿಎಸ್‍ಐ ಆಶಾ ರಾಠೋಡ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಗೃಹ ರಕ್ಷಕ ದಳ ಸಿಬ್ಬಂದಿ ಬಿಗಿ ಬಂದೋಬಸ್ತ್ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.