ಬೀದರ್: ಒಳಮೀಸಲಾತಿಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್ ಅಧ್ಯಕ್ಷತೆಯ ಏಕ ಸದಸ್ಯ ವಿಚಾರಣಾ ಆಯೋಗ ಕೈಗೊಂಡ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಅದನ್ನು ಸರ್ಕಾರ ತಿರಸ್ಕರಿಸಬೇಕೆಂದು ಆಗ್ರಹಿಸಿ ಬಲಗೈ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಲಾಯಿತು.
ಬೀದರ್ ನಗರ ಹಾಗೂ ಗ್ರಾಮೀಣ ಭಾಗಗಳಿಂದ ಸಮಿತಿಯ ಕಾರ್ಯಕರ್ತರು ಅಶೋಕ ಚಕ್ರ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವಿರುವ ನೀಲಿ ಧ್ವಜಗಳನ್ನು ಹಿಡಿದುಕೊಂಡು, ಘೋಷಣೆ ಕೂಗುತ್ತ ಕಾಲ್ನಡಿಗೆಯಲ್ಲಿ ಬಾಬಾ ಸಾಹೇಬರ ವೃತ್ತ ತಲುಪಿದರು. ವಿವಿಧ ಮಾರ್ಗಗಳ ಮೂಲಕ ಕಾರ್ಯಕರ್ತರು ಬಂದ ಕಾರಣ ಸಂಚಾರ ಅಸ್ತವ್ಯಸ್ತಗೊಂಡಿತು. ಇಡೀ ಅಂಬೇಡ್ಕರ್ ವೃತ್ತ ನೀಲಿ ಧ್ವಜಗಳಿಂದ ನೀಲಿಮಯವಾಗಿತ್ತು. ಕೆಲ ಮುಖಂಡರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ಆನಂತರ ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೇ ಮೋಹನ್ ಮಾರ್ಕೆಟ್, ಕೆಇಬಿ ರಸ್ತೆ, ಹೊಸ್ ಬಸ್ ನಿಲ್ದಾಣ ರಸ್ತೆ, ಗುರುದ್ವಾರ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಮಾರ್ಗದುದ್ದಕ್ಕೂ ಘೋಷಣೆಗಳನ್ನು ಹಾಕಿದರು.
‘ತಿರಸ್ಕರಿಸಿ, ತಿರಸ್ಕರಿಸಿ ನಾಗಮೋಹನ್‌ದಾಸ್ ವರದಿ ತಿರಸ್ಕರಿಸಿ’, ‘ಶೇ 8ರಷ್ಟು ಮೀಸಲಾತಿ ನಮ್ಮ ಹಕ್ಕು’, ‘ದಿಕ್ಕಾರ, ದಿಕ್ಕಾರ ನಾಗಮೋಹನ್‌ದಾಸ್‌ಗೆ ದಿಕ್ಕಾರ’, ‘ನಮ್ಮ ಹೋರಾಟ ಯಾವ ಸಮುದಾಯದ ವಿರುದ್ಧವೂ ಇಲ್ಲ, ನಮ್ಮ ಹಕ್ಕಿಗಾಗಿ ನಮ್ಮ ಹೋರಾಟ’, ‘ಒಪ್ಪೊದಿಲ್ಲ, ಒಪ್ಪೊದಿಲ್ಲ ನಾಗಮೋಹನ್‌ದಾಸ್ ವರದಿ ಒಪ್ಪೊದಿಲ್ಲ’ ಎಂಬ ಬರಹವುಳ್ಳ ಭಿತ್ತಿ ಪತ್ರಗಳು, ನೀಲಿ ಧ್ವಜಗಳೊಂದಿಗೆ ಹೆಜ್ಜೆ ಹಾಕಿದರು. ಮಹಿಳೆಯರು, ಹಿರಿಯ ನಾಗರಿಕರು ಕೂಡ ರ್‍ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಿದರು. ಬಳಿಕ ನಾಗಮೋಹನ್‌ದಾಸ್ ಅವರ ವರದಿ ಸುಟ್ಟು ಹಾಕಲು ವಿಫಲ ಯತ್ನ ನಡೆಸಿ, ಬಳಿಕ ಅದನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮುಖಂಡರಾದ ಅನಿಲಕುಮಾರ್ ಬೇಲ್ದಾರ್, ಕಾಶಿನಾಥ ಚಲ್ವಾ, ಶ್ರೀಪತರಾವ್ ದೀನೆ, ಮಹೇಶ ಗೋರನಾಳಕರ್, ವಿನೋದ್ ಅಪ್ಪೆ, ವಿನಯ್ ಕುಮಾರ್ ಮಾಳಗೆ, ವಿನೋದಕುಮಾರ್ ಬಂಡೆ, ದಿಲೀಪ್‌ಕುಮಾರ್ ವರ್ಮಾ, ವಿನೋದಕುಮಾರ್ ಎಸ್., ಅರವಿಂದಕುಮಾರ ಅರಳಿ, ಸಂದೀಪ್ ಕಾಂಟೆ ಮತ್ತಿತರರು ಪಾಲ್ಗೊಂಡಿದ್ದರು.
ಬೇಡಿಕೆಗಳೇನು?
* ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಸೇರ್ಪಡೆಗೊಳ್ಳುವ ಜಾತಿಗಳನ್ನು ನಮೂದಿಸಿ ಸರ್ಕಾರ ಆದೇಶ ಹೊರಡಿಸಬೇಕು. ಎಡ್ಗರ್ ಥರ್ಸಟನ್ ಹಾಗೂ ಕೆ.ರಂಗಾಚಾರಿ ಸಂಶೋಧನೆ ಮಾಡಿ ಬರೆದಿರುವ ‘ಕಾಸ್ಟ್ ಅಂಡ್ ಟ್ರೈಬ್ಸ್ ಸದರ್ನ್ ಇಂಡಿಯಾ’ ಆಧರಿಸಿ ಬಲಗೈ ಸಮುದಾಯಗಳನ್ನು ಗುರುತಿಸಿ, ಜನಸಂಖ್ಯೆ ಒಟ್ಟುಗೂಡಿಸಿ ಮೀಸಲಾತಿ ಪ್ರಮಾಣ ಹಂಚಿಕೆ ಮಾಡಬೇಕು.
* ಸಮೀಕ್ಷೆಯನ್ನು ಸಮರ್ಪಕವಾಗಿ ಮಾಡಿಲ್ಲ. ಆದಕಾರಣ ಸಂಗ್ರಹಿಸಿರುವ ಮಾಹಿತಿ ದೃಢೀಕರಣಕ್ಕೆ 15 ದಿನಗಳ ಕಾಲಾವಕಾಶ ಕೊಟ್ಟು ತಂತ್ರಾಂಶದ ಮೂಲಕ ಆಕ್ಷೇಪಣೆಗಳನ್ನು ಸ್ವೀಕರಿಸಬೇಕು. ಬಳಿಕ ಮೀಸಲಾತಿ ಮರು ಹಂಚಿಕೆ ಮಾಡಬೇಕು.
* ಆಯೋಗವು ದುರುದ್ದೇಶದಿಂದ ಪರೈಯ್ಯ ಪರಯನ್ ಸಮುದಾಯವನ್ನು ಎಡಗೈ ಗುಂಪಿಗೆ ಸೇರಿಸಿರುವುದನ್ನು ರದ್ದುಪಡಿಸಿ, ಬಲಗೈ ಗುಂಪಿಗೆ ಸೇರಿಸಬೇಕು.
* ಜಾತಿಗಳೇ ಇಲ್ಲದ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮೂಹಗಳಿಗೆ ನಿಗದಿಪಡಿಸಿರುವ ಶೇ 1ರಷ್ಟು ಮೀಸಲಾತಿ ರದ್ದುಪಡಿಸಿ ಆಯಾ ಜಾತಿಗಳಿಗೆ ಮರು ಹಂಚಿಕೆ ಮಾಡಬೇಕು.
* ಎಂಟು ಲಕ್ಷ ಮಕ್ಕಳು ಗಣತಿಯಿಂದ ಹೊರಗುಳಿದಿದ್ದಾರೆ. ಅವರನ್ನು ಸಮೀಕ್ಷೆಗೆ ಒಳಪಡಿಸಬೇಕು.
* ಹೊಲೆಯ ಮತ್ತು ಹೊಲೆಯ ಸಂಬಂಧಿತ ಪ್ರವರ್ಗ (ಸಿ) ಗುಂಪಿಗೆ ಸೇರಬೇಕಿರುವ ಜಾತಿಗಳನ್ನು ಪ್ರವರ್ಗ–ಎ,ಬಿ,ಇ ವರ್ಗಗಳಿಗೆ ಉದ್ದೇಶಪೂರ್ವಕವಾಗಿ ಸೇರಿಸಿ ಅನ್ಯಾಯ ಮಾಡಲಾಗಿದೆ. ಸದರಿ ಜಾತಿಗಳನ್ನು ‘ಸಿ’ ಗುಂಪಿಗೆ ಸೇರಿಸಬೇಕು.
* ಪಟ್ಟಿಯಲ್ಲಿರುವ 49 ಮೂಲ/ಉಪಜಾತಿಗಳು ಪರಿಶಿಷ್ಟ ಜಾತಿಯ ಬಲಗೈ/ಛಲವಾದಿ/ಹೊಲೆಯ ಸಂಬಂಧಿತ ಜಾತಿಗಳು ಒಂದೇ ಆಗಿದ್ದು, ಒಂದೇ ಗುಂಪಿಗೆ ಸೇರಿಸಬೇಕು.
* ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಲಗೈ ಗುಂಪಿನ ಜಾತಿಗಳು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಅಧಿಕಾರಕ್ಕೆ ತಂದಿವೆ. ಹೀಗಾಗಿ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು.
ಎಚ್.ಎನ್. ನಾಗಮೋಹನ್‌ದಾಸ್ ಅವರ ವರದಿ ಸಂಪೂರ್ಣ ಏಕಪಕ್ಷೀಯವಾಗಿದ್ದು, ಸರ್ಕಾರ ಇದನ್ನು ತಿರಸ್ಕರಿಸಬೇಕು. ಇಲ್ಲವಾದಲ್ಲಿ ಹೋರಾಟ ಇನ್ನಷ್ಟು ತೀವ್ರಗೊಳಿಸಲಾಗುವುದು.ವಿಠ್ಠಲದಾಸ್ ಪ್ಯಾಗೆ, ಹೋರಾಟ ಸಮಿತಿ ಮುಖಂಡ
ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಜಾತಿಗಳಿಗೆ ಬಹಳ ಅನ್ಯಾಯವಾಗಿದೆ. ಆಗಿರುವ ಅನ್ಯಾಯ ಸರಿಪಡಿಸಿ ವಸ್ತುನಿಷ್ಠ ವರದಿ ಸಿದ್ಧಪಡಿಸಬೇಕು.ಬಾಬುರಾವ್ ಪಾಸ್ವಾನ್, ಹೋರಾಟ ಸಮಿತಿ ಮುಖಂಡ
ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸಮೀಕ್ಷೆ ಸರಿಯಾಗಿ ಮಾಡಿಲ್ಲ. ಶೇ 50ರಷ್ಟು ಸಮೀಕ್ಷಾ ಕಾರ್ಯ ಆಗಿಲ್ಲ. ಪುನಃ ಸಮೀಕ್ಷೆ ನಡೆಸಿ, ಸರಿಯಾದ ವರದಿ ತಯಾರಿಸಬೇಕು.ರಮೇಶ ಡಾಕುಳಗಿ, ಹೋರಾಟ ಸಮಿತಿ ಮುಖಂಡ
ಸೂಕ್ತ ರೀತಿಯಲ್ಲಿ ಸಮೀಕ್ಷೆ ನಡೆಸಿ, ಆಕ್ಷೇಪಣೆಗೆ ಕಾಲಾವಕಾಶ ಕೊಡಬೇಕು. ಆಕ್ಷೇಪಣೆಗಳನ್ನು ಪರಿಶೀಲಿಸಿ, ಅದರ ಮೇಲೆ ಕ್ರಮ ಕೈಗೊಂಡು ಆನಂತರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು.ಮಾರುತಿ ಬೌದ್ಧೆ, ಹೋರಾಟ ಸಮಿತಿ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.