ADVERTISEMENT

ಬೀದರ್‌: ಒಳಮೀಸಲಾತಿ ವಿಧೇಯಕ ತಿರಸ್ಕಾರಕ್ಕೆ ಬಲಗೈ ಜಾತಿಗಳ ಒಕ್ಕೂಟ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 5:27 IST
Last Updated 20 ಫೆಬ್ರುವರಿ 2026, 5:27 IST
ಬಾಬುರಾವ್‌ ಪಾಸ್ವಾನ್‌
ಬಾಬುರಾವ್‌ ಪಾಸ್ವಾನ್‌   

ಬೀದರ್‌: ಒಳಮೀಸಲಿಗೆ ಸಂಬಂಧಿಸಿದ ಪರಿಶಿಷ್ಟ ಜಾತಿಗಳ (ಉಪ ವರ್ಗೀಕರಣ) ವಿಧೇಯಕ–2025 ಅನ್ನು ರಾಜ್ಯಪಾಲರು ತಿರಸ್ಕರಿಸಬೇಕು. ಒಳಮೀಸಲಾತಿ ಬಿಟ್ಟು ಹಳೆಯ ಮೀಸಲಾತಿ ಅನ್ವಯ ನೇಮಕಾತಿ ಪ್ರಕ್ರಿಯೆ ನಡೆಸಬೇಕೆಂದು ಬಲಗೈ ಜಾತಿಗಳ ಒಕ್ಕೂಟ ಆಗ್ರಹಿಸಿದೆ.

ಈ ಸಂಬಂಧ ಒಕ್ಕೂಟದ ಪದಾಧಿಕಾರಿಗಳು ನಗರದಲ್ಲಿ ಗುರುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಒತ್ತಾಯಿಸಿದರು.

ಒಕ್ಕೂಟದ ಅಧ್ಯಕ್ಷ ಅನಿಲ್‌ಕುಮಾರ್‌ ಬೆಲ್ದಾರ್‌ ಮಾತನಾಡಿ, ಒಳ ಮೀಸಲಾತಿಗೆ ಸಂಬಂಧಿಸಿದಂತೆ ಇರುವ ಗೊಂದಲಗಳು, ಸಮಸ್ಯೆಗಳು ಹಾಗೂ ನ್ಯಾಯಾಲಯದ ಅಡೆತಡೆಗಳು ನಿವಾರಣೆಯಾಗುವ ತನಕ ಒಳಮೀಸಲಾತಿ ಕೈ ಬಿಟ್ಟು ಹಳೆ ಮೀಸಲಾತಿ ಜಾರಿಗೆ ತಂದು ನೇಮಕಾತಿ ಮತ್ತು ಶಿಕ್ಷಣಕ್ಕೆ ತೊಂದರೆಯಾಗದಂತೆ ಸೂಕ್ತ ಆದೇಶ ಹೊರಡಿಸಬೇಕೆಂದು ಮುಖ್ಯಮಂತ್ರಿಗೆ ಒತ್ತಾಯಿಸಿದರು

ADVERTISEMENT

ಹೊಸ ವಿಧೇಯಕಕ್ಕೆ ಎರಡು ಸದನಗಳಲ್ಲಿ ಈಗಾಗಲೇ ಅನುಮೋದನೆ ದೊರೆತಿದೆ. ರಾಜ್ಯಪಾಲರ ಅಂಕಿತ ಬೀಳಬೇಕಿದೆ. ಒಂದುವೇಳೆ ಇದಕ್ಕೆ ರಾಜ್ಯಪಾಲರಿಂದ ಅಂಕಿತ ಬಿದ್ದರೆ ಪರಿಶಿಷ್ಟ ಜಾತಿಯ ಎಲ್ಲ ಸಮುದಾಯಗಳಿಗೆ ಸಮಸ್ಯೆ ಉಂಟಾಗುತ್ತದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಕೂಡಲೇ ಇದನ್ನು ಹಿಂಪಡೆದು ಇದರಲ್ಲಿನ ಅವೈಜ್ಞಾನಿಕ ಗೊಂದಲಗಳನ್ನು ಸರಿಪಡಿಸಬೇಕು. ಎಲ್ಲ ಶೋಷಿತ ಸಮುದಾಯಗಳಿಗೆ ಅವರ ಹಕ್ಕುಗಳು ನ್ಯಾಯಯುತವಾಗಿ ದೊರೆಯುವಂತೆ ನೋಡಿಕೊಳ್ಳಬೇಕು. ಸರ್ಕಾರದ ಕಣ್ತೆರೆಸಲು ಈಗಾಗಲೇ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದೂ ಎಚ್ಚರಿಕೆಯ ಧಾಟಿಯಲ್ಲಿ ಹೇಳಿದರು.

‌ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ರಮೇಶ್‌ ಡಾಕುಳಗಿ ಮಾತನಾಡಿ, ಪರಿಶಿಷ್ಟ ಜಾತಿಯ ಎಲ್ಲ ಪ್ರವರ್ಗಗಳಿಗೆ ಈಗ ನಿಗದಿಪಡಿಸಿರುವ 6+6+5 ಮೀಸಲಾತಿ ಪ್ರಮಾಣವನ್ನು ಒಂದು ಘಟಕವಾಗಿ ಅಧಿಸೂಚನೆ ಹೊರಡಿಸುತ್ತಿರುವ ಕಾರಣ ಪ್ರವರ್ಗ ಎ,ಬಿ,ಸಿಯಲ್ಲಿ ‘ಎ’ಗೆ ಮಾತ್ರ ಅನೂಕುಲವಾಗಿ, ಇನ್ನೆರಡು ಪ್ರವರ್ಗದವರಿಗೆ ಅನ್ಯಾಯವಾಗುತ್ತಿದೆ. ಇದನ್ನು ತಕ್ಷಣವೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ದಸಂಸ ಜಿಲ್ಲಾ ಸಂಚಾಲಕ ಬಾಬುರಾವ್‌ ಪಾಸ್ವಾನ್ ಮಾತನಾಡಿ, ಪ್ರಸ್ತುತ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದಲ್ಲಿ 19 ಜಾತಿಗಳನ್ನು ಬಲಗೈ ಸಮುದಾಯವೆಂದು ನಮೂದಿಸಲಾಗಿದೆ. ಆದರೆ, ರಾಜ್ಯ ಸರ್ಕಾರವು ನವೆಂಬರ್ 13, 2025ರಂದು ಸೌಲಭ್ಯ ಪಡೆಯಲು ಹೊರಡಿಸಿರುವ ಆದೇಶದಲ್ಲಿ 63 ಜಾತಿಗಳನ್ನು ಬಲಗೈ ಸಮುದಾಯವೆಂದು ಗುರುತಿಸಿದೆ. ಈ ಸಮುದಾಯದ ಎಲ್ಲ 63 ಜಾತಿಗಳು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಪಡೆಯಲು ಸೂಕ್ತ ಆದೇಶ ಹೊರಡಿಸಬೇಕು. ಸುಪ್ರೀಂಕೋರ್ಟ್‌ ತೀರ್ಪಿನಲ್ಲಿರುವಂತೆ ಸಂವಿಧಾನದ ಅನುಚ್ಛೇದ 15 ಮತ್ತು 16ರಂತೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಳಮೀಸಲಾತಿಯನ್ನು ಸೀಮಿತಗೊಳಿಸಬೇಕು. ಉಳಿದ ಯಾವುದೇ ಕ್ಷೇತ್ರಗಳಿಗೆ ಒಳಮೀಸಲಾತಿ ಅನ್ವಯಿಸುವುದಿಲ್ಲವೆಂದು ರಾಜ್ಯ ಸರ್ಕಾರವು ಸ್ಪಷ್ಟಪಡಿಸಿ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.

ಈ ಸಂಬಂಧ ರಾಜ್ಯ ಪಾಲರ ಬಳಿಗೆ ಪ್ರತ್ಯೇಕ ನಿಯೋಗ ಕೊಂಡೊಯ್ದು ಅವೈಜ್ಞಾನಿಕ ಒಳ ಮೀಸಲಾತಿ ವಿಧೇಯಕವನ್ನು ತಿರಸ್ಕರಿಸಲು ಕೋರಲಾಗುವುದು ಎಂದರು.

ದಲಿತ ಸೇನೆ ಜಿಲ್ಲಾಧ್ಯಕ್ಷ ಶ್ರೀಪತರಾವ್‌ ದೀನೆ, ದಸಂಸ ಸಂಚಾಲಕ ಶಿವಕುಮಾರ್‌ ನೀಲಿಕಟ್ಟಿ, ದಲಿತ ವಿದ್ಯಾರ್ಥಿ ಪರಿಷತ್‌ ಅಧ್ಯಕ್ಷ ಸಂದೀಪ್‌ ಕಾಂಟೆ, ಬಿವಿಎಸ್ ಅಧ್ಯಕ್ಷ ಪ್ರದೀಪ್‌ ನಾಟೇಕರ್, ಅಂಬಾದಾಸ ಗಾಯಕವಾಡ, ಪುಟ್ಟು ದೀನೆ, ದಿಲೀಪ್‌ ಭೋಸ್ಲೆ, ರಮೇಶ್‌ ಪಾಸ್ವಾನ್, ಸೂರ್ಯಕಾಂತ ಸಾದುರೆ, ಗೌರಿಶಂಕರ್‌ ವಾಘಮಾರೆ, ಭೀಮರಾವ್‌ ಹಾಜರಿದ್ದರು.

ಹಾಲಿ ಒಳಮೀಸಲಾತಿ ಪದ್ದತಿ ಬಲಗೈ ಸಮುದಾಯಗಳಿಗೆ ಮರಣ ಶಾಸನವಾಗಿದೆ. ರಾಜ್ಯ ಸರ್ಕಾರ ತಕ್ಷಣವೇ ಹಿಂಪಡೆಯಬೇಕು. ಶೇ 90ರಷ್ಟು ಬಲಗೈ ಸಮುದಾಯದ ಮತ ಪಡೆದಿರುವ ಸರ್ಕಾರ ಈ ಸಮುದಾಯಕ್ಕೆ ನ್ಯಾಯ ಒದಗಿಬೇಕು.
ಅನಿಲ್‌ಕುಮಾರ್‌ ಬೆಲ್ದಾರ್‌ ಅಧ್ಯಕ್ಷ ಬಲಗೈ ಜಾತಿಗಳ ಒಕ್ಕೂಟ
ಕಾಂಗ್ರೆಸ್ ಸರ್ಕಾರಕ್ಕೆ ನಮ್ಮ ಮತಗಳು ಬೇಕು. ಆದರೆ ನಮ್ಮ ಏಳಿಗೆ ಬೇಕಿಲ್ಲ. ನಮ್ಮ ಸಮುದಾಯದ ಮಂತ್ರಿಗಳು ಸಮಾಜಕ್ಕೆ ಅನ್ಯಾಯ ಆಗುತ್ತಿದ್ದರೂ ದಿವ್ಯ ಮೌನ ವಹಿಸಿರುವುದು ದುರದೃಷ್ಟಕರ ಸಂಗತಿ.
ರಮೇಶ್‌ ಡಾಕುಳಗಿ ರಾಜ್ಯ ಸಂಘಟನಾ ಸಂಚಾಲಕ ದಸಂಸ
ಅವೈಜ್ಞಾನಿಕವಾಗಿರುವ ಒಳ ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಜಾರಿಗೆ ಮಾಡಬಾರದು. ಒಂದುವೇಳೆ ಜಾರಿಗೊಳಿಸಿದರೆ ಬಲಗೈ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಬೇಕಾದೀತು.
ಬಾಬುರಾವ್‌ ಪಾಸ್ವಾನ್‌ ಜಿಲ್ಲಾ ಸಂಚಾಲಕ ದಸಂಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.