ಬಸವಕಲ್ಯಾಣದ ಮುಖ್ಯ ರಸ್ತೆಯಲ್ಲಿನ ಬಸವೇಶ್ವರ ವೃತ್ತದಲ್ಲಿರುವ ತಗ್ಗುಗುಂಡಿ
ಬಸವಕಲ್ಯಾಣ: ನಗರದ ಪ್ರಮುಖ ರಸ್ತೆಗಳಲ್ಲಿ ಹಲವಾರು ಕಡೆ ಆಳವಾದ ತಗ್ಗುಗುಂಡಿಗಳು ಬಿದ್ದಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ವಾಹನ ಚಾಲಕರಿಗೆ ತಗ್ಗು ಕಾಣಲೆಂದು ಜನರು ಅದರಲ್ಲಿ ಪ್ಲಾಸ್ಟಿಕ್, ಪೇಪರ್ ಇತ್ಯಾದಿ ಇಟ್ಟಿರುವುದು ಕಂಡು ಬಂದಿದೆ.
ಮುಖ್ಯವೆಂದರೆ, ಇಲ್ಲಿ ಸಾವಿರಾರು ಲಾರಿಗಳಿದ್ದು 400ಕ್ಕೂ ಅಧಿಕ ಗ್ಯಾರೇಜ್‌ಗಳಿವೆ. ಹೀಗಾಗಿ ಯಾವಾಗಲೂ ಎಲ್ಲೆಡೆ ಭಾರಿ ವಾಹನಗಳು ಸಂಚರಿಸುತ್ತವೆ. ಇದಲ್ಲದೆ ಬಸವಾದಿ ಶರಣರ ನಾಡು ಆಗಿರುವ ಕಾರಣ ನಿತ್ಯ ದೂರದೂರದ ಪ್ರವಾಸಿಗರು ಬರುತ್ತಾರೆ. ಆದರೆ, ಇಷ್ಟೊಂದು ವಾಹನ ಸಂಚಾರಕ್ಕೆ ತಕ್ಕಂತೆ ಇಲ್ಲಿನ ರಸ್ತೆಗಳಿಲ್ಲ. ಸಾಕಷ್ಟು ಅನುದಾನವೂ ಬರುತ್ತಿದ್ದರೂ ಕೆಲ ತಿಂಗಳಲ್ಲಿಯೇ ರಸ್ತೆಗಳು ಹದಗೆಡುವುದು ತೀರ ಸಾಮಾನ್ಯವಾಗಿದೆ.
ರಾಷ್ಟ್ರೀಯ ಹೆದ್ದಾರಿಯಿಂದ ನಗರ ಪ್ರವೇಶಿಸುವ ಸಸ್ತಾಪುರ ಬಂಗ್ಲಾ ಹತ್ತಿರದ ಪ್ರವೇಶ ದ್ವಾರದ ಸಮೀಪದಲ್ಲಿ ಎಲ್ಲ ಕಾಲಕ್ಕೂ ನೀರು ಸಂಗ್ರಹಗೊಂಡಿರುವುದು ಕಾಣುತ್ತದೆ. ಇಲ್ಲಿನ ಅಟೋ ನಗರದಲ್ಲಿ ನೂರಾರು ಗ್ಯಾರೇಜ್ ಗಳಿವೆ. ಲಾರಿಗಳ ಓಡಾಟದಿಂದ ರಸ್ತೆ ಹಾಳಾಗುತ್ತದೆ. ಇಲ್ಲಿನ ರಸ್ತೆಯೂ ತೀರ ಇಕ್ಕಟ್ಟಾಗಿದೆ. ಆದರೂ, ರಸ್ತೆ ಪಕ್ಕದಲ್ಲಿಯೇ ವಾಹನಗಳು ನಿಂತಿರುತ್ತವೆ. ಇದರಿಂದಲೂ ಸಂಚಾರಕ್ಕೆ ತೊಂದರೆ ಆಗುತ್ತಿದೆ.
ಮಿನಿ ವಿಧಾನಸೌಧದ ಸಮೀಪ, ಡಾ.ಅಂಬೇಡ್ಕರ್ ವೃತ್ತ, ಹರಳಯ್ಯ ವೃತ್ತ, ನಾರಾಯಣಪುರ ಕ್ರಾಸ್ ಹಾಗೂ ಮುಖ್ಯ ಬಸ್ ನಿಲ್ದಾಣದ ಮಧ್ಯದಲ್ಲಿರುವ ರಸ್ತೆಯಲ್ಲಿ ಅಲ್ಲಲ್ಲಿ ತಗ್ಗುಗುಂಡಿಗಳಿವೆ. ನಾರಾಯಣಪುರ ಕ್ರಾಸ್ ದಿಂದ ಶಿವಪುರಕ್ಕೆ ಹೋಗುವ ರಸ್ತೆಯಲ್ಲಿನ ನಾಗಣ್ಣ ಕಟ್ಟೆವರೆಗಿನ ರಸ್ತೆ ಹದಗೆಟ್ಟು ಅನೇಕ ತಿಂಗಳಾದರೂ ಸಂಬಂಧಿತರು ಕಣ್ಣುಮುಚ್ಚಿ ಕುಳಿತಿದ್ದಾರೆ.
ಮುಖ್ಯವೆಂದರೆ, ನಾರಾಯಣಪುರ ಕ್ರಾಸ್ ದಿಂದ ನಾಗಣ್ಣ ಕಟ್ಟೆವರೆಗೆ ಹೋಗುವ ರಸ್ತೆಯ ಆಚೆಈಚೆ 40 ಕ್ಕೂ ಅಧಿಕ ಶಾಲೆಗಳಿವೆ. ಹೀಗಾಗಿ ಬೆಳಿಗ್ಗೆ ಮತ್ತು ಸಂಜೆ ಇಲ್ಲಿ ಜನಜಂಗುಳಿ ಇರುತ್ತದೆ. ಶಾಲಾ ಮಕ್ಕಳ ವಾಹನಗಳು ಇರುವುದರಿಂದ ವಾಹನ ದಟ್ಟಣೆ ಇರುತ್ತದೆ. ಈ ರಸ್ತೆ ಅಗಲಗೊಳಿಸಲು ನಗರಸಭೆಯಿಂದ ಕೆಲ ವರ್ಷಗಳ ಹಿಂದೆಯೇ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿತ್ತು. ಆ ಕೆಲಸ ಇನ್ನುವರೆಗೆ ಆಗಿಲ್ಲ.
ಮಳೆ ಬಂದಾಗ ರಸ್ತೆಗಳಲ್ಲಿನ ತಗ್ಗುಗುಂಡಿಗಳಲ್ಲಿ ನೀರು ಸಂಗ್ರಹಗೊಳ್ಳುವ ಕಾರಣ ಹೆಚ್ಚು ತೊಂದರೆ ಆಗುತ್ತಿದೆ. ದ್ವಿಚಕ್ರ ವಾಹನಗಳು ಪಲ್ಟಿ ಆಗುತ್ತಿವೆ. ಕೆಲವೆಡೆಯ ತಗ್ಗುಗಳಲ್ಲಿ ಕೆಂಪು ಮಣ್ಣು ಹರಡಿ ತೆಪೆ ಹಚ್ಚುವ ಕಾರ್ಯವೂ ನಡೆದಿದೆ. ಇದರಿಂದ ಕೆಸರು ಆಗುತ್ತಿರುವುದರಿಂದ ಸಂಚಾರಕ್ಕೆ ಇನ್ನಷ್ಟು ತೊಂದರೆಯಾಗಿದೆ. ತಗ್ಗುಗಳಲ್ಲಿ ಖಡಕ್ ಮಣ್ಣು, ಮರಳು, ಜಲ್ಲಿಕಲ್ಲು ಹಾಕಬಹುದಾಗಿದೆ. ತಾತ್ಕಾಲಿಕವಾಗಿ ಡಾಂಬರು ಸುರಿಯಬಹುದು. ಆದರೆ ಕೆಂಪು ಮಣ್ಣು ಹಾಕಿ ರಸ್ತೆಯೆಲ್ಲ ಕೆಸರು ಆಗುವಂತೆ ಮಾಡುತ್ತಿರುವುದು ಸರಿಯೇ ಎಂಬುದು ಜನರ ಪ್ರಶ್ನೆಯಾಗಿದೆ.
ಇದು ಜಿಲ್ಲೆಯ ಎರಡನೇ ದೊಡ್ಡ ನಗರ ವಿಭಾಗದಲ್ಲಿಯೇ ಇಲ್ಲಿ ಲಾರಿಗಳು ಅತ್ಯಧಿಕ ಭಾರಿ ವಾಹನಗಳ ಸಂಚಾರಕ್ಕೆ ತಕ್ಕ ರಸ್ತೆಗಳಿಲ್ಲ
ಇದು ಜಿಲ್ಲೆಯ ಉಪ ವಿಭಾಗದ ಕೇಂದ್ರವಿದ್ದರೂ ಅನಾಥ ಇದ್ದಂತಿದೆ. ಕೆಲವೆಡೆ ಡಾಂಬರು ರಸ್ತೆಯಲ್ಲಿ ಮಣ್ಣು ಹರಡಿ ಅವೈಜ್ಞಾನಿಕವಾಗಿ ಕೆಲಸ ಕೈಗೊಳ್ಳಲಾಗಿದೆಲಕ್ಷ್ಮಿಪುತ್ರ ನಿಂಬಾಳಕರ್ ವ್ಯಾಪಾರಿ
ಶರಣ ಸ್ಥಳಗಳಿಗೆ ಬರುವ ಪ್ರವಾಸಿಗರಿಗೆ ನಗರ ಪ್ರವೇಶಿಸುವ ಸ್ಥಳದಲ್ಲಿ ಕೆಸರಿನ ಸ್ವಾಗತ ದೊರಕುತ್ತದೆ. ಇಲ್ಲಿನ ಮುಖ್ಯ ದ್ವಾರದಲ್ಲಿ ಯಾವಾಗಲೂ ನೀರು ನಿಂತಿರುತ್ತದೆಶಾಮ ಹತ್ತೆ ಸಾಮಾಜಿಕ ಕಾರ್ಯಕರ್ತ
ಕೋಟ್ -03 ನಗರದ ಪ್ರಮುಖ ರಸ್ತೆಗಳಲ್ಲಿ ಹಲವಾರು ಕಡೆ ಅಪಾಯಕಾರಿ ತಗ್ಗುಗುಂಡಿಗಳು ಬಿದ್ದಿದ್ದು ಅವುಗಳ ದುರಸ್ತಿಗೆ ಅನೇಕ ಸಲ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿಲ್ಲಧನರಾಜ ರಾಜೋಳೆ ಸಾಮಾಜಿಕ ಕಾರ್ಯಕರ್ತ
ನಗರಸಭೆಯಿಂದ ಶೀಘ್ರ ದುರಸ್ತಿ
ನಾರಾಯಣಪುರ ಕ್ರಾಸ್ ದಿಂದ ಶಿವಪುರಕ್ಕೆ ಹೋಗುವ ನಾಗಣ್ಣ ಕಟ್ಟೆವರೆಗಿರುವ ರಸ್ತೆ ಮತ್ತು ತ್ರಿಪುರಾಂತದಿಂದ ಡಾ.ಅಂಬೇಡ್ಕರ್ ವೃತ್ತ ಅಲ್ಲಿಂದ ಉತ್ತರಕ್ಕೆ ಕೋಟೆವರೆಗೆ ಮತ್ತು ಪೂರ್ವಕ್ಕೆ ಮುಖ್ಯ ಬಸ್ ನಿಲ್ದಾಣದವರೆಗೆ ಇರುವ ರಸ್ತೆ ನಗರಸಭೆ ವ್ಯಾಪ್ತಿಗಿದೆ. ಈ ರಸ್ತೆಗಳಲ್ಲಿನ ತಗ್ಗುಗುಂಡಿಗಳನ್ನು ಮುಚ್ಚುವುದಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಆಯುಕ್ತ ರಾಜೀವ ಬಣಕಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.