ಬಸವಕಲ್ಯಾಣ: ಏಳು ಪ್ರಮುಖ ರಸ್ತೆಗಳು ನಗರ ಪ್ರವೇಶಿಸುವ ಸ್ಥಳದಲ್ಲಿ ಕಸದ ರಾಶಿ ಬಿದ್ದಿದೆ. ಚರಂಡಿ ನೀರು ಸಂಗ್ರಹಗೊಂಡು ಕೊಳಚೆ ನಿರ್ಮಾಣವಾಗಿ ದುರ್ನಾತ ಬೀರುತ್ತಿದೆ.
ಅಂಗಳ ನೋಡಿ ಮನೆ ಹೇಗಿರಬಹುದು ಎಂದು ಊಹಿಸಬಹುದು ಎಂಬ ಮಾತಿದೆ. ಹೀಗೆ ರಸ್ತೆಗಳಲ್ಲಿ ಪ್ರಥಮವಾಗಿ ಅಸ್ವಚ್ಛತೆಯ ಸ್ವಾಗತ ಆಗುವುದೆಂದರೆ ಓಣಿಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎನ್ನಬಹುದು. ನಗರ ಭರದಿಂದ ಬೆಳೆಯುತ್ತಿದೆ. ಆದರೂ ಕೆಲ ಅನಾನುಕೂಲತೆಗಳ ಕಾರಣ ಸ್ವಚ್ಛತಾ ಕಾರ್ಯ ಮೊದಲಿನಂತೆಯೇ ಆಮೆ ಗತಿಯಲ್ಲಿ ನಡೆಯುತ್ತಿದೆ. ಕಾರಣ ನಿವಾಸಿಗಳು ಸಂಕಟಪಡುವಂತಾಗಿದೆ.
ಸಸ್ತಾಪುರ ಬಂಗ್ಲಾದಿಂದ ತ್ರಿಪುರಾಂತ ಕೆರೆ ದಂಡೆಯಿಂದ ಊರೊಳಗೆ ಬರುವ ರಸ್ತೆಯ ಸೇತುವೆಯ ಮೇಲೆಯೇ ಕಸ ಬಿದ್ದಿರುವುದನ್ನು ಕಾಣಬಹುದು. ಎತ್ತರದ ಸೇತುವೆಯ ಬಲ ಭಾಗದ ಕಂದಕದಲ್ಲಿನ ಮುಳ್ಳುಕಂಟೆಯಲ್ಲಿಯೂ ಕಸ ತುಂಬಿಕೊಂಡಿದೆ. ಓಣಿ ನಿವಾಸಿಗಳು ಕಸ ಇಲ್ಲಿಗೆ ತಂದು ಬೀಸಾಕುತ್ತಾರೋ ಅಥವಾ ನಗರಸಭೆ ಕಾರ್ಮಿಕರೇ ಇಲ್ಲಿ ಕಸ ಸಂಗ್ರಹಿಸುತ್ತಾರೋ ಗೊತ್ತಾಗದಂತಾಗಿದೆ.
ಮಹಾತ್ಮ ಗಾಂಧಿ ಚೌಕ್‌ನಿಂದ ಖಾನಾಪುರಕ್ಕೆ ಹೋಗುವಾಗ ಅಲ್ಲಮಪ್ರಭು ಮಠದ ಕ್ರಾಸ್‌ನಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿದೆ. ಇಲ್ಲಿಂದ ಪ್ರತಾಪುರಕ್ಕೆ ಹೋಗುವ ರಸ್ತೆ ಪಕ್ಕದಲ್ಲಿಯೂ ಅರ್ಧ ಕಿ.ಮೀನಷ್ಟು ಅಂತರದಲ್ಲಿ ಅಲ್ಲಲ್ಲಿ ಕಸವಿದೆ.
ನಗರಸಭೆ ಕಚೇರಿಯಿಂದ ಮುಂಡ್ಯಾಪಾಳಿಗೆ ಹೋಗುವ ರಸ್ತೆಯಲ್ಲಿಯೂ ಕಸವಿದೆ. ಕೋಟೆಯ ಹಿಂಭಾಗದಲ್ಲಿಯೇ ಕಸದ ರಾಶಿ ಇದ್ದರೂ ನೋಡುವವರಿಲ್ಲದಂತಾಗಿದೆ.
ಬಸ್ ನಿಲ್ದಾಣದಿಂದ ನಾರಾಯಣಪುರ ಕ್ರಾಸ್‌ಗೆ ಬರುವ ರಸ್ತೆಯಲ್ಲಿ ಅಲ್ಲಲ್ಲಿ ಕಸ ಸಂಗ್ರಹಗೊಂಡಿದೆ. ಡೋಮ ಗಣೇಶ ಮಂದಿರದಿಂದ ಬರುವ ರಸ್ತೆಯಲ್ಲಿ ಭೀಮನಗರ ಹಾಗೂ ದೇಶಪಾಂಡೆ ಗಲ್ಲಿ ರಸ್ತೆಯಲ್ಲಿ, ಗೌರ ಗ್ರಾಮದಿಂದ ಕಿಲ್ಲಾ ಗಲ್ಲಿಗೆ ಬರುವ ರಸ್ತೆಯಲ್ಲಿ ಅಸ್ವಚ್ಛತೆ ಇದೆ. ಚರಂಡಿ ನೀರು ಸಹ ಅಲ್ಲಲ್ಲಿ ಸಂಗ್ರಹಗೊಂಡಿದೆ.
‘ಸ್ವಚ್ಛತಾ ಕಾರ್ಯವನ್ನು ಅಭಿಯಾನದಂತೆ ನಡೆಸಿ ಕೆಲ ದಿನಗಳಲ್ಲಿಯೇ ಸಮಸ್ಯೆ ಬಗೆಹರಿಸಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಸಗೀರುದ್ದೀನ್ ಹೇಳಿದ್ದಾರೆ.
ನಾನು ಅಧಿಕಾರ ವಹಿಸಿಕೊಂಡು ತಿಂಗಳಾಗಿದೆ. ಸೌಲಭ್ಯ ನೀಡುವುದಕ್ಕೆ ಆದ್ಯತೆ ನೀಡುತ್ತಿದ್ದೇನೆ. ಶೀಘ್ರದಲ್ಲಿಯೇ ಎಲ್ಲೆಡೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು.ಸಗೀರುದ್ದೀನ್, ಅಧ್ಯಕ್ಷ ನಗರಸಭೆ
ಎಲ್ಲ ಓಣಿಗಳ ಕಸ ಒಮ್ಮೆಲೆ ತೆಗೆಯಲು ಆಗುವುದಿಲ್ಲ. ಆದ್ದರಿಂದ ದಿನಕ್ಕೊಂದು ವಾರ್ಡ್‌ನಲ್ಲಿ ಸಂಪೂರ್ಣ ಸ್ವಚ್ಛತಾ ಕಾರ್ಯ ನಡೆಸಲು ಸಂಬಂಧಿಸಿದವರಿಗೆ ಆಗ್ರಹಿಸಿದ್ದೇನೆ.ರಾಮ ಜಾಧವ, ಸದಸ್ಯ ನಗರಸಭೆ
ಅಸ್ವಚ್ಛತೆಯಿಂದ ತೊಂದರೆ ಅನುಭವಿಸುತ್ತಿರುವ ಬಗ್ಗೆ ಜನರು ನಗರಸಭೆಯ ಗಮನಕ್ಕೆ ತಂದಾಗ ಅಂಥಲ್ಲಿನ ಸಮಸ್ಯೆ ಮೊದಲು ಬಗೆಹರಿಸಬೇಕಾಗಿದೆಕುತ್ಬುದ್ದೀನ್, ಸಮಾಜ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.