ಬೀದರ್: ದರೋಡೆ ಪ್ರಕರಣದ ಆರೋಪಿಗಳ ಗುರುತು ಪತ್ತೆಯಾಗಿದ್ದು, ಇಬ್ಬರನ್ನು ಬಂಧಿಸಲು ಬೀದರ್ ಜಿಲ್ಲಾ ಪೊಲೀಸರ ತಂಡವನ್ನು ಹೈದರಾಬಾದ್‌ಗೆ ಕಳಿಸಲಾಗಿದೆ ಎಂದು ರಾಜ್ಯ ಅಪರಾಧ ವಿಭಾಗದ ಎಡಿಜಿಪಿ ಪಿ. ಹರಿಶೇಖರನ್ ತಿಳಿಸಿದರು.
ನಗರದ ಛತ್ರಪತಿ ಶಿವಾಜಿ ವೃತ್ತದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ಕಚೇರಿ ಎದುರು ಗುರುವಾರ (ಜ.16) ನಡೆದ ದರೋಡೆಯ ಘಟನಾ ಸ್ಥಳವನ್ನು ಶುಕ್ರವಾರ ಪರಿಶೀಲಿಸಿದ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ನಮ್ಮ ಅಪರಾಧ ವಿಭಾಗದ ಪೊಲೀಸರು, ಸೆಲ್ ಫೋನ್ ಅನಾಲಿಸಿಸ್ ತಂಡಗಳು ಒಗ್ಗೂಡಿ ಕೆಲಸ ಮಾಡಿವೆ. ಈ ದರೋಡೆ ಪ್ರಕರಣದಲ್ಲಿ ಭಾಗಿಯಾದವರು ಈ ಹಿಂದೆ ಕೂಡ ಹಲವು ದರೋಡೆ ಪ್ರಕರಣಗಳಲ್ಲಿ ಶಾಮಿಲಾಗಿರುವ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದರು.
ಘಟನೆಗೆ ಸಂಬಂಧಿಸಿದಂತೆ ನಮಗೆ ಮಹಾರಾಷ್ಟ್ರ ಹಾಗೂ ತೆಲಂಗಾಣದ ಪೊಲೀಸರು ಉತ್ತಮ ಸಹಕಾರ ಕೊಟ್ಟಿದ್ದಾರೆ. ನಾವು ಒಟ್ಟು ಎಂಟು ತಂಡಗಳನ್ನು ರಚಿಸಿದ್ದೆವು. ಬೀದರ್, ಕಲಬುರಗಿ ಹಾಗೂ ಹೈದರಾಬಾದ್‌ಗೆ ಕಳಿಸಿದ್ದೆವು. ಇಬ್ಬರು ಆರೋಪಿಗಳು ಹೈದರಾಬಾದ್‌ನಲ್ಲಿ ಟ್ರಾವೆಲ್ಸ್ ಏಜೆನ್ಸಿ ಟಿಕೆಟ್ ಬುಕ್ ಮಾಡಿ ಬೇರೆ ಕಡೆ ಹೋಗಲು ಯೋಜನೆ ರೂಪಿಸಿದ್ದರು. ನಮ್ಮ ಪೊಲೀಸರು ರೋಶನ್ ಟ್ರಾವೆಲ್ಸ್‌ನಲ್ಲಿ ಕುಳಿತಿದ್ದರು. ವಿಷಯ ತಿಳಿದ ನಂತರ ಟ್ರಾವೆಲ್ಸ್ ವ್ಯವಸ್ಥಾಪಕನ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎಂದು ವಿವರಿಸಿದರು.
ಹೈದರಾಬಾದ್ ಪೊಲೀಸರೊಂದಿಗೆ ಸೇರಿಕೊಂಡು ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಎಲ್ಲ ಕೋನಗಳಿಂದ ತನಿಖೆ ನಡೆಯುತ್ತಿದೆ. ಈ ಪ್ರಕರಣದ ಆರೋಪಿಗಳನ್ನು ಬಂಧಿಸುವುದು ನಮ್ಮ ಮೊದಲ ಆದ್ಯತೆ. ಬಳಿಕ ಇತರೆ ವಿಷಯಗಳ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದರು.
ಕಲಬುರಗಿ ವಲಯ ಡಿಐಜಿ ಅಜಯ್ ಹಿಲೋರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.