
ಬೀದರ್: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮನ್ನಾಏಖ್ಖೆಳ್ಳಿಯಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ತುರ್ತಾಗಿ ಕೆಲಸ ಆಗಬೇಕಿದೆ ಎಂದು ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ ಹೇಳಿದರು.
ಬೆಳಗಾವಿ ಅಧಿವೇಶನದಲ್ಲಿ ಮಂಗಳವಾರ ವಿಷಯ ಪ್ರಸ್ತಾಪಿಸಿ ಗಮನ ಸೆಳೆದ ಅವರು,‘ಜನರ ಆಸ್ತಿ ಹಾಗೂ ಜೀವ ರಕ್ಷಣೆಯ ಮಹತ್ವದ ಈ ವಿಷಯವನ್ನು ನಾನು ಕಳೆದ ಎರಡೂವರೆ ವರ್ಷದಿಂದ ಸತತ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ದಕ್ಷಿಣ ಕ್ಷೇತ್ರದಲ್ಲಿ 125ಕ್ಕೂ ಹೆಚ್ಚು ಹಳ್ಳಿ, ತಾಂಡಾಗಳಿವೆ. ಎಲ್ಲಾದರೂ ಅಗ್ನಿ ದುರಂತ ಸಂಭವಿಸಿದರೆ ಅಗ್ನಿ ಶಾಮಕ ವಾಹನ 30-40 ಕಿ.ಮೀ ದೂರದಿಂದ ಬರಬೇಕು. ಅದು ಬರುವಷ್ಟರೊಳಗೆ ಬಹಳ ವಿಳಂಬವಾಗುವ ಕಾರಣ ಅಪಾರ ಹಾನಿಯಾಗುತ್ತಿದೆ. ಜನರ ಜೀವವೂ ಹೋಗುತ್ತಿದೆ’ ಎಂದರು.
‘ಕ್ಷೇತ್ರದಲ್ಲಿ 30 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಬೆಂಗಳೂರು-ಹೈದರಾಬಾದ್-ಪುಣೆ- ಮುಂಬೈ ಸಂಪರ್ಕಿಸುವ ದೇಶದ ಪ್ರಮುಖ ಚತುಷ್ಪಥ ಹೆದ್ದಾರಿಯಿದು. ನಿತ್ಯ ಸಹಸ್ರಾರು ವಾಹನಗಳ ಓಡಾಟವಿದೆ. ಆಗಾಗ್ಗೆ ಇಲ್ಲಿ ಅಪಘಾತಗಳಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಅಪಘಾತದ ಬಳಿಕ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಆಸ್ತಿ ಜೊತೆಗೆ ಜೀವಹಾನಿಯೂ ಆಗುತ್ತಿದೆ. ಇವೆಲ್ಲ ಕಾರಣಗಳಿಂದ ಅಗ್ನಿಶಾಮಕ ಠಾಣೆ ಸ್ಥಾಪಿಸುವ ಅಗತ್ಯವಿದೆ’ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗೃಹಸಚಿವ ಜಿ.ಪರಮೇಶ್ವರ್,‘ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮನ್ನಾಏಖ್ಖೆಳ್ಳಿ ಹತ್ತಿರದ ಮೊಗದಾಳ ಗ್ರಾಮದ ಬಳಿ ಅಗ್ನಿಶಾಮಕ ಠಾಣೆ ನಿರ್ಮಿಸಲು 3 ಎಕರೆ ಜಾಗ ಗುರುತಿಸಲಾಗಿದೆ. ಜಿಲ್ಲಾಡಳಿತ ಗೃಹ ಇಲಾಖೆಗೆ ಜಾಗ ಹಸ್ತಾಂತರಿಸಿದ ಬೆನ್ನಲ್ಲೇ ಅಗತ್ಯ ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು’ ಎಂದು ಆಶ್ವಾಸನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.