
ಔರಾದ್: ‘ಛತ್ರಪತಿ ಶಿವಾಜಿ ಮಹಾರಾಜರು ಕೆಲ ರಾಜರ ದಬ್ಬಾಳಿಕೆ ವಿರುದ್ಧ ಹೋರಾಡಿದರೇ ಹೊರತು ಅವರು ಮುಸ್ಲಿಂ ವಿರೋಧಿಯಾಗಿರಲಿಲ್ಲ’ ಎಂದು ಮುಖಂಡ ಶಿವಾಜಿರಾವ ಪಾಟೀಲ ಮುಂಗನಾಳ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಶಿವಾಜಿ ಮಹಾರಾಜರ ಸೈನ್ಯದಲ್ಲಿ ಮುಸ್ಲಿಂ ಸೈನಿಕರಿದ್ದರು. ರಾಜನಿಗೆ ಕೆಲ ಮಹತ್ವದ ಸಲಹೆ ನೀಡಲು ಮುಸ್ಲಿಂ ಅಧಿಕಾರಿಗಳಿದ್ದರು. ಹೀಗಾಗಿ ಶಿವಾಜಿ ಮಹಾರಾಜರನ್ನು ಸರ್ವಧರ್ಮೀಯ ನಾಯಕ ಎಂದು ಹೇಳಬೇಕಾಗುತ್ತದೆ’ ಎಂದು ತಿಳಿಸಿದರು.
ಉಪನ್ಯಾಸ ನೀಡಿದ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ‘ಛತ್ರಪತಿ ಶಿವಾಜಿ ಮಹಾರಾಜರಲ್ಲಿ ದೇಶಪ್ರೇಮದ ಹುಟ್ಟು ಗುಣ ಇತ್ತು. ಅವರೊಬ್ಬರು ಧೈರ್ಯಶಾಲಿ ನಾಯಕ. ಇಂದಿನ ಯುವಕರಿಗೆ ಅವರು ಪ್ರೇರಣೆಯಾಗಬೇಕು’ ಎಂದರು.
ತಹಶೀಲ್ದಾರ್ ಮಹೇಶ ಪಾಟೀಲ ಕಾರ್ಯಕ್ರಮದಲ್ಲಿ ಇರುವ ವಿದ್ಯಾರ್ಥಿಗಳಿಗೆ ಶಿವಾಜಿ ಕುರಿತು ಕೆಲ ಪ್ರಶ್ನೆಗಳು ಕೇಳಿ ಶಿವಾಜಿ ಜೀವನ ಚರಿತ್ರೆ ಓದಿ ತಿಳಿದುಕೊಳ್ಳಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಇಒ ಕಿರಣ ಪಾಟೀಲ, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಮಾತನಾಡಿದರು. ಧೊಂಡಿಬಾ ನರೋಟೆ, ಮುಖಂಡ ಸುಧಾಕರ್ ಕೊಳ್ಳೂರ್, ಸೂರ್ಯಕಾಂತ ಸಿಂಗೆ, ಅಂಬಿಕಾ ಕೇರಬಾ ಪವಾರ್, ಕಲ್ಲಪ್ಪ ದೇಶಮುಖ, ಮಾಣಿಕ ನೇಳಗೆ ಮತ್ತಿತರರು ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.