ADVERTISEMENT

ಶ್ರಾವಣ ಸಂಭ್ರಮವಲ್ಲ, ಸತ್ಯ ಸಾಧನೆ: ಗಂಗಾಂಬಿಕಾ ಅಕ್ಕ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 3:16 IST
Last Updated 27 ಜುಲೈ 2025, 3:16 IST
ಕಾರ್ಯಕ್ರಮದಲ್ಲಿ ಹಾರಕೂಡ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಚೆನ್ನವೀರ ಶಿವಾಚಾರ್ಯರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಹಾರಕೂಡ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಚೆನ್ನವೀರ ಶಿವಾಚಾರ್ಯರನ್ನು ಸನ್ಮಾನಿಸಲಾಯಿತು   

ಬೀದರ್‌: ‘ಭಾರತೀಯರಿಗೆ ಶ್ರಾವಣ ಎಂದರೆ ಕೇವಲ ಸಂಭ್ರಮ ಅಲ್ಲ. ಅದು ಸತ್ಯ ಸಾಧನೆಯ ನಿಜ ಸಂಭ್ರಮ. ಶ್ರಾವಣ ಸತ್ಯ ಸಾಧನೆಗೆ ದಾರಿ ತೋರುವ ಶರಣರೊಡನೆ ಆಡಿ-ಪಾಡಿ ನಲಿದಾಡುವ ನಿಜ ಸಂಭ್ರಮ’ ಎಂದು ಬಸವ ಸೇವಾ ಪ್ರತಿಷ್ಠಾನದ ಗಂಗಾಂಬಿಕಾ ಅಕ್ಕ ತಿಳಿಸಿದರು.

ಶ್ರಾವಣ ಮಾಸದ ಅಂಗವಾಗಿ ನಗರದ ಶರಣ ಉದ್ಯಾನದಲ್ಲಿ ಶುಕ್ರವಾರ ಸಂಜೆ ನಡೆದ‘ಪ್ರಭುಲಿಂಗ ಲೀಲೆ’ ಪ್ರವಚನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪೂಜೆ, ಪ್ರಾರ್ಥನೆ, ಅನುಭಾವ ಗೋಷ್ಠಿಗಳು ನಡೆಯುವುದರಿಂದ ಎಲ್ಲೆಡೆ ಧನಾತ್ಮಕ ಅಲೆಗಳು ಪಸರಿಸುವ ಮೂಲಕ ಜನರಲ್ಲಿ ಬದುಕು ಎದುರಿಸುವ ಆತ್ಮವಿಶ್ವಾಸ ಮೂಡುತ್ತದೆ. ಮನುಷ್ಯ ಭಯಮುಕ್ತನಾಗಬೇಕಾದರೆ ಆತ್ಮ ವಿದ್ಯೆಯ ಕಡೆ ಹೋಗುವುದು ಅತಿ ಅವಶ್ಯಕ. ಆತ್ಮ ವಿದ್ಯೆಯೇ ಸರ್ವ ಶ್ರೇಷ್ಠ ವಿದ್ಯೆ ಎಂದು ಹೇಳಿದರು.

ADVERTISEMENT

ಹಾರಕೂಡ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಚೆನ್ನವೀರ ಶಿವಾಚಾರ್ಯರು ಉದ್ಘಾಟಿಸಿ, ಒಂದು ತಿಂಗಳ ವರೆಗೆ ನಿರಂತರವಾಗಿ ನಡೆಯುವ ‘ಪ್ರಭುಲಿಂಗ ಲೀಲೆ’ ಪ್ರವಚನವನ್ನು ಭಕ್ತರು ಆಲಿಸಿ ಪುನೀತರಾಗಬೇಕು ಎಂದರು.

ಸರ್ಕಾರಿ, ಅರೆ ಸರ್ಕಾರಿ ನೌಕರರ ಪತ್ತಿನ ಸೌಹಾರ್ಧ ಸಹಕಾರ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ಬಸವಾದಿ ಶರಣರು ವಚನಗಳ ಮೂಲಕ ಸಮಾಜದಲ್ಲಿನ ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದರು. ವಚನ ಸಾಹಿತ್ಯವು ಧಾರ್ಮಿಕ, ಸಾಮಾಜಿಕ‌ ಮತ್ತು ದಾರ್ಶನಿಕ ಚಿಂತನೆಗಳನ್ನು ಒಳಗೊಂಡಿದೆ. ಶರಣರ ದಾರ್ಶನಿಕರ ಸಂತರ ನುಡಿಗಳನ್ನು ಕೇಳಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಹಸನಾಗುತ್ತದೆ ಎಂದು ಹೇಳಿದರು.

ಬ್ರಹ್ಮಕುಮಾರೀಸ್‌ ಈಶ್ವರೀಯ ವಿದ್ಯಾಲಯದ ರಾಜಯೋಗಿಣಿ ಬಿ.ಕೆ. ಗುರುದೇವಿ ಅಕ್ಕ ಮಾತನಾಡಿದರು. ಪ್ರತಿಷ್ಠಾನದ ಡಾ. ವಿಜಯಶ್ರೀ ಬಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಚಿತ್ರ ಕಲಾವಿದ ಸಿ. ಬಿ. ಸೋಮಶೆಟ್ಟಿ ಷಟಸ್ಥಲ ಧ್ವಜರೋಹಣಗೈದರು. ಬಿ.ಕೆ.ಹಿರೇಮಠ ಇದ್ದರು. ಶಿವಕುಮಾರ ಪಾಂಚಾಳ ಮತ್ತು ಸಂಗಡಿಗರು ವಚನ ಗಾಯನ ನಡೆಸಿಕೊಟ್ಟರು. ಪ್ರವಚನ ಸೇವಾ ಸಮಿತಿಯ ಅಧ್ಯಕ್ಷೆ ಜ್ಞಾನದೇವಿ ಬಬಛೆಡೆ ಸ್ವಾಗತಿಸಿದರೆ, ಸುಮಾ ಭೂಶೆಟ್ಟಿ ನಿರೂಪಿಸಿದರು. ಗುರುನಗರ ನೀಲಮ್ಮನ ಬಳಗದ ಶರಣೆಯರು ಗುರುಪೂಜೆ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.