ADVERTISEMENT

ಜನವಾಡ: ಸರಳ ಕಲಿಕೆಗೆ ವರವಾದ ‘ಸ್ಮಾರ್ಟ್ ಕ್ಲಾಸ್’

ಘೋಡಂಪಳ್ಳಿ ವಸತಿ ಶಾಲೆ ಮಕ್ಕಳಿಗೆ ಡಿಜಿಟಲ್ ಶಿಕ್ಷಣದ ಲಾಭ

ನಾಗೇಶ ಪ್ರಭಾ
Published 2 ಸೆಪ್ಟೆಂಬರ್ 2025, 4:38 IST
Last Updated 2 ಸೆಪ್ಟೆಂಬರ್ 2025, 4:38 IST
ಬೀದರ್ ತಾಲ್ಲೂಕಿನ ಘೋಡಂಪಳ್ಳಿ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಸ್ಮಾರ್ಟ್ ಕ್ಲಾಸ್‍ನಲ್ಲಿ ಶಿಕ್ಷಕರೊಬ್ಬರು ಸ್ಮಾರ್ಟ್ ಪೆನಲ್ ಬೋರ್ಡ್ ಬಳಸಿ ವಿದ್ಯಾರ್ಥಿಗಳಿಗೆ ಪಾಠ ಬೋಧಿಸುತ್ತಿರುವುದು 
ಬೀದರ್ ತಾಲ್ಲೂಕಿನ ಘೋಡಂಪಳ್ಳಿ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಸ್ಮಾರ್ಟ್ ಕ್ಲಾಸ್‍ನಲ್ಲಿ ಶಿಕ್ಷಕರೊಬ್ಬರು ಸ್ಮಾರ್ಟ್ ಪೆನಲ್ ಬೋರ್ಡ್ ಬಳಸಿ ವಿದ್ಯಾರ್ಥಿಗಳಿಗೆ ಪಾಠ ಬೋಧಿಸುತ್ತಿರುವುದು    
ಶಾಲೆಯಲ್ಲಿವೆ ಒಂಬತ್ತು ಸ್ಮಾರ್ಟ್ ಕ್ಲಾಸ್‍ಗಳು | 85 ಇಂಚ್ ಸ್ಮಾರ್ಟ್ ಪೆನಲ್ ಬೋರ್ಡ್ ಅಳವಡಿಕೆ | ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳ ಅಧ್ಯಯನ

ಜನವಾಡ: ಬೀದರ್ ತಾಲ್ಲೂಕಿನ ಘೋಡಂಪಳ್ಳಿ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್‍ಗಳು ಸರಳ ಕಲಿಕೆಗೆ ವರವಾಗಿವೆ.

ಜಿಲ್ಲೆಯ ವಸತಿ ಶಾಲೆಗಳ ಪೈಕಿ ಈ ಶಾಲೆಯಲ್ಲೇ ಅತಿ ಹೆಚ್ಚು ಸ್ಮಾರ್ಟ್ ಕ್ಲಾಸ್‍ಗಳು ಇರುವ ಕಾರಣ ಎಲ್ಲ ತರಗತಿಗಳ ಪಾಠ-ಪ್ರವಚನಗಳು ಅವುಗಳಲ್ಲೇ ನಡೆಯುತ್ತಿವೆ.

ಇಲ್ಲಿ ಆರನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ಒಟ್ಟು 550 ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣದ ಲಾಭ ದೊರಕುತ್ತಿದೆ.

ADVERTISEMENT

ಸ್ಮಾರ್ಟ್ ಕ್ಲಾಸ್‍ಗಳಲ್ಲಿ ಇರುವ ಸ್ಮಾರ್ಟ್ ಪೆನಲ್ ಬೋರ್ಡ್‍ಗಳು ವಿದ್ಯಾರ್ಥಿಗಳ ಸಂಪೂರ್ಣ ಗಮನ ಕೇಂದ್ರೀಕರಿಸುತ್ತಿವೆ. ಶಿಕ್ಷಕರು ಚಿತ್ರ ಹಾಗೂ ವಿಡಿಯೊ ತೋರಿಸಿ ಪಾಠ ಬೋಧಿಸುವುದರಿಂದ ವಿದ್ಯಾರ್ಥಿಗಳಿಗೆ ವಿಷಯ ಬಹು ಬೇಗ ಮನನ ಆಗುತ್ತಿದೆ. ಸ್ಮಾರ್ಟ್ ಕ್ಲಾಸ್‍ಗಳು ಗುಣಮಟ್ಟದ ಶಿಕ್ಷಣ ಹಾಗೂ ಫಲಿತಾಂಶ ಹೆಚ್ಚಳಕ್ಕೆ ನೆರವಾಗುತ್ತಿವೆ ಎಂದು ಹೇಳುತ್ತಾರೆ ಶಾಲೆಯ ಪ್ರಾಚಾರ್ಯ ಶರಣಪ್ಪ ಬಿರಾದಾರ.

ಪಿಯುಸಿ ವಿದ್ಯಾರ್ಥಿಗಳು ಸ್ಮಾರ್ಟ್ ಕ್ಲಾಸ್‍ಗಳಲ್ಲೇ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ನಡೆಸಲಾಗುವ ನೀಟ್, ಜೆಇಇ ಕೆ-ಸಿಇಟಿ ಪೂರ್ವ ಸಿದ್ಧತೆ ಆನ್‍ಲೈನ್ ತರಗತಿಗಳಿಗೂ ಹಾಜರಾಗಬಹುದಾಗಿದೆ ಎಂದು ತಿಳಿಸುತ್ತಾರೆ.

ಶಾಲೆಯಲ್ಲಿ ಎರಡು ವರ್ಷಗಳಿಂದ ಸ್ಮಾರ್ಟ್ ಕ್ಲಾಸ್ ನಡೆಸಲಾಗುತ್ತಿದೆ. ಇದರ ಫಲವಾಗಿ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆ ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರುತ್ತಿದ್ದಾರೆ ಎಂದು ಹೇಳುತ್ತಾರೆ.

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಾಲೇಜು ಜಿಲ್ಲೆಯ ವಸತಿ ಕಾಲೇಜುಗಳಲ್ಲೇ ಮೊದಲ ಸ್ಥಾನದಲ್ಲಿದ್ದರೆ, ಶಾಲೆ ಎಸ್‍ಎಸ್‍ಎಲ್‍ಸಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ.

2024-25ನೇ ಸಾಲಿನಲ್ಲಿ ಕಾಲೇಜಿನ 9 ವಿದ್ಯಾರ್ಥಿಗಳು ಜೆಇಇ ಮೇನ್ಸ್‌ಗೆ ಅರ್ಹತೆ ಗಳಿಸಿದ್ದಾರೆ ಎಂದು ತಿಳಿಸುತ್ತಾರೆ.

ವಿದ್ಯುತ್ ಕೈಕೊಟ್ಟಾಗ 6,7,8,9 ಹಾಗೂ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಳೆಯ ಪದ್ಧತಿ ಮೂಲಕ ಗ್ರೀನ್ ಬೋರ್ಡ್ ಮೇಲೆ ಪಾಠ ಬೋಧಿಸುವುದು ಅನಿವಾರ್ಯವಾಗುತ್ತದೆ. ಆದರೆ, ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇನ್ವರ್ಟರ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳುತ್ತಾರೆ.

ಸ್ಮಾರ್ಟ್ ಕ್ಲಾಸ್‍ಗಳಿಂದ ಪಠ್ಯ ಹಾಗೂ ಇತರ ವಿಷಯ ಸುಲಭವಾಗಿ ಗ್ರಹಿಸಲು ಸಾಧ್ಯವಾಗುತ್ತಿದೆ ಎಂದು ಹೇಳುತ್ತಾರೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕೀರ್ತಿ ರಮೇಶ.
ಶಾಲೆಯಲ್ಲಿ ಬೀದರ್ ಮಾತ್ರವಲ್ಲದೆ, ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳ ವಿದ್ಯಾರ್ಥಿಗಳೂ ಅಧ್ಯಯನ ಮಾಡುತ್ತಿದ್ದಾರೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಕೆಕೆಆರ್‌ಡಿಬಿ ಉಳಿಕೆ ಹಣ ದಾನಿಗಳ ನೆರವಿನಿಂದ ಸ್ಮಾರ್ಟ್ ಕ್ಲಾಸ್ ಸಿದ್ಧಪಡಿಸಿ ತರಗತಿ ನಡೆಸಲಾಗುತ್ತಿದೆ
ಶರಣಪ್ಪ ಬಿರಾದಾರ ಪ್ರಾಚಾರ್ಯ
ಸ್ಮಾರ್ಟ್ ಕ್ಲಾಸ್‍ಗಳಲ್ಲಿ ಶಿಕ್ಷಕರು ಪಠ್ಯಕ್ಕೆ ಸಂಬಂಧಿಸಿದ ಎಲ್ಲ ವಿಷಯ ಉದಾಹರಣೆ ಸಹಿತ ತಿಳಿಸುವುದರಿಂದ ಯಾವುದೇ ಗೊಂದಲ ಇರುವುದಿಲ್ಲ
ಸುಮೀತ್ ಚನ್ನಬಸವ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.