ADVERTISEMENT

ಭಾಲ್ಕಿ | ಮಣ್ಣು ಮಾದರಿ: 32 ಸಾವಿರ ಪರೀಕ್ಷೆಯ ಗುರಿ

ಭೂಮಿಯ ಫಲವತ್ತತೆ, ಹೆಚ್ಚಿನ ಇಳುವರಿಗೆ ನೆರವಾಗುವ ಮಣ್ಣು ಆರೋಗ್ಯ ಕೇಂದ್ರ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 5:25 IST
Last Updated 5 ಜನವರಿ 2026, 5:25 IST
ಬಾಬುರಾವ್ ಜೋಳದಾಪಕೆ
ಬಾಬುರಾವ್ ಜೋಳದಾಪಕೆ   

ಭಾಲ್ಕಿ: ಪಟ್ಟಣದಲ್ಲಿ ಕಾರ್ಯನಿರ್ವಹಿಸುವ ಮಣ್ಣು ಆರೋಗ್ಯ ಕೇಂದ್ರವು ಅನ್ನದಾತರಿಗೆ ಭೂಮಿಯ ಫಲವತ್ತತೆ ಹೆಚ್ಚಿಸಿಕೊಳ್ಳಲು, ಕೃಷಿ ಭೂಮಿಯಲ್ಲಿನ ಮಣ್ಣಿಗೆ ತಕ್ಕಂತಹ ಬೆಳೆಗಳನ್ನು ಬೆಳೆದು ಉತ್ತಮ ಇಳುವರಿ ಪಡೆಯಲು ಸಹಾಯಕವಾಗಿದೆ. ಕೃಷಿ ಇಲಾಖೆಯಿಂದ ಕಾರ್ಯನಿರ್ವಹಿಸುವ ಮಣ್ಣು ಆರೋಗ್ಯ ಕೇಂದ್ರಕ್ಕೆ ಈ ವರ್ಷ ಸುಮಾರು 32 ಸಾವಿರ ಮಣ್ಣು ಮಾದರಿ ಪರೀಕ್ಷೆ ನಡೆಸಿ, ವಿಶ್ಲೇಷಣೆ ಮಾಡುವ ಗುರಿ ನಿಗದಿಪಡಿಸಲಾಗಿದೆ.

ಮಣ್ಣು ಆರೋಗ್ಯ ಕೇಂದ್ರ ರೈತರ ಹೊಲದಲ್ಲಿನ ಮಣ್ಣಿನ ಗುಣಮಟ್ಟದ ವಿಶ್ಲೇಷಣೆ ಮಾಡಿ, ಯಾವ ಬೆಳೆಗೆ ಯಾವ ಪೋಷಕಾಂಶಗಳು ಬೇಕು ಎಂದು ತಿಳಿಸುತ್ತವೆ. ಇದರಿಂದ ರೈತರು ಅತಿಯಾದ ಗೊಬ್ಬರ ಬಳಕೆಯನ್ನು ತಪ್ಪಿಸಿ, ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು. ಬೆಳೆಗಳ ಉತ್ತಮ ರಕ್ಷಣೆಯ ಮೂಲಕ ಹೆಚ್ಚಿನ ಇಳುವರಿ ಪಡೆಯಬಹುದು ಹಾಗೂ ಖರ್ಚು ಕಡಿತಗೊಳಿಸಬಹುದು.

‘ನಮಗೆ ಈ ವರ್ಷ ಇಲಾಖೆಯಿಂದ 32 ಸಾವಿರ ಮಣ್ಣು ಮಾದರಿ ಪರೀಕ್ಷೆಯ ಗುರಿ ನೀಡಲಾಗಿದೆ. ಈಗಾಗಲೇ ಇಲ್ಲಿಯವರೆಗೆ 22 ಸಾವಿರ ಮಣ್ಣು ಮಾದರಿ ಪರೀಕ್ಷೆಗಳ ವಿಶ್ಲೇಷಣೆ ಮಾಡಲಾಗಿದೆ. 2026ರ ಮಾರ್ಚ್‌ವರೆಗೆ ಇನ್ನು 10 ಸಾವಿರ ಮಣ್ಣಿನ ಮಾದರಿ ಪರೀಕ್ಷೆ ಮಾಡಿ ವಿಶ್ಲೇಷಣೆ ಮಾಡಲಾಗುವುದು. ತಾಲ್ಲೂಕಿನಲ್ಲಿ ಸಮಸ್ಯಾತ್ಮಕ ನೀರು ಇಲ್ಲ. ಜಿಲ್ಲೆಯಲ್ಲಿಯೂ ಸಮಸ್ಯಾತ್ಮಕ ಮಣ್ಣು ಇಲ್ಲ’ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಪಿ.ಎಂ. ಮಲ್ಲಿಕಾರ್ಜುನ.

ADVERTISEMENT

ನೀರಾವರಿ, ತೋಟಗಾರಿಕೆ ಬೆಳೆ ಬೆಳೆಯುವ ರೈತರು ಸ್ವಇಚ್ಛೆಯಿಂದ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಮಳೆಯಾಶ್ರಿತ ಬೆಳೆ ಬೆಳೆಯುವ ಅನ್ನದಾತರು ತಿಂಗಳಿಗೆ 8 ರಿಂದ 10 ಸೇರಿದಂತೆ ವರ್ಷಕ್ಕೆ ಸುಮಾರು 100ರಿಂದ 150 ರೈತರು ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಲು ಕೇಂದ್ರಕ್ಕೆ ಬರುತ್ತಾರೆ ಎನ್ನುತ್ತಾರೆ ಅಧಿಕಾರಿಗಳು.

‘ಮಣ್ಣು ಆರೋಗ್ಯ ಕೇಂದ್ರ ಅನ್ನದಾತರಿಗೆ ಕೃಷಿಯನ್ನು ಲಾಭದಾಯಕ ಆಗಿಸಿಕೊಳ್ಳಲು, ಉತ್ತಮ ಇಳುವರಿಯ ಮೂಲಕ ಕೃಷಿಯಲ್ಲಿನ ಖರ್ಚನ್ನು ತಗ್ಗಿಸಲು ಮತ್ತು ಆರ್ಥಿಕ ಸದೃಢತೆಗೆ ತುಂಬಾ ಪೂರಕವಾಗಿದೆ’ ಎಂದು ಪ್ರಗತಿಪರ ರೈತ ಸಂಜುಕುಮಾರ ಪ್ರಭಾ ಹೇಳುತ್ತಾರೆ.

‘ನಮ್ಮ ಪ್ರದೇಶದಲ್ಲಿ ಸಾಮಾನ್ಯವಾಗಿ ಕಬ್ಬು, ತೊಗರಿ, ಜೋಳ, ಸೋಯಾಬಿನ್ ಸೇರಿ ವಿವಿಧ ತೋಟಗಾರಿಕೆ ಸೇರಿ ಇತರ ಬೆಳೆಗಳನ್ನು ಬೆಳೆಯಲಾಗುತ್ತದೆ. ಆದರೆ, ರೈತರಿಗೆ ಮಣ್ಣು ಹಾಗೂ ನೀರಿನ ಗುಣಮಟ್ಟದ ಕುರಿತು ವೈಜ್ಞಾನಿಕ ಮಾಹಿತಿಯ ಕೊರತೆಯಿಂದ ಭೂಮಿಗೆ ಅಂದಾಜಿನ ಮೇಲೆ ಗೊಬ್ಬರ ಹಾಗೂ ಕೀಟನಾಶಕ ಬಳಕೆ ಮಾಡಿ ಉತ್ಪಾದನಾ ವೆಚ್ಚ ಹೆಚ್ಚಳ ಮಾಡಿಕೊಳ್ಳುತ್ತಾರೆ. ಇದರಿಂದ ಭೂಮಿಯ ಫಲವತ್ತತೆಯೂ ಕುಸಿಯುತ್ತಿದೆ ರೈತರೂ ಸಹ ನಷ್ಟಕ್ಕೆ ಹಾಗೂ ಸಾಲದ ಸುಳಿಗೆ ಸಿಲುಕುತ್ತಾರೆ’ ಎನ್ನುತ್ತಾರೆ ರೈತರು.

‘ನಮ್ಮ ತಾಲ್ಲೂಕು ಕೇಂದ್ರದಲ್ಲಿಯೇ ಮಣ್ಣು ಆರೋಗ್ಯ ಕೇಂದ್ರ ಇದ್ದರೂ ಸಹ ಹೆಚ್ಚಿನ ರೈತರು ತಮ್ಮ ಹೊಲದಲ್ಲಿನ ಭೂಮಿಯ ಫಲವತ್ತತೆ ತಿಳಿದುಕೊಳ್ಳಲು ಮಣ್ಣನ್ನು ಪರೀಕ್ಷೆ ಮಾಡಿಸದೆ ಇರುವುದು ಅವರಲ್ಲಿನ ಜಾಗೃತಿಯ ಕೊರತೆ ಎತ್ತಿ ತೋರಿಸುತ್ತದೆ’ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬಾಬುರಾವ ಜೊಳದಾಪಕೆ ಅಸಮಾಧಾನ ವ್ಯಕ್ತಪಡಿಸಿದರು.

ಮಣ್ಣಿನ ಆರೋಗ್ಯ ಪರೀಕ್ಷೆಯಲ್ಲಿ ನಿರತರಾಗಿರುವ ಸಿಬ್ಬಂದಿ
ಭಾಲ್ಕಿಯ ಕೃಷಿ ಇಲಾಖೆಯ ಆವರಣದಲ್ಲಿರುವ ಮಣ್ಣು ಆರೋಗ್ಯ ಕೇಂದ್ರ
ಪಿ.ಎಂ. ಮಲ್ಲಿಕಾರ್ಜುನ
ಭಾಲ್ಕಿಯ ಕೃಷಿ ಇಲಾಖೆಯ ಆವರಣದಲ್ಲಿರುವ ಮಣ್ಣು ಆರೋಗ್ಯ ಕೇಂದ್ರ
ಕೃಷಿ ಇಲಾಖೆಯಿಂದ ಕಾರ್ಯನಿರ್ವಹಿಸುವ ಮಣ್ಣು ಆರೋಗ್ಯ ಕೇಂದ್ರ | ಮಣ್ಣಿನ ಆರೋಗ್ಯದ ಮೇಲೆ ಬೆಳೆಗಳ ಅವಲಂಬನೆ | ಅನ್ನದಾತರಿಗೆ ಮಣ್ಣು ಆರೋಗ್ಯ ಚೀಟಿ ವಿತರಣೆ
ಮಣ್ಣು ಆರೋಗ್ಯ ಕೇಂದ್ರದ ಸಂಪೂರ್ಣ ಸದ್ಬಳಕೆಗೆ ಅದರ ಕಾರ್ಯನಿರ್ವಹಣೆ ಪ್ರಯೋಜನಗಳ ಕುರಿತು ಅಧಿಕಾರಿಗಳು ರೈತರಲ್ಲಿ ಹೆಚ್ಚೆಚ್ಚು ಜಾಗೃತಿ ಮೂಡಿಸಬೇಕು
ಬಾಬುರಾವ್ ಜೋಳದಾಪಕೆ ರೈತ ಸಂಘದ ತಾಲ್ಲೂಕು ಅಧ್ಯಕ್ಷ
ನೀರಾವರಿ ಸೌಲಭ್ಯ ಇರುವ ರೈತರು ವರ್ಷಕೊಮ್ಮೆಯಾದರೂ ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ. ತಾಲ್ಲೂಕಿನಲ್ಲಿ ಕೃಷಿಗೆ ಯೋಗ್ಯವಾದ ನೀರು ಇದೆ
ಪಿ.ಎಂ. ಮಲ್ಲಿಕಾರ್ಜುನ ಸಹಾಯಕ ಕೃಷಿ ನಿರ್ದೇಶಕ ಭಾಲ್ಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.