ADVERTISEMENT

ಬೀದರ್‌ ಜಿಲ್ಲೆಗೆ ವಿಶೇಷ ಪ್ಯಾಕೇಜ್‌: ಗಣರಾಜ್ಯೋತ್ಸವದಲ್ಲಿ ಬಂಡೆಪ್ಪ ಕಾಶೆಂಪೂರ

​ಪ್ರಜಾವಾಣಿ ವಾರ್ತೆ
Published 26 ಜನವರಿ 2019, 12:41 IST
Last Updated 26 ಜನವರಿ 2019, 12:41 IST
ಬೀದರ್‌ನ ಪೊಲೀಸ್‌ ಕವಾಯತ್‌ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಪರೇಡ್ ವೀಕ್ಷಣೆ ಮಾಡಿದರು
ಬೀದರ್‌ನ ಪೊಲೀಸ್‌ ಕವಾಯತ್‌ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಪರೇಡ್ ವೀಕ್ಷಣೆ ಮಾಡಿದರು   

ಬೀದರ್: ‘ನೀರಾವರಿ ಸೌಲಭ್ಯ ಒದಗಿಸುವ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದಿಸೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಜೆಟ್‌ನಲ್ಲಿ ಬೀದರ್‌ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಪ್ರಕಟಿಸುವ ಭರವಸೆ ನೀಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.

ನಗರದ ಪೊಲೀಸ್‌ ಕವಾಯತ್‌ ಮೈದಾನದಲ್ಲಿ ಶನಿವಾರ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಹಾಗೂ ಮಾಧ್ಯಮ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಸಣ್ಣ ನೀರಾವರಿ ಇಲಾಖೆಯಿಂದ ಪ್ರಸ್ತಾವ ಪಡೆಯಲಾಗಿದೆ. ಗೋದಾವರಿ ನೀರನ್ನು ಸಮರ್ಥವಾಗಿ ಬಳಸಿಕೊಳ್ಳಲು ಬೃಹತ್‌ ನೀರಾವರಿ ಇಲಾಖೆಯ ಅಧಿಕಾರಿಗಳಿಂದಲೂ ಮಾಹಿತಿ ಕೇಳಲಾಗಿದೆ. ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಲಾಗುವುದು. ಫೆ.8ರಂದು ಮಂಡನೆ ಆಗುವ ಬಜೆಟ್‌ನಲ್ಲಿ ಕುಮಾರಸ್ವಾಮಿ ಅವರು ಘೋಷಿಸುವ ವಿಶ್ವಾಸ ಇದೆ’ ಎಂದರು.

ADVERTISEMENT

‘ಮೊದಲು ಬೀದರ್‌ ಜಿಲ್ಲೆಗೆ ಒಂದು ಸಚಿವ ಸ್ಥಾನ ಪಡೆಯುವುದು ಕಷ್ಟವಾಗುತಿತ್ತು. ಆದರೆ ಇದೀಗ ಜಿಲ್ಲೆಯ ಮೂವರು ಸಚಿವರಾಗಿದ್ದು, ಜಿಲ್ಲೆಯ ಭಾಗ್ಯದ ಬಾಗಿಲು ತೆರೆದಿದೆ. ಜಿಲ್ಲೆಗೆ ಎಲ್ಲ ರೀತಿಯ ಅನುಕೂಲ ಆಗಲಿದೆ. ಜಿಲ್ಲಾಧಿಕಾರಿ ಆಡಳಿತ ಕಚೇರಿಗಳ ಸಂಕೀರ್ಣ, ಕನ್ನಡ ಭವನ ಇನ್ನಿತರ ಎಲ್ಲ ಕಾಮಗಾರಿಗಳನ್ನು ಆದಷ್ಟು ಬೇಗ ಆರಂಭಿಸಲಾಗುವುದು’ ಎಂದರು.

‘ಈಗಿರುವ ಸ್ಥಳದಲ್ಲೇ ಜಿಲ್ಲಾಧಿಕಾರಿ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣ ಮಾಡಲಾಗುವುದು. ಇದಕ್ಕೂ ಮೊದಲು ಜಿಲ್ಲೆಯ ಸಚಿವರು ಹಾಗೂ ಶಾಸಕರೊಂದಿಗೆ ಸಮಾಲೋಚನೆ ನಡೆಸಲಾಗುವುದು’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ಕೊಡಬೇಕಿತ್ತು. ಅವರಿಗೆ ಪ್ರಶಸ್ತಿ ಕೈತಪ್ಪಿರುವುದು ಬೇಸರ ತಂದಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಈಗಾಗಲೇ ಮನವಿ ಮಾಡಲಾಗಿದೆ. ನಮ್ಮ ಬೇಡಿಕೆ ಈಗಲೂ ಜೀವಂತ ಇದೆ’ ಎಂದರು.

‘ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ₹ 18.81 ಲಕ್ಷ ವೆಚ್ಚದ ಕಾಮಗಾರಿ ಕೈಗೆತ್ತಿಕೊಳ್ಳುವ ಗುರಿ ಇಟ್ಟುಕೊಳ್ಳಲಾಗಿತ್ತು. ಇದರಲ್ಲಿ ₹ 1 5.67 ಲಕ್ಷ ವೆಚ್ಚದ ಕಾಮಗಾರಿ ಕೈಗೊಂಡು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಲಿಸಲಾಗಿದೆ’ ಎಂದು ತಿಳಿಸಿದರು.

ಲೋಕಸಭೆ ಸದಸ್ಯ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯರಾದ ರಘುನಾಥ ಮಲ್ಕಾಪುರೆ, ವಿಜಯಸಿಂಗ್, ಅರವಿಂದಕುಮಾರ ಅರಳಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ನಗರಸಭೆ ಅಧ್ಯಕ್ಷೆ ಶಾಲಿನಿ ರಾಜು ಚಿಂತಾಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಉಪ ವಿಭಾಗಾಧಿಕಾರಿ ಶಿವಕುಮಾರ ಶೀಲವಂತ ಇದ್ದರು.

ಮಾಧ್ಯಮ ಕ್ಷೇತ್ರ, ಕ್ರೀಡಾ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾ ಸಶಸ್ತ್ರಪಡೆ, ಜಿಲ್ಲಾ ನಾಗರಿಕ ಪೊಲೀಸ್‌, ಮಹಿಳಾ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ, ಎನ್‌ಸಿಸಿ ಕೆಡೆಟ್‌, ಸ್ಕೌಟ್ಸ್‌ ಮತ್ತು ಗೈಡ್ಸ್, ವಿವಿಧ ಶಾಲಾ ಮಕ್ಕಳು ಪಥ ಸಂಚಲನ ನಡೆಸಿದರು.

₹ 19 ಕೋಟಿ ಬಿಡುಗಡೆ

‘ಬೀದರ್‌ ಸಹಕಾರಿ ಸಕ್ಕರೆ ಕಾರ್ಖಾನೆಗೆ ರಾಜ್ಯ ಸರ್ಕಾರ 19 ಕೋಟಿ ಬಿಡುಗಡೆ ಮಾಡಿದೆ. ಕಾರ್ಖಾನೆಯಲ್ಲಿನ ಉಪಕರಣಗಳ ದುರಸ್ತಿಗೆ ಕನಿಷ್ಠ ₹ 3 ಕೋಟಿ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ಕಾರ್ಮಿಕರು ₹ 65 ವೆಚ್ಚದಲ್ಲೇ ದುರಸ್ತಿ ಮಾಡಿ ಕಾರ್ಖಾನೆ ಆರಂಭಿಸಿದ್ದಾರೆ’ ಎಂದು ಸಚಿವ ಬಂಡೆಪ್ಪ ತಿಳಿಸಿದರು.

‘ಕಾರ್ಖಾನೆಯು ಈಗಾಗಲೇ 2300 ಟನ್‌ ಕಬ್ಬು ನುರಿಸಿದೆ. ಇದನ್ನು 3500 ಟನ್‌ಗೆ ಹೆಚ್ಚಿಸಲಾಗುವುದರು. ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಮೊದಲು ಕಂತಾಗಿ ಪ್ರತಿ ಟನ್‌ಗೆ ₹ 1900 ಕೊಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.