ADVERTISEMENT

ಬೀದರ್ | ಶೇ 10ರಷ್ಟು ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಿ: ಸಚಿವ ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 5:13 IST
Last Updated 9 ಸೆಪ್ಟೆಂಬರ್ 2025, 5:13 IST
   

ಭಾಲ್ಕಿ: ‘ಜಿಲ್ಲೆಯ ವಿದ್ಯಾರ್ಥಿಗಳು ಬಹಳಷ್ಟು ಪ್ರತಿಭಾವಂತರು. ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡುವುದರ ಮೂಲಕ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಳೆದ ಬಾರಿಗಿಂತ ಶೇ 10ರಷ್ಟು ಫಲಿತಾಂಶ ಹೆಚ್ಚಳಕ್ಕೆ ಪ್ರಾಮಾಣಿಕವಾಗಿ ಶ್ರಮಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಲಹೆ ನೀಡಿದರು.

ಪಟ್ಟಣದ ಪ್ರಯಾಗ ಕಲ್ಯಾಣಮಂಟಪದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಬೀದರ್ ಜಿಲ್ಲಾ ಹಾಗೂ ಭಾಲ್ಕಿ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಕ್ಷಣದಿಂದಲೇ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿದೆ. ಉನ್ನತ ಶಿಕ್ಷಣ ಸರಳವಾಗಬೇಕಾದರೆ, ವಿದ್ಯಾರ್ಥಿಗಳಿಗೆ ಪ್ರಾಥಮಿಕ, ಪ್ರೌಢಶಿಕ್ಷಣದ ಬುನಾದಿ ಗಟ್ಟಿಯಾಗಿರಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ತುಂಬಾ ಶ್ರದ್ಧೆಯಿಂದ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಉತ್ತಮ ಫಲಿತಾಂಶಕ್ಕೆ ಪ್ರಯತ್ನಿಸಬೇಕು. ಶಿಕ್ಷಕರು ಆಧುನಿಕ ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಳ್ಳಲು ಎಐ, ರೋಬೋಟಿಕ್ಸ್ ಸೇರಿದಂತೆ ಇತರ ನಾವಿನ್ಯಪೂರ್ಣ ವಿಷಯಗಳನ್ನು ತಿಳಿದುಕೊಳ್ಳಬೇಕು. ಆ ಮೂಲಕ ತಮ್ಮನ್ನು ತಾವು ಉನ್ನತೀಕರಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ಶಿಕ್ಷಕ ವೃತ್ತಿ ಸಮಾಜ ಸೇವೆಯ ವೃತ್ತಿ ಆಗಿದೆ. ಶಿಕ್ಷಕರು ವಿದ್ಯಾರ್ಥಿಗಳ ಪ್ರೀತಿ ಗೆಲ್ಲುವವಲರಾಗಬೇಕು. ಉತ್ತಮ ಮನಸ್ಸು ಉಳ್ಳವರಾಗಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಶ್ರಮಿಸುವ ಮೂಲಕ ಸುಂದರ ಸಮಾಜ ರಾಷ್ಟ್ರ ನಿರ್ಮಾಣ ಮಾಡಬೇಕು’ ಎಂದು ತಿಳಿಸಿದರು‌.

‘ನಮ್ಮ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತಿವರ್ಷ ಶಿಕ್ಷಣಕ್ಕೆ ಹೆಚ್ಚುವರಿಯಾಗಿ ಶಿಕ್ಷಣ ಅವಿಷ್ಕಾರ ಯೋಜನೆ ಅಡಿಯಲ್ಲಿ ₹ 125 ಕೋಟಿ ಅನುದಾನ ನೀಡಲಾಗುತ್ತಿದೆ. 3 ವರ್ಷಗಳ ಅವಧಿಯಲ್ಲಿ ಬೀದರ್ ಜಿಲ್ಲೆಗೆ ಶಿಕ್ಷಣಕ್ಕಾಗಿ ಸುಮಾರು ₹400 ಕೋಟಿ ಅನುದಾನ ಒದಗಿಸಲಾಗಿದೆ. ವಿದ್ಯಾರ್ಥಿಗಳಿಗೆ ಶೋಷಣೆ ಮಾಡುವವರು ಯಾರಾದರೂ ಇದ್ದರೆ, ಅಂತಹವರ ಬಗ್ಗೆ ಗೌಪ್ಯವಾಗಿ ಸರ್ಕಾರದ ಗಮನಕ್ಕೆ ತರಬೇಕು. ಆ ಮೂಲಕ ಶಿಕ್ಷಕ ವೃತ್ತಿಯ ಘನತೆ, ಪಾವಿತ್ರ್ಯತೆ ಕಾಪಾಡಬೇಕು’ ಎಂದು ತಿಳಿಸಿದರು.

ಹಿರೇಮಠ ಸಂಸ್ಥಾನದ ಮಹಾಲಿಂಗ ಸ್ವಾಮೀಜಿ, ಅಣದೂರಿನ ವರಜ್ಯೋತಿ ಭಂತೆ, ಪ್ರೇರಣಾತಾಯಿ ಭೋಸ್ಲೆ ತೋರಣೆಕರ ಸಾನ್ನಿಧ್ಯ ವಹಿಸಿ ಮಾತನಾಡಿದರು. ಉಪ ನಿರ್ದೇಶಕ ಎಚ್.ಜಿ. ಸುರೇಶ ಪ್ರಾಸ್ತಾವಿಕ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ. ಹಳ್ಳದ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದತ್ತಾತ್ರಿ ಕಾಟಕರ ಶಿಕ್ಷಕರ ಬಗ್ಗೆ ಮಾತನಾಡಿದರು.

ಇದೇ ವೇಳೆ 29 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿ.ಪಂ ಸಿಇಒ ಡಾ.ಗಿರೀಶ ಬದೋಲೆ, ಪ್ರಮುಖರಾದ ಅಮೃತರಾವ ಚಿಮಕೋಡೆ, ಸೋಮಶೇಖರ ಬಿರಾದಾರ ಚಿದ್ರಿ, ರವೀಂದ್ರರೆಡ್ಡಿ ಮಾಲಿಪಾಟೀಲ, ಮಹಬೂಬ್ ಪಟೇಲ, ಶಶಿಕಲಾ ಸಿಂಧನಕೆರೆ, ವಿಜಯಕುಮಾರ ರಾಜಭವನ, ಹಣಮಂತರಾವ ಚವ್ಹಾಣ, ಶಿವಕುಮಾರ ಸದಾಫುಲೆ, ಪ್ರಶಾಂತ ರಾಗಾ, ಸೂರ್ಯಕಾಂತ ಪಾಟೀಲ, ಶಿವರಾಜ ಕಪಲಾಪುರೆ, ವೈಜಿನಾಥ ಸಾಗರ, ರಾಜಕುಮಾರ ಬಿರಾದಾರ, ಬಸವರಾಜ ಜಕ್ಕಾ, ಚಂದ್ರಶೇಖರ ಬನ್ನಾಳೆ, ರಾಜಕುಮಾರ ಜೋಳದಪಕೆ, ಅಶೋಕ ತಾಂಬೋಳೆ ಸೇರಿದಂತೆ ಅನೇಕರು ಹಾಜರಿದ್ದರು. ದೀಪಕ ಥಮಕೆ ನಿರೂಪಿಸಿದರು. ಮನೋಹರ ಹೊಳಕರ ವಂದಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಿಕ್ಷಕ ಸಿಬ್ಬಂದಿ
ಭಾಲ್ಕಿ ಪಟ್ಟಣದ ಪ್ರಯಾಗ ಫಂಕ್ಷನ್ ಹಾಲ್ ನಲ್ಲಿ ನಡೆದ ಜಿಲ್ಲಾ ಹಾಗೂ ಭಾಲ್ಕಿ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು
ಭಾಲ್ಕಿ ಪಟ್ಟಣದ ಪ್ರಯಾಗ ಫಂಕ್ಷನ್ ಹಾಲ್ ನಲ್ಲಿ ನಡೆದ ಜಿಲ್ಲಾ ಹಾಗೂ ಭಾಲ್ಕಿ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು

ಎನ್‍ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೆ ಕ್ರಮ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಅಗತ್ಯ ಮುಂದಿನ ಎರಡು ವರ್ಷದಲ್ಲಿ 40 ಲಕ್ಷ ಸಸಿ ನೆಡುವ ಗುರಿ

ಭಾಲ್ಕಿಯಲ್ಲಿ ಮುಂದಿನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದೊಳಗಾಗಿ ಸುಂದರ ಭವ್ಯ ಅತ್ಯಾಧುನಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ನಿರ್ಮಾಣ ಮಾಡಲಾಗುವುದು.
ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.