ADVERTISEMENT

ಬರ: ಶುದ್ಧ ಕುಡಿಯುವ ನೀರಿಗಾಗಿ ಜನರ ಅಲೆದಾಟ. ಟ್ಯಾಂಕರ್‌ ಮಾಲೀಕರಿಗೆ ಸಡಗರ

ಚಂದ್ರಕಾಂತ ಮಸಾನಿ
Published 20 ಮೇ 2019, 19:38 IST
Last Updated 20 ಮೇ 2019, 19:38 IST
ಔರಾದ್‌ ಪಟ್ಟಣದ ಖೂಬಾ ಗಲ್ಲಿಯಿಂದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದ ತಿರುವಿನಲ್ಲಿ ಇರುವ ತೆರೆದ ಬಾವಿಯಿಂದ ಕಲುಷಿತ ನೀರು ತುಂಬಿಕೊಳ್ಳುತ್ತಿರುವ ಜನ
ಔರಾದ್‌ ಪಟ್ಟಣದ ಖೂಬಾ ಗಲ್ಲಿಯಿಂದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದ ತಿರುವಿನಲ್ಲಿ ಇರುವ ತೆರೆದ ಬಾವಿಯಿಂದ ಕಲುಷಿತ ನೀರು ತುಂಬಿಕೊಳ್ಳುತ್ತಿರುವ ಜನ   

ಬೀದರ್‌: ಜಿಲ್ಲೆಯ ಜನ ಫೆಬ್ರುವರಿಯಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗುವುದನ್ನು ಅರಿತು ವಾಹನಗಳ ಮಾಲೀಕರು ತಮ್ಮ ಗಾಡಿಯಲ್ಲಿ ನೀರಿನ ಟ್ಯಾಂಕ್‌ಗಳನ್ನು ಇಟ್ಟು ನಗರ, ಪಟ್ಟಣ ಹಾಗೂ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ನೀರಿನ ವಹಿವಾಟು ನಡೆಸುವವರಿಗೆ ‘ಬರ’ ಸಡಗರವಾಗಿ ಪರಿಣಮಿಸಿದೆ.

ಔರಾದ್‌ ಪಟ್ಟಣ, ಗ್ರಾಮೀಣ ಹಾಗೂ ಬೀದರ್‌ ನಗರದಲ್ಲೇ ಜನ ನೀರಿನ ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ. ಔರಾದ್ ಪಟ್ಟಣದಲ್ಲಿ ತೆರೆದ ಬಾವಿಗಳಲ್ಲಿ ತುಂಬಿಕೊಂಡಿರುವ ಹೂಳು ತೆಗೆದರೂ ಸಮಸ್ಯೆ ಪರಿಹಾರ ಸಿಗುತ್ತದೆ. ಮಾಧ್ಯಮಗಳು ಮೂರು ತಿಂಗಳಿಂದ ವರದಿಗಳನ್ನು ಪ್ರಕಟಿಸುತ್ತಿದ್ದರೂ ಜಿಲ್ಲಾ ಆಡಳಿತ ಗಂಭೀರವಾಗಿಲ್ಲ. ತಾಲ್ಲೂಕು ಆಡಳಿತ ಇದ್ದೂ ಇಲ್ಲದ ಸ್ಥಿತಿಯಲ್ಲಿದೆ.

ಔರಾದ್‌ ತಾಲ್ಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸದ ಕಾರಣ ಔರಾದ್‌ನ ಓಲ್ಡ್‌ಗಂಜ್‌ ಹಾಗೂ ರಾಮನಗರ ನಿವಾಸಿಗಳು ಹಳೆಯ ಬಾವಿಗಳಲ್ಲಿನ ಕಲುಷಿತ ನೀರು ತುಂಬಿಕೊಂಡು ಹೋಗುತ್ತಿದ್ದಾರೆ.

ADVERTISEMENT

‘ಪಟ್ಟಣ ಪಂಚಾಯಿತಿಯವರು ಟ್ಯಾಂಕರ್‌ಗಳಿಂದ ನೀರು ಹಂಚುತ್ತಿದ್ದರೂ ರಟ್ಟೆಯಲ್ಲಿ ಕಸುವು ಇರುವವರು ಮಾತ್ರ ಕೊಡಗಳನ್ನು ತುಂಬಿಕೊಂಡು ಹೋಗುತ್ತಿದ್ದಾರೆ. ಬಲಹೀನರು ಅಲ್ಲಿ ಇಲ್ಲಿ ಅಲೆದಾಡಿ ನೀರು ಸಂಗ್ರಹಿಸುತ್ತಿದ್ದಾರೆ. ಕೆಲವರು ಗಳಿಸಿದ ಕೂಲಿಯನ್ನು ನೀರಿಗಾಗಿಯೇ ಖರ್ಚು ಮಾಡಬೇಕಾದ ಸ್ಥಿತಿ ಇದೆ’ ಎನ್ನುತ್ತಾರೆ ಔರಾದ್‌ನ ಓಲ್ಡ್‌ಗಂಜ್‌ ನಿವಾಸಿ ರಜಿಯಾ ಬೇಗಂ.

‘ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಹೇಳಲು ಹೋದಾಗ ಮಾರು ದೂರ ಹೋಗುತ್ತಿದ್ದಾರೆ. ಹಳೆಯ ಬಾವಿಗಳ ಹೂಳು ತೆಗೆಯಿರಿ ಎಂದು ನಾಲ್ಕು ವರ್ಷಗಳಿಂದ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದೇವೆ. ಸಹಾಯವಾಣಿ ನೆಪಮಾತ್ರಕ್ಕೆ ಇದೆ. ಜನರ ಸಮಸ್ಯೆ ಕೇಳುವವರಿಲ್ಲದ ಕಾರಣ ಹನಿ ನೀರು ಪಡೆಯಲು ಪಟ್ಟಣದ ನಾಗರಿಕರು ಹರಸಾಹಸ ಪಡಬೇಕಾಗಿದೆ’ ಎಂದು ಪಟ್ಟಣದ ನಿವಾಸಿ ಮಾರುತಿ ಬೋರೆ ಬೇಸರ ವ್ಯಕ್ತಪಡಿಸುತ್ತಾರೆ.

ಔರಾದ್ ಪಟ್ಟಣದಲ್ಲಿ ನಾಲ್ಕು ಸಾವಿರ ಲೀಟರ್‌ ನೀರು ₹ 800ಗೆ, ಒಂದು ಸಾವಿರ ಲೀಟರ್‌ ₹ 300 ಹಾಗೂ ಒಂದು ಕೊಡ ನೀರು ₹ 3ಗೆ ಮಾರಾಟವಾಗುತ್ತಿದೆ. ನೀರಿನ ವ್ಯವಹಾರ ತಾಲ್ಲೂಕಿನಲ್ಲಿ ಜೋರಾಗಿ ನಡೆದಿದೆ.

‘ಟ್ಯಾಂಕರ್‌ ನೀರು ವಿಳಂಬ ಮಾಡಿ ಕೊಡುತ್ತಿರುವುದಕ್ಕೆ ಖಾಸಗಿ ಟ್ಯಾಂಕರ್ ಮಾಲೀಕರ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಡುವಿನ ಒಳ ಒಪ್ಪಂದ ಕಾರಣವಾಗಿದೆ. ಜನ ಬೆಳಿಗ್ಗೆ ನೀರಿಗಾಗಿ ಪರದಾಡಿ ಅನಿವಾರ್ಯವಾಗಿ ಖಾಸಗಿಯವರಿಂದ ನೀರು ಖರೀದಿಸುತ್ತಿದ್ದಾರೆ. ಖಾಸಗಿಯವರು ನೀರು ಮಾರಾಟ ಮಾಡಿ ಹೋದ ಮೇಲೆ ಪಟ್ಟಣ ಪಂಚಾಯಿತಿಯವರು ಟ್ಯಾಂಕರ್‌ ನೀರು ಕೊಡುತ್ತಿದ್ದಾರೆ’ ಎಂದು ಸಾರ್ವಜನಿಕರು ಬಹಿರಂಗವಾಗಿ ಆರೋಪ ಮಾಡುತ್ತಿದ್ದಾರೆ.

‘ಖಾಸಗಿ ಟ್ಯಾಂಕರ್‌ ಮಾಲೀಕರು ನಾಲ್ಕು ತಿಂಗಳ ಅವಧಿಯಲ್ಲಿ ಟ್ಯಾಂಕರ್‌ ನೀರಿನ ದರವನ್ನು ದುಪ್ಪಟ್ಟು ಮಾಡಿದ್ದಾರೆ. ಟ್ಯಾಂಕರ್‌ ನೀರು ಬೇಕೆಂದರೆ ಮೊದಲೇ ಬುಕ್‌ ಮಾಡಬೇಕು. ಮಾಲೀಕರೊಂದಿಗೆ ಏರಿದ ಧ್ವನಿಯಲ್ಲಿ ಮಾತನಾಡಿದರೂ ನೀರು ಸಿಗುವುದಿಲ್ಲ. ಹೀಗಾಗಿ ಮೌನವಾಗಿರುವುದೇ ಉತ್ತಮ’ ಎಂದು ಗೃಹಿಣಿಯೊಬ್ಬರು ಹೇಳುತ್ತಾರೆ.

‘ಖಾಸಗಿ ಟ್ಯಾಂಕರ್‌ ಮಾಲೀಕರು ಎಲ್ಲಿಂದಲೋ ತಂದ ನೀರು ಪೂರೈಸಿ ಕೈತುಂಬ ಹಣ ಸಂಪಾದಿಸುತ್ತಿದ್ದಾರೆ.
41 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರುವ ಕಾರಣ ಜನ ಕೂಲಿ ಕೆಲಸಕ್ಕೂ ಹೋಗಲು ಸಾಧ್ಯವಾಗುತ್ತಿಲ್ಲ. ಆಪತ್ಕಾಲದ ಅನುಕೂಲಕ್ಕೆ ಸಂಗ್ರಹಿಸಿಟ್ಟ ಹಣವನ್ನು ನೀರಿಗಾಗಿ ಬಳಸಬೇಕಾಗುತ್ತಿದೆ’ ಎಂದು ಪಟ್ಟಣದ ವೃದ್ಧ ಬಸಪ್ಪ ಹೇಳುತ್ತಾರೆ.

‘ಪಟ್ಟಣ ಪಂಚಾಯಿತಿಗೆ ಸ್ಪರ್ಧಿಸಿರುವವರು ಮತಕ್ಕಾಗಿ ಇಲ್ಲದ ದೊಂಬರಾಟ ಮಾಡುತ್ತಿದ್ದಾರೆ. ಹಿಂದೆ ಹೀಗೆ ಮಾಡಿ ಗೆದ್ದವರು ಶಾಶ್ವತ ಪರಿಹಾರ ಹುಡುಕುವಲ್ಲಿ ವಿಫಲರಾಗಿದ್ದಾರೆ. ನೀರಿಗೂ ರಾಜಕೀಯ ಮಾಡಿದರೆ ಸಮಸ್ಯೆ ಇತ್ಯರ್ಥ ಹೇಗೆ ಸಾಧ್ಯ’ ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಪ್ರಶ್ನಿಸುತ್ತಾರೆ.

‘ಲೋಕಸಭೆ ಚುನಾವಣೆಯ ಫಲಿತಾಂಶದ ನಂತರವಾದರೂ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿ ಪಟ್ಟಣಕ್ಕೆ ಭೇಟಿ ಕೊಟ್ಟು ನೀರಿನ ಗಂಭೀರ ಸಮಸ್ಯೆ ಅರಿತುಕೊಳ್ಳಲಿ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.