ADVERTISEMENT

ವಸತಿ ಅಕ್ರಮಕ್ಕೆ ಜಿಲ್ಲಾಧಿಕಾರಿಯೇ ಹೊಣೆ: ಖಂಡ್ರೆ

​ಪ್ರಜಾವಾಣಿ ವಾರ್ತೆ
Published 23 ಮೇ 2020, 13:08 IST
Last Updated 23 ಮೇ 2020, 13:08 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೀದರ್‌: ವಸತಿ ಯೋಜನೆಯಲ್ಲಿ ನಡೆದಿದೆ ಎನ್ನಲಾದ ₹ 91 ಕೋಟಿ ಅಕ್ರಮಕ್ಕೆ ಜಿಲ್ಲಾಧಿಕಾರಿಯೇ ಹೊಣೆಯಾಗಿದ್ದಾರೆ. ವೈಯಕ್ತಿಕ ಹಾಗೂ ರಾಜಕೀಯ ದ್ವೇಷದಿಂದ ನನಗೆ ನೊಟೀಸ್ ಜಾರಿ ಮಾಡಿದ್ದಾರೆ ಎಂದು ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ 2015-16 ರಿಂದ 2018-19ರ ಅವಧಿಯಲ್ಲಿ ವಿವಿಧ ವಸತಿ ಯೋಜನೆಗಳಲ್ಲಿ ನಿಯಮ ಉಲ್ಲಂಘನೆ ಮಾಡಿ ₹ 91 ಕೋಟಿ ಅಕ್ರಮ ನಡೆಸಲಾಗಿದೆ ಎನ್ನುವುದಾದರೆ ಅದಕ್ಕೆ ಜಿಲ್ಲಾಧಿಕಾರಿ ಮಹಾದೇವ ಅವರೇ ಹೊಣೆ. ಇಷ್ಟೊಂದು ಹಣ ಎಲ್ಲಿಗೆ ಹೋಯಿತು, ಯಾರ ಖಾತೆಗೆ ಹೋಯಿತು ಎನ್ನುವ ಲೆಕ್ಕವನ್ನು ಅವರೇ ಜನತೆಗೆ ನೀಡಬೇಕು ಎಂದು ಹೇಳಿದ್ದಾರೆ.

ಗ್ರಾಮಸಭೆಯಲ್ಲಿ ವಿಡಿಯೊ ಚಿತ್ರೀಕರಣದ ಮೂಲಕ ಸಾರ್ವಜನಿಕರ ಸಮ್ಮುಖದಲ್ಲಿ ವಸತಿ ಯೋಜನೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಶಾಸಕರ ಅಧ್ಯಕ್ಷತೆಯ ನಗರ ಆಶ್ರಯ ಸಮಿತಿಯ ಸಭೆಯಲ್ಲಿ ಅಧಿಕಾರಿಗಳೇ ನೀಡುವ ಅರ್ಹ ಫಲಾನುಭವಿಗಳ ಪಟ್ಟಿಯೊಂದಿಗೆ ಮಾಡುವ ಶಿಫಾರಸುಗಳ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡುವ ಜವಾಬ್ದಾರಿ ಜಿಲ್ಲಾಧಿಕಾರಿಗಳದ್ದಾಗಿರುತ್ತದೆ ಎಂದು ತಿಳಿಸಿದ್ದಾರೆ.

ಮನೆ ಮಂಜೂರಾತಿ ಪತ್ರವನ್ನು ಪಂಚಾಯಿತಿ ಮಟ್ಟದಲ್ಲಿ ಪಿಡಿಒ ಮತ್ತು ಪುರಸಭೆ ಮಟ್ಟದಲ್ಲಿ ಪುರಸಭೆ ಮುಖ್ಯಾಧಿಕಾರಿ ನೀಡುತ್ತಾರೆ ಎನ್ನುವ ಸಾಮಾನ್ಯ ಜ್ಞಾನವೂ ಜಿಲ್ಲಾಧಿಕಾರಿಗೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

ವಸತಿ ಯೋಜನೆಯ ಮಂಜೂರಾತಿ ಆದೇಶ ಪತ್ರ ಆನ್‌ಲೈನ್‌ನಲ್ಲಿ ಜನರೇಟ್ ಆಗುತ್ತದೆ. ಅದನ್ನು ಸ್ವತಃ ಫಲಾನುಭವಿ ಆನ್‌ಲೈನ್‌ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು ಇಲ್ಲವೇ ಪುರಸಭೆ ಮಟ್ಟದಲ್ಲಿ ಪುರಸಭೆ ಮುಖ್ಯಾಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒಗಳು ನೀಡಬೇಕು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಮಧ್ಯವರ್ತಿಗಳು ವಸತಿ ಯೋಜನೆ ಲಾಭ ಕೊಡಿಸಲು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎನ್ನುವ ದೂರು ಬಂದಿದ್ದರಿಂದ ಯಾರಿಗೂ ಹಣ ಕೊಡಬೇಡಿ ಎಂದು ತಿಳಿವಳಿಕೆ ಪತ್ರ ಕಳುಹಿಸಿದ್ದೇನೆಯೇ ಹೊರತು ಕಾಮಗಾರಿಗೆ ಆದೇಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜೀವ ಗಾಂಧಿ ವಸತಿ ನಿಗಮದ ತನಿಖಾ ವರದಿಯಲ್ಲಿ ನನ್ನ ಹೆಸರು ಇಲ್ಲದಿದ್ದರೂ, ಯಾವ ಕಾನೂನಿನ ಅಡಿಯಲ್ಲಿ ನೀವು ನನಗೆ ನೋಟಿಸ್‌ ನೀಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದು ತೇಜೋವಧೆಯ ಹುನ್ನಾರ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ ಎಂದು ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

ನನ್ನ ವಿರುದ್ಧ 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತ ವ್ಯಕ್ತಿ ರಾಜಕೀಯ ದ್ವೇಷಕ್ಕಾಗಿ ಮೇ 11 ರಂದು ನೀಡಿರುವ ದೂರನ್ನು ಉಲ್ಲೇಖಿಸಿ, ಕೇವಲ ಒಂದು ವಾರದಲ್ಲಿ ತರಾತುರಿಯಲ್ಲಿ ನನಗೆ ನೋಟಿಸ್ ನೀಡಿರುವ ಜಿಲ್ಲಾಧಿಕಾರಿ ವೈಯಕ್ತಿಕ ದ್ವೇಷ ಮತ್ತು ರಾಜಕೀಯ ಪ್ರಭಾವಕ್ಕೆ ಒಳಗಾಗಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.

ನನಗೆ ನೋಟಿಸ್‌ ತಲುಪುವ ಮೊದಲೇ ಮಾಧ್ಯಮಗಳಿಗೆ ಬಹಿರಂಗ ಮಾಡಿರುವುದರ ಹಿಂದೆ ನನ್ನ ತೇಜೋವಧೆಯ ಷಡ್ಯಂತ್ರವಿದೆ. ಸುಳ್ಳು ಆರೋಪ ಮಾಡಿ ನನ್ನ ಘನತೆಗೆ ಕುಂದು ತಂದಿರುವ ಜಿಲ್ಲಾಧಿಕಾರಿ ತಕ್ಷಣ ಬೇಷರತ್ ಕ್ಷಮೆ ಕೋರದಿದ್ದರೆ, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.