ADVERTISEMENT

ಭಗವದ್ಗೀತೆ ಶ್ರೇಷ್ಠ ಗ್ರಂಥ: ಗುರುರಾಜ ಕರಜಗಿ

ಜನಸೇವಾ ಶಾಲೆಯಲ್ಲಿ ಭಗವದ್ಗೀತೆ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 12:27 IST
Last Updated 11 ಡಿಸೆಂಬರ್ 2021, 12:27 IST
ಬೀದರ್‌ನ ಜನಸೇವಾ ಶಾಲೆಯಲ್ಲಿ ನಡೆದ ಭಗವದ್ಗೀತೆ ಅಭಿಯಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಖ್ಯಾತ ಶಿಕ್ಷಣ ತಜ್ಞ ಗುರುರಾಜ ಕರಜಗಿ ಮಾತನಾಡಿದರು
ಬೀದರ್‌ನ ಜನಸೇವಾ ಶಾಲೆಯಲ್ಲಿ ನಡೆದ ಭಗವದ್ಗೀತೆ ಅಭಿಯಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಖ್ಯಾತ ಶಿಕ್ಷಣ ತಜ್ಞ ಗುರುರಾಜ ಕರಜಗಿ ಮಾತನಾಡಿದರು   

ಬೀದರ್: ಭಗವದ್ಗೀತೆ ಮನುಕುಲಕ್ಕೆ ಶ್ರೇಷ್ಠ ಗ್ರಂಥವಾಗಿದೆ ಎಂದು ಖ್ಯಾತ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ನುಡಿದರು.

ಇಲ್ಲಿಯ ಪ್ರತಾಪನಗರದ ಜನಸೇವಾ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಭಗವದ್ಗೀತೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಗವದ್ಗೀತೆ ಸತ್ಯ, ನ್ಯಾಯ, ನೀತಿ, ಧರ್ಮದ ಮಾರ್ಗ ತೋರುತ್ತದೆ ಎಂದು ಹೇಳಿದರು.

ಭಗವಾನ ಶ್ರೀಕೃಷ್ಣ ಅರ್ಜುನನಿಗೆ ಭಗವದ್ಗೀತೆ ಬೋಧಿಸಿದರು. ಅದರಲ್ಲಿ 18 ಅಧ್ಯಾಯ ಹಾಗೂ 700 ಶ್ಲೋಕಗಳು ಇವೆ ಎಂದು ತಿಳಿಸಿದರು.

ADVERTISEMENT

ಭಗವದ್ಗೀತೆಯ ಮೂರನೇ ಅಧ್ಯಾಯದ ಆರಂಭದಲ್ಲಿ ಸುದೀಪ ಎಂಬ ಅಕ್ಷರ ಇದೆ. ಸ್ವಶಕ್ತಿಯಿಂದ ಬೆಳಗುವುದು, ನಿರಂತರ ಬೆಳಗುವುದು, ಇತರ ದೀಪಗಳನ್ನೂ ಬೆಳಗಿಸುವುದು ಸುದೀಪದ ಅರ್ಥವಾಗಿದೆ ಎಂದು ಹೇಳಿದರು.

ಭಗವದ್ಗೀತೆಯ ಎಲ್ಲ ಅಧ್ಯಾಯ ಹಾಗೂ ಶ್ಲೋಕಗಳನ್ನು ಓದಿ ಅರ್ಥೈಸಿಕೊಳ್ಳಬೇಕು. ಯಾವ ಕ್ಷೇತ್ರದಲ್ಲಿದ್ದರೂ ಧರ್ಮದ ಮಾರ್ಗದಲ್ಲಿ ಸಾಗಬೇಕು. ಭಗವದ್ಗೀತೆ ಓದಿದ ಮಕ್ಕಳು ಸುಸಂಸ್ಕøತ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದು ತಿಳಿಸಿದರು.

ತಂದೆ-ತಾಯಿ ನಿಜವಾದ ದೇವರು. ಹೀಗಾಗಿ ಮಕ್ಕಳು ಎಂದೂ ಪಾಲಕರ ಕಣ್ಣಲ್ಲಿ ನೀರು ತರಿಸಬಾರದು. ಗುರು ಹಿರಿಯರೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು. ಮೊದಲು ಮನೆಯವರಿಗೆ ಒಳ್ಳೆಯವರಾಗಬೇಕು. ಜೀವಂತ ಇದ್ದಾಗ ಸಮಾಜಕ್ಕೆ ಕೊಡುಗೆ ನೀಡಬೇಕು. ಮರಣದ ನಂತರವೂ ಸಮಾಜಕ್ಕೆ ಉಪಕಾರಿ ಆಗುವಂಥ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.

ಜನಸೇವಾ ಶಾಲೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರವನ್ನೂ ಕಲಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಕ್ಕಳಿಗೆ ಭಗವದ್ಗೀತೆಯ ಮೂರನೇ ಅಧ್ಯಾಯದ ಸಾಮೂಹಿಕ ಪಠಣ ಮಾಡಿಸಲಾಯಿತು. ಜನಸೇವಾ ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯ ಬಿ.ಎಸ್. ಕುದುರೆ ಅಧ್ಯಕ್ಷತೆ ವಹಿಸಿದ್ದರು. ಗ್ಲೊಬಲ್ ಸೈನಿಕ ಅಕಾಡೆಮಿ ಅಧ್ಯಕ್ಷ ಶರಣಪ್ಪ ಸಿಕೇನಪುರೆ, ಶಾಲೆ ಆಡಳಿತಾಧಿಕಾರಿ ಸೌಭಾಗ್ಯವತಿ, ಸಾಗರ ಮಲಾನಿ ಉಪಸ್ಥಿತರಿದ್ದರು.

ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಸ್ವಾಗತಿಸಿದರು. ಮುಖ್ಯಶಿಕ್ಷಕ ಶಿವಾನಂದ ಮಲ್ಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.