ADVERTISEMENT

ರಂಗ ಕಲೆಗಳಿಗೆ ಪ್ರೋತ್ಸಾಹ ಅಗತ್ಯ: ರಜಿಯಾ ಬಳಬಟ್ಟಿ ಹೇಳಿಕೆ

ರಾಜ್ಯ ಮಟ್ಟದ ನಾಟಕೋತ್ಸವಕ್ಕೆ ಚಾಲನೆ: ಸಾಹಿತಿ ರಜಿಯಾ ಬಳಬಟ್ಟಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 15:16 IST
Last Updated 5 ಮಾರ್ಚ್ 2021, 15:16 IST
ಬೀದರ್‌ನ ಡಾ.ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರದಲ್ಲಿ ರಾಜ್ಯ ಮಟ್ಟದ ನಾಟಕೋತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾಹಿತಿ ರೂಪಾ ಪಾಟೀಲ ದೀಪ ಬೆಳಗಿಸಿದರು
ಬೀದರ್‌ನ ಡಾ.ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರದಲ್ಲಿ ರಾಜ್ಯ ಮಟ್ಟದ ನಾಟಕೋತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾಹಿತಿ ರೂಪಾ ಪಾಟೀಲ ದೀಪ ಬೆಳಗಿಸಿದರು   

ಬೀದರ್‌: ‘ಮಹಿಳೆಯರು ತಮ್ಮ ಊರುಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಾಹಿತ್ಯ, ಸಂಸ್ಕೃತಿ ಹಾಗೂ ರಂಗ ಕಲೆಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕು’ ಎಂದು ಸಾಹಿತಿ ರಜಿಯಾ ಬಳಬಟ್ಟಿ ಹೇಳಿದರು.

ಜನಪದ ಕಲಾವಿದರ ಬಳಗ, ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ನಾಟಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಂಜೆ ಹೊತ್ತಿನಲ್ಲಿ ಟಿವಿಯಲ್ಲಿ ಪ್ರಸಾರವಾಗುವ ಧಾರವಾಹಿಗಳು ಮಹಿಳೆಯರ ಮನಸ್ಸುಗಳನ್ನು ಹಿಡಿದಿಟ್ಟಿವೆ. ಇದೇ ಕಾರಣಕ್ಕೆ ಮಹಿಳೆಯರು ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಮನಸ್ಸು ಮಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ನಗರಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ನಮ್ಮ ಸಂಸ್ಕೃತಿಯ ಸ್ಥಿತಿಗತಿಯನ್ನೂ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಜ್ಞಾನ ಗಂಗಾ ವಿದ್ಯಾಪೀಠ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಹೇಡೆ ಮಾತನಾಡಿ, ‘ಬೀದರ್‌ನಲ್ಲಿ ಜನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಜನಪದ ಕಲಾವಿದರ ಬಳಗದ ವಿಜಯಕುಮಾರ ಸೋನಾರೆ ಹಾಗೂ ಕೆಲ ತಂಡಗಳು ಶ್ರಮಿಸುತ್ತಿವೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ರಂಗ ಕಲಾವಿದ ಚಂದ್ರಗುಪ್ತ ಚಾಂದಕವಟೆ ಮಾತನಾಡಿ, ‘ಹಳೆ ಬೇರುಗಳೊಂದಿಗೆ ಹೊಸ ಚಿಗರು ಬೆರೆತುಕೊಂಡಂತೆ ಜನಪದ ಸಾಹಿತ್ಯ, ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಜಿಲ್ಲೆಯ ಜನಪದ ಕಲಾವಿದರು ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಜಿಲ್ಲಾ ಜನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಾಟಕೋತ್ಸವದಲ್ಲಿ ಮೊದಲ ದಿನ ಶಿವಮೊಗ್ಗ ಜಿಲ್ಲೆಯ ಸಾಣೇಹಳ್ಳಿಯ ಶಿವ ಸಂಚಾರ ತಂಡದ ಕಲಾವಿದರು ‘ಜೀವ ಇದ್ದರೆ ಜೀವನ’ ನಾಟಕ ಪ್ರದರ್ಶಿಸಿದರು.

ಕರುನಾಡು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಗೌರವಾಧ್ಯಕ್ಷ ಸಂಜೀವಕುಮಾರ ಅತಿವಾಳೆ, ಸಾಹಿತಿ ರೂಪಾ ಪಾಟೀಲ, ಜನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ, ಸಾಣೇಹಳ್ಳಿಯ ಶಿವ ಸಂಚಾರ ತಂಡದ ಜೀವನಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಇದ್ದರು.

ಜೈ ಕರ್ನಾಟಕ ರಕ್ಷಣಾ ವೇದಿಕೆಯ ಉಪಾಧ್ಯಕ್ಷ ಶ್ರೀಮಂತ ಸಪಾಟೆ, ಅಂಬಿಗರ ಚೌಡಯ್ಯ ಯುವ ಸೇನೆ ಸಂಸ್ಥಾಪಕ ಸುನೀಲ ಭಾವಿಕಟ್ಟಿ, ರಂಗ ಕಲಾವಿದ ಮಹೇಶ ಪಾಟೀಲ ಇದ್ದರು. ಭಕ್ತಕುಂಬಾರ ನಿರೂಪಿಸಿದರು.

ನಾಟಕ:
ಜಿಲ್ಲಾ ರಂಗ ಮಂದಿರದಲ್ಲಿ ಮಾರ್ಚ್ 6ರಂದು ಸಂಜೆ 5 ಗಂಟೆಗೆ ಬಳ್ಳಾರಿ ಜಿಲ್ಲೆಯ ಪುರುಷೋತ್ತಮ ಹಂದ್ಯಾಳ ಮತ್ತು ತಂಡ ‘ದನ ಕಾಯುವವರ ದೊಡ್ಡಾಟ’ ನಾಟಕ ಪ್ರದರ್ಶಿಸಲಿದ್ದಾರೆ.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಸುನೀಲಕುಮಾರ ಎನ್.ಎಂ. ಉದ್ಘಾಟಿಸುವರು. ರಂಗ ಕಲಾವಿದ ಸಂಗಮೇಶ ನಾಶೀಗಾರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಶಿಂಧೆ ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.