ADVERTISEMENT

ಹುಲಸೂರ: ಕೃಷಿ ಮಾರುಕಟ್ಟೆ ಇಲ್ಲದಿರುವುದೇ ಸಂಕಷ್ಟ

ನೆರೆ ರಾಜ್ಯದ ಮಾರುಕಟ್ಟೆಗಳ ಜೊತೆ ರೈತರ ವಹಿವಾಟು

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 6:43 IST
Last Updated 21 ಜೂನ್ 2025, 6:43 IST
ಹುಲಸೂರ ಪಟ್ಟಣದ ಮುಖ್ಯ ರಸ್ತೆಯಿಂದ ಹಾಲಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿರುವ ಕೃಷಿ ಮಾರುಕಟ್ಟೆಯ ಕಟ್ಟಡವು ಪಾಳು ಬಿದ್ದಿದೆ
ಹುಲಸೂರ ಪಟ್ಟಣದ ಮುಖ್ಯ ರಸ್ತೆಯಿಂದ ಹಾಲಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿರುವ ಕೃಷಿ ಮಾರುಕಟ್ಟೆಯ ಕಟ್ಟಡವು ಪಾಳು ಬಿದ್ದಿದೆ   

ಹುಲಸೂರ: ಮುಂಗಾರು ಪೂರ್ವ ಕೃಷಿ ಚಟುವಟಿಕೆಗೆ ತಾಲ್ಲೂಕಿನ ರೈತರು ಸಜ್ಜಾಗುತ್ತಿದ್ದು, ಹಿಂಗಾರು ಹಾಗೂ ಮುಂಗಾರಿನ ಧಾನ್ಯಗಳನ್ನು ಮಾರುಕಟ್ಟೆಗೆ ತರುತ್ತಾರೆ. ಬರುವ ಆದಾಯದಲ್ಲಿ ಬೀಜ, ಗೊಬ್ಬರ ಖರೀದಿಸುತ್ತಾರೆ. ಆದರೆ, ಬೀಜ, ರಸಗೊಬ್ಬರ ಖರೀದಿ, ಭೂಮಿ ಹದಮಾಡಿಕೊಳ್ಳಲು ಸಂಗ್ರಹಿಸಿಟ್ಟಿದ್ದ ಧಾನ್ಯದ ಮಾರಾಟ ಮಾಡಬೇಕೆಂದಲ್ಲಿ ತಾಲ್ಲೂಕಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಇಲ್ಲದೆ ತಾಲ್ಲೂಕಿನ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

‘80ರ ದಶಕದಲ್ಲಿ ಪಟ್ಟಣದ ಮುಖ್ಯ ರಸ್ತೆಯಿಂದ ಹಾಲಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿ ಗ್ರಾಮಸ್ಥರಿಂದ ಹಣ ವಂತಿಕೆ ಸಂಗ್ರಹಿಸಿ ಸುಮಾರು 8 ಎಕರೆ ಜಮೀನು ಖರೀದಿಸಿ ಕೃಷಿ ಮಾರುಕಟ್ಟೆಗಾಗಿ (ಎಪಿಎಂಸಿ) ಕೊಡಲಾಗಿತ್ತು. ಬಳಿಕ ಎಪಿಎಂಸಿಯಿಂದ ಸ್ಥಳಕ್ಕೆ ಎನ್‌ಎ ಲೇಔಟ್ ಮಾಡಿ ದೇವನಾಳ, ಹಾಲಹಳ್ಳಿ, ಖಂಡಾಳ, ಬಸವಕಲ್ಯಾಣ ಸೇರಿ ವಿವಿಧ ಗ್ರಾಮದ 40 ಜನ ವರ್ತಕರಿಗೆ ಅಂಗಡಿ ತೆರೆಯಲು ಅವಕಾಶ ಕಲ್ಪಿಸಿದ್ದು, ರೈತರ ಉತ್ಪನ್ನಗಳ ಖರೀದಿಗೆ ಅನುಮತಿ ಕೊಟ್ಟಿಲ್ಲ. ಹೀಗಾಗಿ ಇಲ್ಲಿಯವರೆಗೆ ವರ್ತಕರು ಅಂಗಡಿಗಳು ತೆರೆದಿಲ್ಲ ಹಾಗೂ ಅದರ ನಿರ್ವಹಣೆ ಸರಿಯಾಗಿ ಆಗದೇ ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿದೆ’ ಎಂದು ವರ್ತಕ ಓಂಕಾರ ಪಟ್ನೆ ಹೇಳುತ್ತಾರೆ.

‘ಕೃಷಿ ಮಾರುಕಟ್ಟೆಗೆ ತನ್ನದೇ ಆದ ಜಮೀನು ಇದ್ದರೂ ಪಟ್ಟಣದಲ್ಲಿ ಪ್ರತಿ ಭಾನುವಾರ ನಡೆಯುವ ಸಂತೆಯನ್ನು ತರಕಾರಿ, ಹಣ್ಣು, ಬಟ್ಟೆ, ದಿನಸಿ ವ್ಯಾಪಾರಿಗಳು ಪಟ್ಟಣದ ಗಾಂಧಿ ವೃತ್ತದಲ್ಲಿ ನಡೆಸುವಂತಾಗಿದೆ. ಇದರಿಂದ ವಾಹನಗಳ ದಟ್ಟಣೆ ಉಂಟಾಗಿ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಎಪಿಎಂಸಿ ಮಾರುಕಟ್ಟೆ ಆರಂಭಿಸಿ ಅದರ ಒಳ ಆವರಣದಲ್ಲೇ ವ್ಯಾಪಾರ ನಡೆಸುವಂತಾಗಬೇಕು’ ಎಂದು ತರಕಾರಿ ಬೆಳಗಾರ ಮಲ್ಲಪ್ಪ ಒತ್ತಾಯಿಸಿದ್ದಾರೆ.

ADVERTISEMENT

‘ಪಟ್ಟಣ ಸೇರಿ ತಾಲ್ಲೂಕಿನಲ್ಲಿ ಒಟ್ಟು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಹಲವು ಬೆಳೆ ಬೆಳೆಯುತ್ತಿದ್ದು,  ಕೋಟಮಾಳ, ಹನುಮಂತವಾಡಿ, ಕಾದೆಪೂರ, ದೇವನಾಳ, ಮಾಚನಾಳ, ಮಿರಖಲ, ಸೋಲ ದಾಪಕ ಹಾಗೂ ಸಮೀಪದ ಹರೆವಾಡಿ, ಕೊಂಗಳಿ, ಹಲಸಿ ತುಗಾಂವ, ಶ್ರಿಮಾಳಿ, ಅಳವಾಯಿ, ಮೆಹಕರ ಸೇರಿ ಗಡಿ ಭಾಗದ ಹಲವು ಹಳ್ಳಿಗಳಲ್ಲಿನ ರೈತರು ಎಪಿಎಂಸಿ ಮಾರುಕಟ್ಟೆಯ ವ್ಯವಸ್ಥೆ ಇಲ್ಲದ ಕಾರಣ ನೆರೆ ರಾಜ್ಯದ ಮಹಾರಾಷ್ಟ್ರದ ಔರಾದ್‌ (ಶಾ), ಉದಗೀರ, ಲಾತೂರ ಹಾಗೂ ಹೈದರಾಬಾದ್‌ಗೆ ಉತ್ಪನ್ನಗಳನ್ನು ಕೊಂಡೊಯ್ಯಬೇಕು. ಇಲ್ಲಿಯೇ ಸುಸಜ್ಜಿತ ಎಪಿಎಂಸಿ ಮಾರುಕಟ್ಟೆ ನಿರ್ಮಿಸಿದರೆ ರೈತರಿಗೆ ಒಳ್ಳೆಯದು’ ಎಂದು ರೈತ ಸಂಘದ ಮುಖ್ಯಸ್ಥ ದೇವೇಂದ್ರ ಹಲಿಂಗೆ ಆಗ್ರಹಿಸುತ್ತಾರೆ.

ಎಪಿಎಂಸಿ ಮಾರುಕಟ್ಟೆಯಲ್ಲಿ 2005ರಿಂದ ಇಲ್ಲಿಯವರೆಗೆ ಸುಮಾರು 20 ವರ್ಷಗಳಿಂದ ಸಮಿತಿ ಇಲ್ಲದೆ ಅಧ್ಯಕ್ಷ ಹಾಗೂ ಸದಸ್ಯರ ಚುನಾವಣೆ ನಡೆದಿಲ್ಲ , ಶಾಸಕರ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ಅಭಿವೃದ್ಧಿಗಾಗಿ ಕಾದಿರುವ ಕೃಷಿ ಮಾರುಕಟ್ಟೆ ಜಮೀನಲ್ಲಿ ಮಾರುಕಟ್ಟೆಯ ಕಟ್ಟಡವು ಪಾಳು ಬಿದ್ದು ಮದ್ಯವ್ಯಸನಿಗಳ ತಾಣವಾಗಿದೆ ಮಾರ್ಪಟ್ಟಿದೆ. 

‘ಸರ್ಕಾರ ಮತ್ತು ಅದರ ಭಾಗವಾಗಿರುವ ಜನಪ್ರತಿನಿಧಿಗಳು ಪಟ್ಟಣದಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆ ನಿರ್ಮಿಸಲು ಕ್ರಮವಹಿಸಬೇಕು’ ಎಂದು ಪಟ್ಟಣದ ಹಿರಿಯರಾದ ಮಲ್ಲಪ್ಪಾ ಧಬಾಲೆ ಒತ್ತಾಯಿಸಿದರು.

ಕನ್ನಡ ನೆಲದಲ್ಲಿದ್ದು ಇಲ್ಲೇ ಅಗತ್ಯ ಸೌಲಭ್ಯ ಪಡೆದು ಸರ್ಕಾರಕ್ಕೆ ಮಾರುಕಟ್ಟೆ ಮೂಲಕ ತೆರಿಗೆ ಕಟ್ಟಬೇಕಾದ ನಾವು ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ವ್ಯವಹಾರಕ್ಕಾಗಿ ಮಹಾರಾಷ್ಟ್ರಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ.
– ಸತೀಶ ಹಿರೇಮಠ, ಮಾಜಿ ಅಧ್ಯಕ್ಷ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗಡಿಗೌಡಗಾಂವ
ಎಪಿಎಂಸಿಗೆ ವಿಶಾಲ ಸ್ಥಳದ ಅವಕಾಶವಿದ್ದು ಪಟ್ಟಣದಲ್ಲಿ ಶಾಶ್ವತ ಮಾರುಕಟ್ಟೆ ನಿರ್ಮಿಸಲು ಸರ್ಕಾರ ಹಾಗೂ ಸ್ಥಳೀಯ ಆಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು
– ಪ್ರವೀಣ ಕಾಡಾದಿ, ಸದಸ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹುಲಸೂರ
ಹುಲಸೂರ ಪಟ್ಟಣದಲ್ಲಿ ನಡೆಯುವ ವಾರದ ಸಂತೆಗೆ ಹತ್ತಾರು ಹಳ್ಳಿಗಳ 400ಕ್ಕೂ ಹೆಚ್ಚು ವ್ಯಾಪಾರಿಗಳು ಅಗತ್ಯ ವಸ್ತುಗಳನ್ನು ಮಾರುತ್ತಾರೆ. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದಲ್ಲಿ ತರಕಾರಿ ಮಾರುಕಟ್ಟೆಗೆ ಹೋಗಲು ಸಿದ್ಧರಿದ್ದೇವೆ.
– ಅಂಬಾದಾಸ, ತರಕಾರಿ ವ್ಯಾಪಾರಿ

ಮೂಲ ಸೌಕರ್ಯಗಳ ಕೊರತೆ

ಪಟ್ಟಣದ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳ ಒದಗಿಸುವಂತೆ ವರ್ತಕರು ಕೋರ್ಟ್‌ ಮೊರೆ ಹೋಗಿದ್ದಾರೆ. ಕೂಡಲೇ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ರೈತರು ಅಥವಾ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಸಂಪರ್ಕ ಗುಣಮಟ್ಟದ ರಸ್ತೆ ಚರಂಡಿ ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆ ಸೂಕ್ತ ಕಸ ವಿಲೇವಾರಿ ಶೌಚಾಲಯ ವ್ಯವಸ್ಥೆ ಸೇರಿ ಹಲವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು ನಿಯಮಿತವಾಗಿ ನಿರ್ವಹಣೆಯ ಕೊರತೆಯೂ ಕಂಡುಬಂದಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ವರ್ತಕರು ಆಗ್ರಹಿಸಿದ್ದಾರೆ.

‘ನೆರೆ ರಾಜ್ಯದಲ್ಲಿ ಶೇ 10 ಕಮಿಷನ್‌’

ತಾಲ್ಲೂಕಿನ ರೈತರು ಕಷ್ಟಪಟ್ಟು ತಾವು ಬೆಳೆದ ಉತ್ಪನ್ನಗಳನ್ನು ನೆರೆ ರಾಜ್ಯ ಮಹಾರಾಷ್ಟ್ರದ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಅಲ್ಲಿ ದಲ್ಲಾಳಿಗಳ ಹಾವಳಿ ವಿಪರೀತವಾಗಿದೆ. ಮದ್ಯವರ್ತಿಯಿಲ್ಲದೇ ಒಂದೇ ಒಂದು ತರಕಾರಿಯನ್ನೂ ಮಾರಾಟ ಮಾಡಲು ಸಾಧ್ಯವಿಲ್ಲ. ದಲ್ಲಾಳಿಗಳಿಗೆ ಬರುವ ಆದಾಯದಲ್ಲಿ ಶೇ 10ರಷ್ಟು ಕಮಿಷನ್‌ ಕೊಡುವುದು ಕಡ್ಡಾಯ. ಹೀಗಾಗಿ ಕಷ್ಟಪಡುವುದು ರೈತರು ಲಾಭ ಮಾಡಿಕೊಳ್ಳುವುದು ದಲ್ಲಾಳಿಗಳು ಎಂಬಂತಾಗಿದೆ ಎಂದು ರೈತರು ಅಲವತ್ತುಕೊಳ್ಳುತ್ತಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.