ADVERTISEMENT

ಸಂವಿಧಾನಾತ್ಮಕ ಹಕ್ಕು ಕೊಡದವರು ಅಪರಾಧಿಗಳು: ಬಿ.ಡಿ.ಹಿರೇಮಠ

ಬೇಡಜಂಗಮ ಹಕ್ಕೊತ್ತಾಯ ರಾಜ್ಯಮಟ್ಟದ ಸಮಾವೇಶದಲ್ಲಿ ಬಿ.ಡಿ.ಹಿರೇಮಠ ಕಿಡಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 15:14 IST
Last Updated 7 ಫೆಬ್ರುವರಿ 2021, 15:14 IST
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಬೇಡಜಂಗಮ ಹಕ್ಕೊತ್ತಾಯ ಸಮಾವೇಶದಲ್ಲಿ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಬಿ.ಡಿ.ಹಿರೇಮಠ ಮಾತನಾಡಿದರು
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಬೇಡಜಂಗಮ ಹಕ್ಕೊತ್ತಾಯ ಸಮಾವೇಶದಲ್ಲಿ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಬಿ.ಡಿ.ಹಿರೇಮಠ ಮಾತನಾಡಿದರು   

ಬಸವಕಲ್ಯಾಣ (ಬೀದರ್ ಜಿಲ್ಲೆ): `ಬೇಡ ಜಂಗಮ ಜಾತಿ ಈ ಮೊದಲೇ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಪರಿಗಣಿತವಾಗಿದೆ ಆದ್ದರಿಂದ ಇದನ್ನು ಪಡೆಯುವುದು ನಮ್ಮ ಹಕ್ಕು. ಇದರಿಂದ ವಂಚಿತಗೊಳಿಸುವುದು ಅಪರಾಧ ಆಗುತ್ತದೆ' ಎಂದು ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಬಿ.ಡಿ.ಹಿರೇಮಠ ಹೇಳಿದರು.

ನಗರದ ಬಿಕೆಡಿಬಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಬೇಡ ಜಂಗಮ ಸಂವಿಧಾನಾತ್ಮಕ ಹಕ್ಕೊತ್ತಾಯ ರಾಜ್ಯ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

`ರಾಜ್ಯದಲ್ಲಿ 45 ಸಾವಿರ ಬೇಡಜಂಗಮರು ಇದ್ದಾರೆ. ರಾಜಕೀಯದಲ್ಲಿ ಬದಲಾವಣೆ ತರುವ ಶಕ್ತಿ ಈ ಸಮುದಾಯಕ್ಕಿದೆ. ಬೇಡಜಂಗಮ ಜಾತಿ ಬಗ್ಗೆ ದಾಖಲೆ, ಪುರಾವೆ, ಸರ್ಕಾರದ ಸುತ್ತೋಲೆಗಳಿವೆ. ನ್ಯಾಯಾಲಯದ ತೀರ್ಪುಗಳು ಕೂಡ ಪರವಾಗಿವೆ. ಆದರೂ ಶಾಸಕಾಂಗದವರು ಕಾರ್ಯಾಂಗದ ಮೇಲೆ ಒತ್ತಡ ಹೇರಿ ಬೇಡಜಂಗಮ ಜಾತಿ ಪ್ರಮಾಣಪತ್ರ ನೀಡುತ್ತಿಲ್ಲ. ಈಗ ನಮಗೆ ನಮ್ಮ ಹಕ್ಕು ಏನೆಂಬುದು ಗೊತ್ತಾಗಿದೆ. ಅದನ್ನು ಪಡೆದೇ ಪಡೆಯುತ್ತೇವೆ. ಕಾನೂನಾತ್ಮಕ ಹಾಗೂ ಸಂಘಟನಾತ್ಮಕವಾಗಿ ಹೋರಾಟ ನಡೆಸುತ್ತೇವೆ’ ಎಂದರು.

ADVERTISEMENT

‘ಫೆಬ್ರುವರಿ 19 ರಂದು ಚನ್ನಗಿರಿಯಲ್ಲಿ ಅಂತಿಮ ಸಮಾವೇಶ ನಡೆಸುತ್ತೇವೆ. ಆದಾಗ್ಯೂ ಪ್ರಮಾಣಪತ್ರ ದೊರಕಿಸಿ ಕೊಡದಿದ್ದರೆ ವಿಧಾನಸೌಧ ಲೋ ಹಮ್ಮಿಕೊಳ್ಳುತ್ತೇವೆ, ಅಮರಣ ಸತ್ಯಾಗ್ರಹ ನಡೆಸುತ್ತೇವೆ' ಎಂದು ಎಚ್ಚರಿಸಿದರು.

`ಈ ನೆಲದಲ್ಲಿ ಬಸವಣ್ಣನವರು ಸಮಾನತೆಗಾಗಿ ಕ್ರಾಂತಿಗೈದಿದ್ದಾರೆ. ಈಗ ನ್ಯಾಯಬದ್ಧ ಹಕ್ಕಿಗಾಗಿ ಚಳವಳಿಯನ್ನು ಇಲ್ಲಿಂದ ಆರಂಭಿಸುತ್ತಿದ್ದೇವೆ. ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ಕುರುಬರು, ಪಂಚಮಸಾಲಿಗಳು ಹಾಗೂ ಇತರೆ ಜಾತಿ, ಸಮುದಾಯದವರಿಗೂ ಸಂವಿಧಾನಾತ್ಮಕವಾದ ಹಕ್ಕು ದೊರಕಿಸುವುದಕ್ಕೆ ನಮ್ಮ ಬೆಂಬಲವಿದೆ. ರೈತ ದೇಶಕ್ಕೆ ಅನ್ನ ನೀಡುತ್ತಾನೆ. ಜಂಗಮ ಧರ್ಮ, ನೀತಿಯ ಪಾಲನೆ ಮಾಡುತ್ತಾನೆ. ಅಯ್ಯಾಚಾರ ದೀಕ್ಷೆ ಹೊಂದಿದವನು ಪ್ರತಿಯೊಬ್ಬನು ಬೇಡ ಜಂಗಮ ಆಗಿದ್ದಾನೆ' ಎಂದು ಹೇಳಿದರು.

ನಿವೃತ್ತ ಐಜಿಪಿ ಜ್ಯೋತಿಪ್ರಕಾಶ ಮಿರ್ಜಿ, ತಡೋಳಾ ರಾಜೇಶ್ವರ ಶಿವಾಚಾರ್ಯರು, ಕೊಳದ ಮಠದ ಶಾಂತವೀರ ಶಿವಾಚಾರ್ಯರು, ಡಾ.ಬಸವರಾಜಸ್ವಾಮಿ ತ್ರಿಪುರಾಂತ, ಅಂದೋಲಾ ಸಿದ್ಧಲಿಂಗ ಸ್ವಾಮೀಜಿ, ಶ್ರೀಕಾಂತಸ್ವಾಮಿ ಸೊಲಪುರ, ಹೇಮಲತಾ ಹಿರೇಮಠ, ಸಿದ್ದಯ್ಯ ಮರ್ಪಳ್ಳಿ ಮಾತನಾಡಿದರು.

ಭಾತಂಬ್ರಾ ಶಿವಯೋಗೇಶ್ವರ ಸ್ವಾಮೀಜಿ, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಗೋರಟಾ ಡಾ.ರಾಜಶೇಖರ ಶಿವಾಚಾರ್ಯರು, ಹಿರೇನಾಗಾಂವ ಜಯಶಾಂತಲಿಂಗ ಸ್ವಾಮೀಜಿ, ಶರಣಬಸವರಾಜ ಸ್ವಾಮಿ, ಬೇಲೂರ ಚಿದ್ಘನಲಿಂಗ ಶಿವಾಚಾರ್ಯರು ಪಾಲ್ಗೊಂಡಿದ್ದರು. ಸಮಾವೇಶ ಆರಂಭಕ್ಕೂ ಮೊದಲು ಸಂವಿಧಾನದ ಪ್ರತಿ, ಬಸವಣ್ಣನವರ ಹಾಗೂ ರೇಣುಕಾಚಾರ್ಯರ ಪ್ರತಿಮೆಗಳ ಪೂಜೆ ನೆರವೇರಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ಜನರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.