ಬೀದರ್: ನಗರ ಹಾಗೂ ತಾಲ್ಲೂಕಿನಾದ್ಯಂತ ಭಾನುವಾರ ಮಧ್ಯಾಹ್ನ ಸುಮಾರು ಮೂರು ತಾಸು ಬಿರುಸಿನ ಮಳೆ ಸುರಿಯಿತು.
ಬೆಳಿಗ್ಗೆಯಿಂದ ಕಾರ್ಮೋಡ ಕವಿದಿತ್ತು. ಗುಡುಗು ಸಹಿತ ಬಿರುಸಿನ ಮಳೆಯಿಂದ ನಗರದ ಹಾರೂರಗೇರಿ ಕಮಾನ್, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತದ ರೈಲ್ವೆ ಅಂಡರ್‌ಪಾಸ್, ರಾಮ್ ಚೌಕ್, ಮೈಲೂರ್ ಕ್ರಾಸ್, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿತು. ಇದರಿಂದ ವಾಹನ ಸವಾರರು, ಪಾದಚಾರಿಗಳು ಪರದಾಟ ನಡೆಸಿದರು.
ಭಾನುವಾರ ರಜಾ ದಿನವಾಗಿದ್ದರಿಂದ ಬೆಳಿಗ್ಗೆ ಹೆಚ್ಚಿಗೆ ಜನರ ಓಡಾಟವಿರಲಿಲ್ಲ. ಆದರೆ, ಮಧ್ಯಾಹ್ನ ಉದ್ಯಾನ, ದೇವಸ್ಥಾನ ಸೇರಿದಂತೆ ಇತರೆ ಕಡೆಗಳಿಗೆ ಕುಟುಂಬ ಸದಸ್ಯರೊಂದಿಗೆ ತೆರಳಿದ್ದರು. ಆದರೆ, ಜೋರು ಮಳೆಗೆ ಎಲ್ಲವೂ ಅಸ್ತವ್ಯಸ್ತಗೊಂಡಿತು. ಅನೇಕರು ಮಳೆಯಲ್ಲೇ ನೆನೆದುಕೊಂಡು ಮನೆಗೆ ವಾಪಸಾದರು.
ತಾಲ್ಲೂಕಿನ ಅಮಲಾಪೂರ, ಚಿಟ್ಟಾ, ಘೋಡಂಪಳ್ಳಿ, ಯಾಕತಪೂರ, ಯದಲಾಪೂರ, ಗೋರನಳ್ಳಿ, ಗುನ್ನಳ್ಳಿ, ಶಹಾಪುರ, ಮಲ್ಕಾಪೂರ ಸೇರಿದಂತೆ ಹಲವೆಡೆ ಮಳೆಯಾಗಿರುವುದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.